ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಸ್ನೇಹಿತರೆ ,ನಾವೆಲ್ಲರು ಸಮಾಜದಲ್ಲಿ ಒಂದು ಅಸ್ತಿತ್ವಕ್ಕೆ ಬರುವಂತಹ ಕಾಲವೆಂದರೆ ಈ ಹದಿನಾರರ ವಯಸ್ಸಿನ ನಂತರ. ಯಾವುದೇ ಕ್ಷೇತ್ರದ ಆಯ್ಕೆಯಲ್ಲಿ ,ಇನ್ಯಾವುದೋ ನಮ್ಮ ಅಭಿರುಚಿಗಳನ್ನು ಪಡೆದುಕೊಳ್ಳುವಲ್ಲಿ ನಮ್ಮ ತೀರ್ಮಾನಗಳು ಗೊಂದಲಮಯಕ್ಕೆ ಸಿಲುಕುವುದು ಸಹಜ.ಹಾಗೂ ಇದಕ್ಕೆ ಪೂರ್ವಪೀಡಿತವಾಗಿ ಕುಟುಂಬ, ಸ್ನೇಹಿತರು,ಸಮುದಾಯ ಪ್ರಭಾವ ಬೀರಿರುತ್ತದೆ. ಆದರೂ ನಾವು ಹೆದರಬೇಕಿಲ್ಲ ಮತ್ತು ಖಿನ್ನರಾಗಬೇಕಿಲ್ಲ. ಏಕೆಂದರೆ ಎಷ್ಟೆಷ್ಟೋ ಸಾಧಕರ ಜೀವನ ಚರಿತ್ರೆ, ಆತ್ಮ ಚರಿತ್ರೆ ನಮ್ಮ ಮುಂದಿದೆ ಅವರು ದಾಟಿರುವ ಜೀವನವೇ ನಮಗೆ ಎದುರಾಗಿರುತ್ತದೆ ,ಅವರಿಗಿಲ್ಲದ ಈ ಚರಿತ್ರೆಗಳು ನಮಗೆ ಮಾರ್ಗದರ್ಶನದಂತಾಗಿ ಅವರ ಬದುಕು ನಮಗೆ ಒಂದು ಉಡುಗೊರೆಯಾಗಿ ದೊರೆತಿದೆ. ನಾವು ಅದೃಷ್ಟವಂತರು.ಎಲ್ಲವೂ ಒಳ್ಳೆಯದಾಗುತ್ತೆ ಯೋಚಿಸಿರಿ ಯೋಜಿಸಿರಿ ಕಾರ್ಯರೂಪಕ್ಕೆ ಬನ್ನಿ ಆದರೆ ಚಿಂತಿಸದಿರಿ.
ನಿಮಗೆ ನನ್ನ ಬದುಕಿನ ಅನುಭವದ ಒಂದು ಘಟನೆಯನ್ನು ಉದಾಹರಣೆ ನೀಡಲು ಇಷ್ಟಪಡುತ್ತೇನೆ. ನಾನು ಬಿ ಎ ಪದವಿ ಮುಗಿದ ನಂತರ ನನ್ನ ಮುಂದಿನ ಆಯ್ಕೆ ಬಿ.ಇಡಿ ಮಾಡುವುದಾಗಿ ತೀರ್ಮಾನಿಸಿದ್ದೆ .ಈ ನಿರ್ಧಾರಕ್ಕೆ ಕಾರಣ ಏನೆಂದರೆ ನನ್ನ ಈ ಪದವಿಗೆ ವೃತ್ತಿಪರ ಶಿಕ್ಷಣ ತರಬೇತಿ ಒಂದು ದೊರೆತರೆ ನಾನು ಬಹುಬೇಗ ಉದ್ಯೋಗಸ್ಥನಾಗಬಹುದು, ಹಾಗೆ ನನ್ನ ಕುಟುಂಬಕ್ಕೆ ನಾನು ಹೊರೆಯಾಗಿರುವುದರಿಂದ ತಪ್ಪಿಸಿಕೊಳ್ಳಬಹುದು ಎಂದು ಯೋಜಿಸಿದೆ.ಹಾಗು ಬಿ.ಎ ಪದವಿ ಮುಗಿದ ನಂತರ ಆರು ತಿಂಗಳುಗಳ ಸಮಯ ಇರುತ್ತೆ ಬಿ.ಇಡಿ ಪ್ರವೇಶಾತಿಗೆ. ಆ ಸಮಯದಲ್ಲಿ ನಾನು ಯಾವುದೇ ಉದ್ಯೋಗ ಹರಸಿ ಹೋಗಲಿಲ್ಲ ಏಕೆಂದರೆ ನನಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಎದುರಾಗಿತ್ತು, ಚಿಕಿತ್ಸೆಗೂ ಹಣದ ಸಮಸ್ಯೆ ಕಾಡಿತ್ತು.ಇದರ ಜೊತೆಗೆ ಕುಟುಂಬದ ಆರ್ಥಿಕ ಪರಿಸ್ಥಿತಿ ಇಳಿಮುಖ ವಾಗಿತ್ತು,ಇಂತಹ ಸಮಯದಲ್ಲಿ ನಾನು ದೈಹಿಕ ವಾಗಿ ಹಾಗೂ ಮಾನಸಿಕವಾಗಿ ಬಹಳ ನೊಂದುಹೋದೆ.ಹೇಗೋ ಆ ನೋವಿನಲ್ಲೇ ಕಾಲ ಕಳೆಯಿತು ಹಾಗೂ ಬಿ.ಇಡಿ ಪ್ರವೇಶಾತಿಗೆ ಸಮಯವೂ ಒದಗಿ ಬಂತು. ಆದರೆ ಮತ್ತೊಂದು ಸಮಸ್ಯೆ ಎದುರಾಯಿತು. ಹತ್ತು ತಿಂಗಳು ಇದ್ದ ಕೋಸ್೯ ಎರಡು ವಷ೯ವೆಂದು ಶಿಕ್ಷಣ ಇಲಾಖೆ ಘೋಷಿಸಿತು.ಬಹುಬೇಗ ಉದ್ಯೋಗ ಹೊಂದಬಹುದು ಎನ್ನುವ ನನ್ನ ಆಸೆಗೆ ಇನ್ನೂ ಒಂದು ವರ್ಷ ಅಧಿಕವಾಯಿತು.
ಮನೆಯಲ್ಲಿ ಆರ್ಥಿಕ ಸಮಸ್ಯೆಯಿಂದ ಕೆಲಸಕ್ಕೆ ಹೋಗು ನೀನು ಬಿ.ಇಡಿ ಮಾಡಲು ಹೋದರೆ ತುಂಬಾ ಹಣಬೇಕು,ಹಾಗೂ ಎರಡುವರ್ಷ ಬಿ.ಇಡಿ ಮಾಡಿ ಗೌರ್ಮೆಂಟ್ ಕೆಲಸವನ್ನ ಕೊಡತ್ತಾರ ನಿನಗೆ, ಅದಕ್ಕೂ ತುಂಬಾ ಶ್ರಮ ಪಡಬೇಕು.ಈ ಸಮಯದಲ್ಲಿ ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳುತ್ತೇವೆ ಎಂಬ ಮಾತು ಕುಟುಂಬದವರಿಂದ ಇದ್ದ ಸನ್ನಿವೇಶಕ್ಕೆ ಅನುಗುಣವಾಗಿ ಬಂತು ಆದರೆ ಆ ಸಮಯಕ್ಕೆ ಕುಟುಂಬದವರ ಆಲೋಚನೆ ಸರಿಯೇ ಇತ್ತು. ನಾನು ಶಿಕ್ಷಕನಾಗುವ ಆಸೆ ಹೊತ್ತು ನಿಂತಿದ್ದೆ ಆದ ಕಾರಣ ನನ್ನ ಬಿ.ಇಡಿ ಅಧ್ಯಯನಕ್ಕೆ ಹೆಚ್ಚು ಹಣ ತೆರಬೇಕಾಗಿಲ್ಲ ನನ್ನ ಅಂಕಗಳಿಗೆ ಬಿ.ಇಡಿಗೆ ಉಚಿತ ಪ್ರವೇಶಾತಿ ಸಿಗುತ್ತೆ ಎಂದು ಏನೋ ಧನಾತ್ಮಕ ಸಬೂಬು ಹೇಳಿ ಎಲ್ಲರ ಮನ ಒಲಿಸಿದೆ.ಹಾಗೂ ಬಿ.ಇಡಿ ಕೋರ್ಸಿಗೆ ಅಜಿ೯ ಸಲ್ಲಿಸಿದೆ,ಸೀಟ್ ಕೂಡ ಪ್ರಕಟಣೆ ಆಯಿತು.ಇಲ್ಲೇ ನೋಡಿ ನನ್ನ ದುಡುಕಿನ ಮೊದಲ ಹೆಜ್ಜೆ ಆರಂಭವಾದದ್ದು.
ಕಷ್ಟದ ದಿನಗಳು ತೆರದುಕೊಂಡದ್ದು.ಸಾಮಾನ್ಯ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ ಹಾಗೂ ಕಾಯ್ದಿರಿಸಿದ ಪಟ್ಟಿಯಲ್ಲೂ ಇಲ್ಲ.ಆಗ ಮತ್ತಷ್ಟು ಗಾಬರಿಗೊಂಡು ನನ್ನ ಸಹೋದರನ ಒಡಗೂಡಿ ಅರ್ಜಿ ಹಾಕಿದ ಕಂಪ್ಯೂಟರ್ ಆಪರೇಟರ್ ನ ಬಳಿಹೋಗಿ ದೊಡ್ಡ ಬೊಬ್ಬೆ ಹೊಡೆದೆ,ಆತ ತಾಳ್ಮೆಯಿಂದ ಇರಿ ಎಂದು ಮತ್ತೊಮ್ಮೆ ಹುಡುಕಿದಾಗಲೇ ಗೊತ್ತಾಗಿದ್ದು ನಾನು ಮತ್ತು ಆತ ಸೇರಿ ಮಾಡಿದ ಎಡವಟ್ಟು.ಅರ್ಜಿ ಸಲ್ಲಿಸುವಾಗ ಸ್ಪೋರ್ಟ್ಸ್ ಕೋಟಾ ಎಂದು ಆತ ಕೇಳಿದಕ್ಕೆ ತಿಳಿಯದವನಾಗಿ ಆಟ ಆಡುವೆ ಎಂದು ನಾನು ಉತ್ತರಿಸಿ.ಅವನು ಅದನ್ನು ಅಯ್ಕೆ ಮಾಡಿದ್ದಾನೆ.
ನಂತರ ನೋಡಿದರೆ ವೀಶೆಷ ಮೀಸಲಾತಿಯಡಿಯಲ್ಲಿ ಬೆಂಗಳೂರಿನ ಯಾವುದೋ ಬಹುದೊಡ್ಡ ಕಾಲೇಜಿಗೆ ನಾನು ಆಯ್ಕೆಯಾಗಿದ್ದೆ.ಆದರೆ ನನ್ನ ಬಳಿ ಯಾವುದೇ ಜಿಲ್ಲೆ,ರಾಜ್ಯಮಟ್ಟದ ಕ್ರೀಡಾ ಪ್ರಶಸ್ತಿ ಪತ್ರಗಳು ಇಲ್ಲದ ಕಾರಣ ಪ್ರವೇಶಾತಿ ಸಿಗಲಿಲ್ಲ.ಮನೆಯಲ್ಲಿ ಈ ವಿಚಾರದ ಬಗ್ಗೆ ದೊಡ್ಡ ಮಾತೇ ನಡೆಯಿತು ನೆಮ್ಮದಿ ಹದಗೆಟ್ಟಿತು.ನಂತರ ನನ್ನ ತಾಯಿಯೊಂದಿಗೆ ಮೈಸೂರಿನ ಡಯೆಟ್(ವಸಂತ್ ಮಹಲ್)ಗೆ ಬಂದೆ.ಆದರೆ ಅಲ್ಲಿ ಪರಿಪೂರ್ಣ ಮಾಹಿತಿ ನನಗೆ ದೊರಕಲಿಲ್ಲ, ಅಲ್ಲಿರುವ ಅಧಿಕಾರಿವರ್ಗದವರೂ ಸಹ ಸಮಯೋಚಿತ ದೈರ್ಯದ ಮತ್ತು ಸಲಹೆಗಳನ್ನು ನೀಡಲಿಲ್ಲ. ನನ್ನ ತಾಯಿ ಎದುರಿಗೆ ಇದೇ ಕೊನೆಯ ಪ್ರಕಟಣೆ ದ್ವಿತೀಯ ಆಯ್ಕೆಪಟ್ಟಿ ಬಿಡುವುದಿಲ್ಲ ಯಾವುದಾದರೂ ಖಾಸಗಿ ಕಾಲೇಜುಗಳನ್ನ ನೋಡಿಕೊಳ್ಳಿ ಇಲ್ಲವೇ ಬೆಂಗಳೂರಿನಲ್ಲಿ ನಡೆಯುವ ಕೌನ್ ಸೀಲಿಂಗ್ (ಸಮಾಲೋಚನೆ)ಹಾಜರಾಗಿ ಎಂದು ನುಡಿದುಬಿಟ್ಟರು.ನನ್ನ ತಾಯಿಯಿಂದ ನನಗೆ ಅಲ್ಲಿಂದಲೇ ಬೈಗುಳ ಆರಂಭವಾಯಿತು ,ಏನಾದರೂ ಆಗು ಇದೆಲ್ಲಾ ನಿನ್ನ ಹಣೆಬರಹ ಎಂದರು.
ಒಂದು ಅರ್ಜಿಯನ್ನು ಸರಿಯಾಗಿ ತುಂಬದೇ ಈ ರೀತಿ ಮಾಡಿಕೊಂಡೆಯಲ್ಲ ,ಖಾಸಗಿ ಶಾಲೆಗೆ ಎಲ್ಲಿಂದ ಅಷ್ಟೊಂದು ದುಡ್ಡು ಕಟ್ಟೋದು ನಿನ್ನ ಜೀವನವೇ ಇಷ್ಟು ಮಹಾ ಎಡವಟ್ಟುಗಳ ಆಗರವೆಂದು ದೂರುತ್ತ ಮನೆಯ ಕಡೆ ಕರೆತಂದರು.ಮತ್ತೆ ಮನೆಯಲ್ಲಿ ಈ ವಿಚಾರವಾಗಿ ಜಗಳ ನನಗೆ ಬೈಗುಳ ಹೆಚ್ಚಾಯಿತು. ಮುಂದಿರುವ ಬಿ.ಇಡಿ ಸಮಾಲೋಚನೆಗೆ ದುಡುಕಿ ಮುಂಚಿತವಾಗಿಯೇ ಕಳುಹಿಸಿದರು,ಬೆಂಗಳೂರು ನನಗೆ ಹೊಸತು ,ಸಮಾಲೋಚನೆ ಸ್ಥಳ ಹುಡುಕುವುದರಲ್ಲೇ ಮಧ್ಯಾಹ್ನವಾಗಿ ಸಮಯ ಕಳೆದುಹೋಯಿತು.ಹೇಗೋ ತಲುಪಿ ಅಲ್ಲಿದ್ದ ಸಹಾಯಕ ಅಧಿಕಾರಿಯ ವಿಚಾರಿಸಿದೆ ಆತ ನಿಮ್ಮ ಸಮಾಲೋಚನೆ ಇರುವ ದಿನ ಬರಬೇಕೆಂದು ಗದರಿ ನನ್ನ ಮತ್ತು ನನ್ನೊಟ್ಟಿಗಿದ್ದ ನನ್ನ ತಮ್ಮ ನಮ್ಮಿಬ್ಬರಿಗೂ ಆಚೆಗೆ ದಾರಿ ತೋರಿದ.ನನ್ನ ಮನ ಮತ್ತಷ್ಟು ಮರುಗಿತು ಅದೇ ಚಿಂತೆಯಲ್ಲಿ ಮನೆ ಕಡೆ ಸಾಗಿದೆವು.ಮನೆಯವರ ಬಳಿ ನಡೆದ ಘಟನೆ ವಿವರಿಸಿದೆವು.ಸಪ್ಪೆ ಮೋರೆ ಹೊತ್ತು ಕುಳಿತೆ.ಕೊನೆಯಲ್ಲಿ ತಾಯಿ ಕರುಳು ಮರುಗಿತು ಸರಿ ಹೋಗಲಿ ಬಿಡು,ಬೆಂಗಳೂರಿಗೆ ನಿನ್ನ ಕಳುಹಿಸಲು ನಮಗೂ ಇಷ್ಟವಿಲ್ಲ.ಮೈಸೂರಿನಲ್ಲಿ ಖಾಸಗಿ ಕಾಲೇಜಿಗೆ ಸೇರಲು ಬಡ್ಡಿಸಾಲಕ್ಕೇ ಕೈಚಾಚುತ್ತೇವೆಂದು ಭರವಸೆ ಇತ್ತರು.ಆದರೆ ಆ ಭರವಸೆ ನನಗೆ ಖುಷಿ ನೀಡಲಿಲ್ಲ.ಏಕೆಂದರೆ ಆಸರೆಯಾಗಬೇಕು ಎಂದು ಬಯಸಿದ ಶಿಕ್ಷಣದಲ್ಲಿ ಮನೆಯವರಿಗೆ ಮತ್ತೆ ನಾನು ಹೊರೆಯಾಗುತ್ತಿದ್ದೀನಲ್ಲ ಎಂದು ಜೀವ ಕೊರಗ ತೊಡಗಿತು.ನನ್ನ ತಾಯಿಯೊಂದಿಗೆ ಮೈಸೂರಿನಲ್ಲಿರುವ ಎಲ್ಲಾ ಬಿ.ಇಡಿ ಕಾಲೇಜುಗಳ ವಿಚಾರಿಸಿದೆ ಬಹುದೊಡ್ಡ ಡೊನೆಷನ್ ಗುಂಡಿಯನ್ನು ತೆರೆದಿಟ್ಟರು,
ಅದರೊಳಗೆ ಹೇಗೆ ದುಮುಕುವುದು ಭಯದ ಜೊತೆ ನಿರಾಸೆ ಕೂಡ ಆಯಿತು.ನನ್ನ ಗೆಳತಿಯೊಬ್ಬಳು ಮೈಸೂರಿನಲ್ಲೇ ಗೌರ್ಮೆಂಟ್ ಕೋಟಾದಿಂದ ಆಯ್ಕೆಯಾಗಿದ್ದಳು.ಆಕೆಗೆ ಕರೆಮಾಡಿ ವಿಚಾರಿಸಿದಾಗ ನಾನು ಸೇರಿರುವ ಕಾಲೇಜ್ ಹಾಗೂ ಅಲ್ಲಿನ ಸಿಬ್ಬಂದಿ ವರ್ಗದವರು ತುಂಬಾ ಒಳ್ಳೆಯವರು,ಡೊನೆಷನ್ ಕಮ್ಮಿ ನೀನು ಇಲ್ಲಿ ಸೇರಬಹುದು ಎಂದೊಡನೆ ನನ್ನ ತಾಯಿಯೊಂದಿಗೆ ಮೈಸೂರಿನ ಆ ಕಾಲೇಜಿಗೆ ದೌಡಾಯಿಸಿದೆ.ನನ್ನವ್ವ ಬಡ್ಡಿಗೆ ತಂದ ಆ ಹಣವ ಕಟ್ಟಿ ಮನೆಕಡೆ ನಡೆದೆ.ಆ ಹೊತ್ತಿಗಾಗಲೇ ಬಿ.ಇಡಿ ದ್ವಿತೀಯ ಆಯ್ಕೆಪಟ್ಟಿ ಪ್ರಕಟಿಸಿದ್ದರು.ನನಗಿಂತಲೂ ೧೦ % ಕಡಿಮೆ ಅಂಕ ಇದ್ದವರಿಗೂ ಸರ್ಕಾರಿ ಸೀಟು ಸಿಕ್ಕಿತ್ತು.ಮನೆಯವರು ಮತ್ತು ನಾನು ಈ ವಿಷಯ ತಿಳಿದು ತುಂಬಾ ನೊಂದುಕೊಳ್ಳುವಂತಾಯಿತು.ಯಾವುದನ್ನೂ ಸರಿಯಾಗಿ ಪರಿಶೀಲಿಸದೆ ದುಡುಕಿ ಖಾಸಗಿ ಶಿಕ್ಷಣ ಸಂಸ್ಥೆಗೆ ಹಣತೆತ್ತವೆಲ್ಲ ಎಂದು.ಆದರೆ ವಿಧಿಯಾಟ ಬಲ್ಲವರಾರು ಆ ವರ್ಷ ಸರ್ಕಾರ ಆಜ್ಞೆ ಹೊರಡಿಸಿತ್ತು ಮ್ಯಾನೆಜ್‌ಮೆಂಟ್ ಸೀಟ್ ಅವರಿಗೆ ವಿದ್ಯಾರ್ಥಿ ವೇತನ ರೂಪದಲ್ಲಿ ಹಣ ಮರುಪಾವತಿಸುವಂತೆ. ಇನ್ನೊಂದು ಕಡೆ ದೇವರಾಜುಅರಸು ವೃತ್ತಿಪರ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಕೂಡ ದಕ್ಕಿತು,ಮನೆಕಡೆ ಹೋಗಲು ಬಸ್ ಪಾಸ್ ಕೂಡ ಅನುವಾಯಿತು.ಜೊತೆಗೆ ಆ ವರ್ಷವೇ ನನ್ನ ಸಹೋದರನಿಗೆ ಸರ್ಕಾರಿ ಕೆಲಸವೂ ಸಹ ಆತನ ಪರಿಶ್ರಮಕ್ಕೆ ತಕ್ಕಂತೆ ದೊರೆಯಿತು.
ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿತದ ಕಡೆ ಮುಖಮಾಡಿತು.ನನಗೆ ಬಿ.ಇಡಿ ನಂತರ ಉನ್ನತ ವ್ಯಾಸಂಗಕ್ಕೂ ಅವಕಾಶ ಸಿಕ್ಕಿತು.ನನ್ನ ಸಹೋದರನಿಂದ ಬಹುದೊಡ್ಡ ಆಸರೆಯೇ ನನಗೆ ಬೆನ್ನೆಲುಬಾಯಿತು.ಆದದೆಲ್ಲ ಒಳ್ಳೆಯದ್ದೇ ಆಗಿ ನಾನು ಸಮಸ್ಯೆಗಳಿಂದ ಪಾರಾದೆ .ಇಲ್ಲದಿದ್ದರೆ ನಾನು ಮಾಡಿಕೊಂಡ ಎಡವಟ್ಟುಗಳಿಂದ ದುಡುಕು ತೀರ್ಮಾನಗಳಿಂದ ಬಲಿಯಾಗುತ್ತಿದ್ದೆ.ಸ್ನೇಹಿತರೆ ನಾನು ಶಿಕ್ಷಿತನಾಗಿ ಯಾವುದನ್ನೂ ಪರಿಶೀಲಿಸದೆ ತಾಳ್ಮೆಯಿಂದ ಇರದೆ ದುಡುಕಿದ ಸನ್ನಿವೇಷವನ್ನು ಮೇಲಿನ ಮಾತುಗಳಲ್ಲಿ ತಿಳಿಸಿದ್ದೇನೆ.ದುಡುಕಿಗೆ ಬಲಿಯಾಗದಿರಿ ಎಲ್ಲವೂ ಒಳ್ಳೆಯದಾಗುತ್ತೆ.ಕೆಡುಕಿನ ನಂತರ ತಾಳ್ಮೆಯಿಂದ ಇದ್ದರೆ ಒಳ್ಳೆಯದಿನಗಳು ನಮಗಾಗಿ ಕಾದಿರುತ್ತವೆ.ದುಡುಕಬೇಡಿ ಅಪ್ರಜ್ಞೆಯಿಂದ ದುಡುಕಿದರೂ ತಾಳ್ಮೆ ಕಳೆದುಕೊಳ್ಳಬೇಡಿ ಒಳ್ಳೆಯದಾಗುತ್ತೆ.ಒಳ್ಳೆತನ ಒಂದಿದ್ದರೆ.
*ಚಿಮಬಿಆರ್ (ಮಂಜುನಾಥ ಬಿ.ಆರ್)
*ಯುವಸಾಹಿತಿ, ಸಂಶೋಧಕ, ವಿಮರ್ಶಕ.
*ಹೆಚ್.ಡಿ.ಕೋಟೆ ಮೈಸೂರು.*
*ದೂರವಾಣಿ ಸಂಖ್ಯೆ:-8884684726*
*Gmail I’d:-manjunathabr709@gmail.com*