ಚಾಮರಾಜನಗರ: ಕರ್ನಾಟಕ ವಿಧಾನಪರಿಷತ್ತಿಗೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಾಗೂ ಮಾದರಿ ನೀತಿ ಸಂಹಿತೆ ಅನುಷ್ಠಾನ ಸಂಬಂಧ ನಿಯೋಜಿತರಾಗಿರುವ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆಯು ವೇಳಾಪಟ್ಟಿ ಹೊರಡಿಸಿದ ದಿನವಾದ ಮೇ ೧೨ರಿಂದಲೇ ಜಾರಿಯಲ್ಲಿರುತ್ತದೆ. ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗುವ ಜೂನ್ ೧೭ರವರೆಗೂ ಮಾದರಿ ನೀತಿ ಸಂಹಿತೆ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಯಾವುದೇ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಎಲ್ಲಿಯೇ ಆದರೂ ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಸಂಬಂಧಪಟ್ಟ ನಿಯೋಜಿತ ಅಧಿಕಾರಿಗಳ ತಂಡ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ನೀತಿ ಸಂಹಿತೆ ಜಾರಿಯಲ್ಲಿ ಇರುವ ಅವಧಿಯಲ್ಲಿ ಯಾವುದೇ ತರಹದ ಅಭಿವೃದ್ದಿ ಕೆಲಸ ಕಾರ್ಯಗಳು, ಶಂಕುಸ್ಥಾಪನೆ, ಸರ್ಕಾರದ ವಿವಿಧ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ, ಪಡಿತರ ಚೀಟಿ ವಿತರಣೆ, ಇನ್ನು ಮುಂತಾದ ಸರ್ಕಾರದ ಯೋಜನೆಗಳನ್ನು ನಡೆಸುವಂತಿಲ್ಲ. ಈ ನಿಟ್ಟಿನಲ್ಲಿ ಅತ್ಯಂತ ಎಚ್ಚರವಹಿಸಬೇಕು ಎಂದರು.
ಚುನಾವಣಾ ಕಾರ್ಯಗಳಿಗೆ ನೇಮಕವಾಗಿರುವ ಅಧಿಕಾರಿಗಳ ತಂಡ ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸಬೇಕು. ನೀತಿ ಸಂಹಿತೆ ಅವಧಿಯಲ್ಲಿ ಲೋಪ ದೋಷಗಳಾಗಬಾರದು. ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜವಾಬ್ದಾರಿಯುತವಾಗಿ ನಿಯೋಜಿಸಿದ ಕರ್ತವ್ಯವನ್ನು ಪೂರೈಸಬೇಕು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ತಂಡಗಳು ಚಲನವಲನಗಳ ಮೇಲೆ ನಿಗಾ ಇಡಬೇಕು. ಯಾವುದೇ ಭಾಗದಲ್ಲಿ ನೀತಿಸಂಹಿತೆ ಉಲ್ಲಂಘನೆಯಾಗುವುದು ಕಂಡು ಬಂದರೆ ತಕ್ಷಣವೇ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ತಹಶೀಲ್ದಾರರಾದ ನಂಜಯ್ಯ, ರವಿಶಂಕರ್, ಆನಂದನಾಯಕ, ಮಂಜುಳಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರೇಮ್ ಕುಮಾರ್, ಮಹೇಶ್, ಉಮೇಶ್, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ನಗರಸಭೆ ಆಯುಕ್ತರಾದ ಕರಿಬಸವಯ್ಯ, ಗುಂಡ್ಲುಪೇಟೆ ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸರ್ವೇಕ್ಷಣಾ ತಂಡದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.