ಲೇಖನ ಅಭಿವ್ಯಕ್ತಿ :-ಚಿಮಬಿಆರ್ (ಮಂಜುನಾಥ ಬಿ.ಆರ್)
ಭಾರತವು ಶಿಕ್ಷಣ ಕ್ಷೇತ್ರದಲ್ಲಿ ಪ್ರಾಚೀನ ಕಾಲದಿಂದಲೂ ವಿಶ್ವಗುರು ಸ್ಥಾನದಲ್ಲಿದೆ. ಭಾರತದಲ್ಲಿ ವಿಶ್ವ ವಿದ್ಯಾನಿಲಯಗಳು ಸ್ಥಾಪನೆಯಾಗಿ ಸರಸ್ವತಿ ಎಲ್ಲೆಡೆ ವಿಜೃಂಭಿಸುವ ಕಾಲಕ್ಕೆ ಪ್ರಪಂಚದ ಇತರೆ ದೇಶಗಳಲ್ಲಿನ ಮಾನವರು ಆದಿವಾಸಿಗಳಾಗಿಯೇ ಬದುಕುತ್ತಿದ್ದರು ಎನ್ನುವ ಕಿರೀಟ ಪ್ರತ್ಯೇಕವಾಗಿ ಭಾರತಕ್ಕಿದೆ. ಪರದೇಶಿಗರು ಭಾರತವನ್ನು ಪ್ರವೇಶಿಸಿ ತಕ್ಷಶಿಲೆ, ನಳಂದ ವಿಶ್ವವಿದ್ಯಾಲಯಗಳಲ್ಲಿದ್ದ ಅಪಾರ ಜ್ಞಾನ ಸಂಪತ್ತನ್ನು ಭಾರತದ ಅರ್ಥ ಸಂಪತ್ತಷ್ಟೇ ದೋಚಿ ನಾಗರಿಕರಾದರು ಎನ್ನುವ ಐತಿಹಾಸಿಕ ಕಥೆಗಳಿವೆ.

ವೇದ, ಉಪನಿಷತ್ತು, ಆಯುರ್ವೇದ, ಯುದ್ಧಕಲೆ, ಚಿತ್ರಕಲೆ, ಸಂಗೀತ, ಗಣಿತಶಾಸ್ತ್ರ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಯೋಗ, ಜ್ಯೋತಿಷ್ಯಶಾಸ್ತ್ರ, ಖಗೋಳಶಾಸ್ತ್ರ, ಹೀಗೆ ಬಹುತೇಕ ಎಲ್ಲಾ ಶಾಸ್ತ್ರಗಳಿಗೂ ಹುಟ್ಟನ್ನು ಭಾರತ ಪಡೆದುಕೊಂಡಿದೆ. ಚರಕ ಸಂಹಿತೆ, ಶುಶ್ರುತ ಸಂಹಿತೆ ವೈದ್ಯ ಲೋಕಕ್ಕೆ ಮೂಲ ಎನ್ನಬಹುದು. ಚಾಣಕ್ಯನ ಅರ್ಥಶಾಸ್ತ್ರ ಗ್ರಂಥ, ಅರ್ಥ ಮತ್ತು ರಾಜಕೀಯ ನಿಯಮಾವಳಿಗಳ ಸಂಗ್ರಹ. ಪತಂಜಲಿ ಮಹರ್ಷಿಗಳ ಯೋಗಸೂತ್ರ ಇಂದು ಪ್ರಪಂಚದಾದ್ಯಂತ ಅನುಸರಣೆಗೊಂಡಿದೆ. ಆರ್ಯಭಟ, ಪ್ರಸಿದ್ಧ ಗಣಿತಜ್ಞ ಮತ್ತು ಖಗೋಳ ಶಾಸ್ತ್ರಜ್ಞ; ಈತನ ಸೂರ್ಯ ಸಿದ್ಧಾಂತ ಖಗೋಳ ವಿಜ್ಞಾನದ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ. ಸೊನ್ನೆಯನ್ನು ವಿಶ್ವಕ್ಕೆ ಪರಿಚಯಿಸಿ ದಶಮಾಂಶ ಪದ್ಧತಿಗೆ ಅರ್ಥಪೂರ್ಣ ವ್ಯಾಖ್ಯಾನ ನೀಡಿದ್ದು ಭಾರತದ ಹೆಗ್ಗಳಿಕೆ.
ಶಿಕ್ಷಣ ಕ್ಷೇತ್ರದಲ್ಲಿ ಇಷ್ಟೆಲ್ಲಾ ಮಹತ್ವವಿರುವ ಭಾರತದಿಂದ ಪ್ರತಿಭಾ ಪಲಾಯನವಾಗುತ್ತಿರುವುದು ಮತ್ತು ಶಿಕ್ಷಣಕ್ಕಾಗಿ ಹೊರ ದೇಶಗಳನ್ನು ಅವಲಂಬಿಸಿ ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ಇಲ್ಲಿನ ದುರಾಡಳಿತ ವ್ಯವಸ್ಥೆಯಿಂದ ಎನ್ನುವುದೇ ಸತ್ಯ. ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಪೂರ್ವದಿಂದ ಇಲ್ಲಿಯವರೆಗೆ ಸಾಕಷ್ಟು ಬೆಳವಣಿಗೆಗಳು ಉಂಟಾಗಿವೆ. ಗುರುಕುಲ ಪದ್ಧತಿಯಿಂದ 2021ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯವರೆಗೆ ಸಮಕಾಲೀನ ಅಗತ್ಯತೆಗಳ ಅನುಸಾರವಾಗಿ ಭಾಗಷಃ ಶತಭಾಗ ಬೆಳವಣಿಗೆ ಅರ್ಥಪೂರ್ಣವಾಗಿ ಆಗಿದೆ ಎಂದರೆ ಅದು ಒಪ್ಪದ ಮಾತು. ಶಿಕ್ಷಣ ನೀತಿಯು ಆಯಾಯ ಕಾಲದ ಅಧಿಕಾರರೂಢರ ತಕ್ಕಡಿಯಲ್ಲಿ ಅವರವರ ಸ್ವಾರ್ಥಗಳಿಗೆ ತಕ್ಕಂತೆ ತೂಗಿದೆ ಎನ್ನುವುದೇ ವಾಸ್ತವ. ಸಮಾಜ ಸುಧಾರಕರ ಮಧ್ಯಸ್ಥಿಕೆ ಶಿಕ್ಷಣ ಕ್ಷೇತ್ರದ ಮಹತ್ವದ ಸುಧಾರಣೆ ಎನ್ನಬಹುದು. ಇಲ್ಲವಾದಲ್ಲಿ ಅರಾಜಕತೆಯ ಅಟ್ಟಹಾಸ ಶಿಕ್ಷಣ ಕ್ಷೇತ್ರವನ್ನು ಬಗ್ಗುಬಡಿದು ಜನತೆಯನ್ನು ಅಜ್ಞಾನದ ಕೂಪಕ್ಕೆ ತಳ್ಳುವುದಂತೂ ಶತಸಿದ್ಧ. ಭಾರತದಲ್ಲಿ ಮೇಲ್ಜಾತಿಯವರಿಗೆ ಮತ್ತು ಪುರುಷ ಪ್ರಾಧಾನ್ಯ ಶಿಕ್ಷಣ ಇದ್ದದ್ದು ಪೂರ್ವದ ಅವ್ಯವಸ್ಥೆಯಾದರೆ; ಇಂದು ಉತ್ತಮ ಶಿಕ್ಷಣವು ಹಣವಂತರಿಗೆ ಮಾತ್ರ ಲಭ್ಯವಾಗುತ್ತಿರುವುದು ಈಗಿನ ಅವ್ಯವಸ್ಥೆಯಾಗಿದೆ.

ಸಂವಿಧಾನದ ಭಾಗ 21ರಲ್ಲಿ ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಘೋಷಿಸಲಾಗಿದೆ. ಇದರ ಅನ್ವಯ ದೇಶದ ಯಾವೊಬ್ಬ ಮಗುವು ಗಂಡು, ಹೆಣ್ಣು, ಬಡವ, ಬಲ್ಲಿದ ಎನ್ನುವ ತಾರತಮ್ಯದಿಂದಾಗಿ ಶಿಕ್ಷಣದಲ್ಲಿ ವಂಚಿತವಾಗುವುದನ್ನು ತಪ್ಪಿಸುವುದಾಗಿದೆ. ಈ ಉದ್ದೇಶದಿಂದ ಆರ್.ಟಿಇ ಕಾಯ್ದೆಯನ್ನು 2009ರಲ್ಲಿ ಜಾರಿಗೆ ತರಲಾಗಿದ್ದು ಈ ಕಾಯ್ದೆ ಜಾರಿಗೆಯಾದ ತರುವಾಯ ಗುಣಮಟ್ಟದ ಶಿಕ್ಷಣ ಎಲ್ಲೆಡೆ ನೆಲೆಸುವುದಕ್ಕಿಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಹಣದ ಚಟುವಟಿಕೆ ಹೆಚ್ಚೇ ಆಗಿದೆ. ವರ್ಷದಿಂದ ವರ್ಷಕ್ಕೆ ಶಿಕ್ಷಣ ವ್ಯವಸ್ಥೆ ಎಲ್ಲಾ ವಿಧದಲ್ಲೂ ದುಬಾರಿಯಾಗುತ್ತಲೇ ಇದೆ. ಶಿಕ್ಷಣ ನೀಡುವ ಉದ್ದೇಶಕ್ಕಿಂತ ಶಿಕ್ಷಣ ಕ್ಷೇತ್ರದಲ್ಲಿ ಹಣಮಾಡುವ ಉದ್ದೇಶದಿಂದಲೇ ಗಲ್ಲಿಗೊಂದು ಶಿಕ್ಷಣ ಸಂಸ್ಥೆಗಳು ಜನ್ಮತಾಳುತ್ತಿವೆ. ಮಕ್ಕಳಿಗೆ ಶಾಲಾಗರಡಿಯಲ್ಲಿ ಸರಿಯಾದ ಶಿಕ್ಷಣ ಸಿಗದೆ ಹೊರಗಡೆ ಟ್ಯೂಷನ್ ಸಂಸ್ಕೃತಿ ಹೆಚ್ಚಾಗಿದೆ. 2021ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಲೋಪ ದೋಷಗಳು ಮುಂದಿನ ದಿನಗಳ ಮಕ್ಕಳ ವಾರ್ಷಿಕ ಶೈಕ್ಷಣಿಕ ಫಲಿತಾಂಶಗಳಲ್ಲಿ ಹೊರಬೀಳಲಿದೆ. ಉನ್ನತ ಶಿಕ್ಷಣವು ಉಳ್ಳವರಿಗೆ ಮಾತ್ರ ಎಂದು ಸಾಬೀತಾಗುವ ದಿನಗಳು ಸನ್ನಿಹದಲ್ಲಿದೆ.
ಸರ್ಕಾರವು ಅಬಕಾರಿ ಇಲಾಖೆಗೆ ಕೊಡುವ ಗಮನವನ್ನು ಶಿಕ್ಷಣ ಇಲಾಖೆಗೆ ನೀಡುತ್ತಿಲ್ಲ ಕಾರಣ ಶಿಕ್ಷಣವು ಹಣ ಉತ್ಪತ್ತಿ ಮಾಡುವ ಇಲಾಖೆಯಲ್ಲ. ಗೃಹ ಸಚಿವರು, ಅರ್ಥ ಸಚಿವರು ಯಾರೆಂದು ಕೇಳುವ ನಮ್ಮ ಜನ ಶಿಕ್ಷಣ ಸಚಿವರು ಯಾರೆಂದು ವಿಚಾರಿಸುವುದಿಲ್ಲ ಕಾರಣ ಸಾಮಾನ್ಯರಿಗೂ ಶಿಕ್ಷಣ ಇಲಾಖೆಯಿಂದ ಅವರ ದುರಾಸೆಗಳಿಗೆ ತಕ್ಕುದಾದ ಲಾಭವಿಲ್ಲ. ಲಾಭವಿರುವ ವಿದ್ಯಾರ್ಥಿಗಳಿಗೆ ಸರಿಯಾದ ಅವಕಾಶ, ಪ್ರೋತ್ಸಾಹ ಶಿಕ್ಷಣ ಸಂಸ್ಥೆಗಳಿಂದ ಸಿಗುತ್ತಿಲ್ಲ. ಈ ರೀತಿಯಾಗಿ ಹಣದ ಮನಸ್ಥಿತಿಯ ಮೌಢ್ಯ ಎಲ್ಲಾ ಕಡೆ ನೆಲೆಸುವಾಗ ಮೌಲಿಕತೆಗಳಿಗೆ ಹೇಗೆ ತಾನೆ ಅವಕಾಶ ಸಿಗುತ್ತದೆ. ಈ ಮೌಲಿಕತೆಗಳನ್ನು ಕಳೆದುಕೊಂಡ ಸಮಾಜದಲ್ಲಿ ಪ್ರತಿಭೆಗಳು ತಮ್ಮ ಹಿತಾಸಕ್ತಿಗಳನ್ನು ಹೇಗೆತಾನೆ ವ್ಯಕ್ತಪಡಿಸಿಕೊಂಡು ಮುನ್ನಲೆಗೆ ಬರುತ್ತಾರೆ. ಶಿಕ್ಷಣದಲ್ಲಿ ಹೆಚ್ಚಾಗಿ ಹಣ ಹೂಡಿಕೆ ಮಾಡಿದ ಪ್ರತಿಭೆಗಳು ಅದನ್ನು ಪುನರ್ ಭರಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಭ್ರಷ್ಟರಾಗುತ್ತಿದ್ದಾರೆ ಮತ್ತು ಹೆಚ್ಚು ವೇತನ ಸಿಗುವ ಕಡೆ ಮುಖಮಾಡುತ್ತಿದ್ದಾರೆ. ಈ ರೀತಿಯ ಸಂದರ್ಭದಲ್ಲೇ ತಾನೆ ಪ್ರತಿಭೆಗಳು ಪಲಾಯನವಾಗುವುದು. ಪ್ರತಿಭೆಗಳು ಶಿಕ್ಷಣಕ್ಕಾಗಿ ತಮ್ಮ ಕೌಶಲತೆಗಳನ್ನು ಊರ್ಜಿತಗೊಳಿಸಿಕೊಳ್ಳಲು ಕಡಿಮೆ ಖರ್ಚಿನಲ್ಲಿ ಎಲ್ಲಿ ಸಾಧ್ಯ ಎಂದು ಯೋಚಿಸಿ ವಲಸೆ ಹೋಗುತ್ತಿರುವುದು. ಶಿಕ್ಷಣ ಕ್ಷೇತ್ರದಲ್ಲಿ ವಲಸಿಗರನ್ನು ಸೃಷ್ಟಿಸಿದಷ್ಟು ಭಾರತಕ್ಕೆ ಮುಂದೊಂದು ದಿನ ಕಂಟಕ ಎದುರಾಗುವುದು ಖಚಿತ.

ಸರಿಯಾದ ಸಮಯಕ್ಕೆ ಅಭ್ಯರ್ಥಿಗಳನ್ನು ಅರ್ಹತೆಗೆ ತಕ್ಕಂತೆ ಖಾಲಿ ಇರುವ ಶಿಕ್ಷಣ ಉದ್ಯೋಗಗಳಿಗೆ ಭರ್ತಿ ಮಾಡಿಕೊಂಡರೆ ಈ ಮೇಲಿನ ಸಮಸ್ಯೆ ಕಂಡುಬರುವುದಿಲ್ಲ. ಅತಿಥಿ ಶಿಕ್ಷಕರನ್ನು ತುಂಬಿಕೊಂಡು ಹಣ ಉಳಿಸುವ ಸರ್ಕಾರದ ಯೋಚನೆ ಮತ್ತು ಯೋಜನೆ ಸರಿಯಲ್ಲ. ಸರ್ಕಾರಿ ಶಾಲೆಗಳನ್ನು ಎಲ್ಲೆಂದರಲ್ಲಿ ಮುಚ್ಚಿ ಖಾಸಗಿ ಶಾಲೆಗಳಿಗೆ ಎಲ್ಲೆಂದರಲ್ಲಿ ಅನುಮತಿ ನೀಡುತ್ತಿರುವುದು ಭಾರತೀಯ ಶಿಕ್ಷಣ ವ್ಯವಸ್ಥೆಯ ಬಹುದೊಡ್ಡ ಬಿರುಕು. ಶಿಕ್ಷಣ ಸಂಸ್ಥೆಗಳು ಔದ್ಯೋಗಿಕ ನಿಟ್ಟಿನಲ್ಲಿ ರೂಪುಗೊಳ್ಳುತ್ತಿರುವುದಕ್ಕೆ ವಿರುದ್ಧವಾಗಿ ಒಂದು ಕ್ರಾಂತಿಯ ಅಗತ್ಯವಿದೆ. ಡೊನೆಷನ್ ಬೂತ್’ಗಳನ್ನು ತೆರೆಯುವವರಿಗೆ ಸರ್ಕಾರದಿಂದ ಯಾವುದೇ ಅನುಮತಿ ಪತ್ರ ಲಭ್ಯವಾಗಬಾರದು. ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸರಿಯಾದ ಸುಧಾರಣೆಗಳಾಗಬೇಕು. ಪ್ರಾದೇಶಿಕ ಭಾಷೆಗಳಲ್ಲಿಯೇ ಶಿಕ್ಷಣ ಆಯಾಯ ರಾಜ್ಯಗಳ ಸಂಸ್ಕೃತಿಯ ಅನುಸಾರ ಕಡ್ಡಾಯವಾಗಬೇಕು. ಶಿಕ್ಷಣವು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ಹಂತದವರೆವಿಗೂ ಎಲ್ಲರಿಗೂ ಎಲ್ಲಾ ಕಡೆ ಕಡಿಮೆ ಖರ್ಚಿನಲ್ಲಿ ಸಿಗುವಂತಾಗಬೇಕು. ಹೀಗಾದಾಗ ಮಾತ್ರ ಪ್ರತಿಭೆಗಳು ಭಾರತದಲ್ಲಿಯೇ ಬೇರೂರಿ ನಿಲ್ಲಲು ಸಾಧ್ಯ.
ನೆನ್ನೆ ಮೊನ್ನೆಯಿಂದ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ನಮ್ಮ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಇಲ್ಲಿನ ದುಬಾರಿ ಶಿಕ್ಷಣ. ಸರಿಯಾದ ರೀತಿಯಲ್ಲಿ ಶಿಕ್ಷಣ ಸರಳ ಮತ್ತು ಸುಲಭವಾಗಿದ್ದರೆ ಭಾರತೀಯರೇಕೆ ಉಕ್ರೇನ್’ಗೆ ತೆರಳುತ್ತಿದ್ದರು? ಈ ರೀತಿಯಾಗಿ ಪ್ರಾಣಭೀತಿಯಲ್ಲಿ ನರಳುತ್ತಿದ್ದರು. ಭಾರತೀಯರಿಗೆ ಸರಿಯಾದ ಅವಶ್ಯಕತೆಗಳನ್ನು ಸರ್ಕಾರ ಸೃಷ್ಟಿಸಿಕೊಡುವಲ್ಲಿ ಎಡವಿದಾಗಲೇ ತಾನೆ ಈ ರೀತಿಯ ಅಪಾಯಗಳಾಗುವುದು. ನಮ್ಮವರು ಇಲ್ಲಿಯೇ ಉಳಿಯಲಿ ಎನ್ನುವುದು ಉದ್ದೇಶವಲ್ಲ; ನಮ್ಮ ಮಾನವ ಸಂಪನ್ಮೂಲಗಳನ್ನು ನಾವಿಲ್ಲಿ ಸದುಪಯೋಗ ಪಡಿಸಿಕೊಂಡರೆ ದೇಶದ ಕ್ಷೇಮಾಭಿವೃದ್ಧಿಗೆ ಸಹಕಾರ ಎನ್ನುವುದೇ ಈ ಲೇಖನದ ಉದ್ದೇಶ.

ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ.
ಹೆಚ್.ಡಿ.ಕೋಟೆ. ಮೈಸೂರು.
ದೂರವಾಣಿ ಸಂಖ್ಯೆ:-8884684726