ಚಾಮರಾಜನಗರ: ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಮುಖ್ಯ ಚುನಾವಣಾಧಿಕಾರಿ ಕಚೇರಿಯ ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯವರಾದ ಪಿ.ಎಸ್. ವಸ್ತ್ರದ್ ಅವರು ತಿಳಿಸಿದರು. 
ನಗರದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿಂದು ಮತದಾರರ ಜಾಗೃತಿ (ಸ್ವೀಪ್) ಕಾರ್ಯ ಚುಟುವಟಿಕೆಗಳು, ಮತದಾರರ ಸಾಕ್ಷರತಾ ಸಂಘಗಳು ಹಾಗೂ ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು. ಮತದಾರರ ಸಾಕ್ಷರತಾ ಸಂಘಗಳು (ಇಐಅ) ಈಗಾಗಲೇ ಚಾಲ್ತಿಯಲ್ಲಿದ್ದು, ಸದರಿ ಸಂಘಗಳ ಮುಖಾಂತರ ಶಾಲಾ, ಕಾಲೇಜು ಹಂತದಲ್ಲಿ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ. ಚುನಾವಣಾ ಜಾಗೃತಿ ಸಂಘಗಳ (ಅಎಅ) ಮುಖಾಂತರ ಬೂತ್ ಮಟ್ಟದಲ್ಲಿ ಮತದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಮತದಾರರ ಪಟ್ಟಿ ಸಂಬಂಧ ಹೊಸದಾಗಿ ಸೇರ್ಪಡೆ, ಸ್ಥಳ ಬದಲಾವಣೆ, ಮತದಾರರ ಪಟ್ಟಿಯಿಂದ ಮೃತ ವ್ಯಕ್ತಿಗಳ ವಿವರವನ್ನು ಕೈಬಿಡುವುದು, ಮತದಾರರ ಪಟ್ಟಿಯಲ್ಲಿ ಕೈಬಿಟ್ಟುಹೋಗಿರುವ ಮತದಾರರನ್ನು ಸೇರ್ಪಡೆಗೊಳಿಸುವುದು ಇನ್ನಿತರ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕೆಂದು ತಿಳಿಸಿದರು.
ಮತದಾರರ ಜಾಗೃತಿ ವೇದಿಕೆ (ಗಿಂಈ) ಸರ್ಕಾರಿ ಕಚೇರಿಗಳಲ್ಲಿ ಸ್ಥಾಪನೆಯಾಗಿದ್ದು, ಇದನ್ನು ಇನ್ನೂ ಹೆಚ್ಚು ಸಕ್ರಿಯಗೊಳಿಸಬೇಕು. ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ಮತದಾರ ಪಟ್ಟಿಗೆ ಸೇರ್ಪಡೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮತದಾರರ ಸಹಾಯವಾಣಿ ಆಪ್ ಅನ್ನು ೧೮ ವರ್ಷ ಮೇಲ್ಪಟ್ಟ ಎಲ್ಲಾ ಮತದಾರರು ಡೌನ್‌ಲೋಡ್ ಮಾಡಿಕೊಂಡು, ಹೊಸದಾಗಿ ಸೇರ್ಪಡೆ, ಸ್ಥಳ ಬದಲಾವಣೆ, ಮತದಾರರ ಪಟ್ಟಿಯಲ್ಲಿ ಕೈಬಿಟ್ಟುಹೋಗಿರುವ ಮತದಾರರನ್ನು ಸೇರ್ಪಡೆಗೊಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ವಿಶೇಷ ಚೇತನ ಮತದಾರರನ್ನು ಗುರುತಿಸಿ ಹಾಗೂ ಅವರ ಬಗ್ಗೆ ಅಧ್ಯಯನ ನಡೆಸಿ, ಅವರು ಮತದಾನದಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಮತದಾರರ ಸಾಕ್ಷರತಾ ಸಂಘಗಳು, ಮತದಾರರ ಜಾಗೃತಿ ಸಂಘಗಳು, ಪ್ರತಿ ೧೫ ದಿನಕ್ಕೊಮ್ಮೆ ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಮತದಾನದ ಬಗ್ಗೆ ವಿದ್ಯಾರ್ಥಿಗಳಿಗಿರುವ ಅರಿವನ್ನು ಪ್ರಶ್ನಾವಳಿ ಕಾರ್ಯಚಟುವಟಿಕೆಗಳ ಮುಖಾಂತರ ಕೈಗೊಳ್ಳಬೇಕು. ಜಿಲ್ಲಾ ಚುನಾವಣಾ ಅಧಿಕಾರಿಗಳು, ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಮತದಾನದ ಜಾಗೃತಿ ಬಗ್ಗೆ ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ನಡೆಸಬೇಕು ಎಂದರು.
ಇ.ವಿ.ಎಂ, ವಿ.ವಿ. ಪ್ಯಾಟ್ ಕಾರ್ಯನಿರ್ವಹಣೆ ಬಗ್ಗೆ ಬೂತ್ ಮಟ್ಟದಲ್ಲಿ ಪ್ರಾಯೋಗಿಕವಾಗಿ ತರಬೇತಿ, ಪ್ರಾತ್ಯಕ್ಷಿಕೆಯನ್ನು ನೀಡಬೇಕು. ವಿವಿಧ ಮಾಧ್ಯಮಗಳ ಮೂಲಕ ಅರಿವು ಕಾರ್ಯಕ್ರಮಗಳು ಆಯೋಜನೆಯಾಗಬೇಕು. ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆಯು ಮಾರ್ಚ್ ೩೧ ರವರೆಗೆ ಇರಲಿದೆ. ಈ ಅವಧಿಯೊಳಗೆ ಪೋಸ್ಟರ್ ಮೇಕಿಂಗ್, ಸ್ಲೋಗನ್, ಹಾಡು, ವೀಡಿಯೋ ಮೇಕಿಂಗ್ ನಂತಹ ಸ್ಫರ್ಧಾತ್ಮಕ ಚಟುವಟಿಕೆಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಬೇಕೆಂದು ತಿಳಿಸಿದರು.  

ಮತದಾರರಲ್ಲಿ ಅರಿವು ಮೂಡಿಸುವ ಸಂಬಂಧ ಜಿಲ್ಲೆಯ ಎಲ್ಲಾ ಇಲಾಖೆಗಳು ಜಿಲ್ಲಾ ಸ್ವೀಪ್ ಸಮಿತಿಯೊಂದಿಗೆ ಸಹಕರಿಸಿ ಮತದಾನ ಹಾಗೂ ಇದರ ಮಹತ್ವ ಕುರಿತ ಜಾಗೃತಿ ಕಾರ್ಯ ಚಟುವಟಿಕೆಗಳನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೈಗೊಂಡು, ಯಾವೊಬ್ಬ ಮತದಾರ ಮತದಾನದಿಂದ ಹೊರಗುಳಿಯದಂತೆ ಅರಿವು ಮೂಡಿಸಿ ಪ್ರೇರೇಪಿಸಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯವರಾದ ಪಿ.ಎಸ್. ವಸ್ತ್ರದ್ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಕೈಗೊಳ್ಳಲಾದ ಸ್ವೀಪ್ ಕಾರ್ಯ ಚಟುವಟಿಕೆಗಳು ಹಾಗೂ ಸ್ಫರ್ಧಾತ್ಮಕ ಚಟುವಟಿಕೆಗಳಲ್ಲಿ ರಾಜ್ಯದಲ್ಲಿಯೇ ಚಾಮರಾಜನಗರ ಜಿಲ್ಲೆಯು ೫ನೇ ಸ್ಥಾನದಲ್ಲಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯತ್ರಿ, ಜಿಲ್ಲಾ ಸ್ವೀಪ್ ಸಮಿತಿಯ ಕಾರ್ಯದರ್ಶಿ ಹಾಗೂ ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗೂಡೂರು ಭೀಮಸೇನ, ಚುನಾವಣಾ ತಹಶೀಲ್ದಾರ್ ವಿನೋದ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರದ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ನಾಗಮಲ್ಲೇಶ್, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಗಳು, ಇನ್ನಿತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.