ಚಾಮರಾಜನಗರ: ಸಂಘಟನೆಗಳು ನಿಂತನೀರಾಗದೇ, ಸದಾಹರಿಯುವ ನೀರಾಗಬೇಕು ಎಂದು ಹನೂರು ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಪ್ರಿಯಾಶಂಕರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಜಿಲ್ಲಾ ಉಪ್ಪಾರ ಯುವಕರ ಸಂಘದಿಂದ ನಡೆದ ಭಗೀರಥಮಹರ್ಷಿ ಜಯಂತಿ ಹಾಗೂ ನಾನಾಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ಗಿಡಕ್ಕೇ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬರು ಶಿಕ್ಷಣಪಡೆಯುವ ಅನಿವಾರ್ಯತೆ ಇದೆ.
ಆಸ್ತಿಗಳಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣಕೊಡಿಸಿದರೆ ಅವರೇ ಆಸ್ತಿಯಾಗುತ್ತಾರೆ, ಶಿಕ್ಷಣದಿಂದ ಜ್ಞಾನಾರ್ಜನೆ ಹೆಚ್ಚುವುದರೊಂದಿಗೆ ವಿವೇಕ, ಸಂಸ್ಕಾರ ಪ್ರಾಪ್ತಿಯಾಗಲಿದೆ. ಸಂಘಟನೆಗಳು ಸಮಾಜಮುಖಿ ಕಾರ್ಯಕ್ರಮಗಳತ್ತ ಗಮನಹರಿಸಬೇಕು, ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ ಕುರಿತು ಅರಿವು ಮೂಡಿಸಬೇಕು ಎಂದರು.
ನಗರದ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ
ಸೋಮಣ್ಣ ಮಾತನಾಡಿ, ಧರೆಗೆ ಗಂಗೆತರಲು ಭಗೀರಥಮಹರ್ಷಿ ಅವರು ಧೀರ್ಘಕಾಲ ತಪಸನ್ನಾಚರಿಸಿ ನೀರುತರುವುದರಲ್ಲಿ ಯಶಸ್ವಿಯಾದರು.
ಅವರ ಪ್ರಯತ್ನ ನಮ್ಮಲ್ಲೂ ಬರಬೇಕು, ನಾವುಎಂದಿಗೂ ಹಿಂದುಳಿದಿಲ್ಲ. ಮುಂದುವರೆಯುತ್ತಿರುವವರು ಎಂಬ ಭಾವನೆಬರಬೇಕು, ಸಮುದಾಯದವರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವತ್ತ ಮುಂದಾಗಬೇಕು ಎಂದರು.
ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ ಮಾತನಾಡಿ,
ಭಗೀರಥಮಹರ್ಷಿ ಅವರ ಜಯಂತಿಯಂದು ಸಾಧಕರನ್ನು ಗುರುತಿಸಿ
ಸನ್ಮಾನ ಮಾಡುತ್ತಿರುವ ಶ್ಲಾಘನೀಯ, ಸಂಘಟನೆಗಳು ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ದಾಖಲು ಮಾಡುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್’ ನಮ್ಮ ಸಂಘಟನೆ ವತಿಯಿಂದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಸೇರಿದಂತೆ ನಾನಾಕ್ಷೇತ್ರಗಳಲ್ಲಿ ಸೇವೆಸಲ್ಲಿಸುತ್ತಿರುವ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಹಮ್ಮಿಕೊಳ್ಳುತ್ತ ಬರಲಾಗಿದೆ ಎಂದರು.
ಸನ್ಮಾನ; ಕಾರ್ಯಕ್ರಮದಲ್ಲಿ ಚಾಮುಲ್ ನೂತನ ನಿರ್ದೇಶಕಿ ಶೀಲಾಪುಟ್ಟರಂಗಶೆಟ್ಟಿ,
ಸೆಸ್ಕ್ ಸಿಬಿಎಸ್ ಕಾವೇರಿಪವರ್ ಸ್ಕೀಂ ಸೊಸೈಟಿ ಅಧ್ಯಕ್ಷ ಮಹೇಶ್, ಅಂಬೇಡ್ಕರ್ ಸುವರ್ಣ ಗಂಗೋತ್ರಿ ಉಪನ್ಯಾಸಕ ಡಾ. ಮಹೇಶ್, ನೀಲಗಾರಕಲಾವಿದ ದೊಡ್ಡಮೋಳೆ ಸಣ್ಣಶೆಟ್ಟಿ, ಕೋಡಿಮೋಳೆ ಮಣಿ ಅವರನ್ನು ಸನ್ಮಾನಿಸಲಾಯಿತು.
ಶಾಲಾವಿದ್ಯಾರ್ಥಿಗಳಿಗೆ ಪುಸ್ತಕ, ಲೇಖನಿ ವಿತರಣೆ ಮಾಡಲಾಯಿತು.
ಕೆನರಾಬ್ಯಾಂಕ್ ವ್ಯವಸ್ಥಾಪಕ ನಂಜುಂಡಸ್ವಾಮಿ, ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ನಂದಿನಿ, ಉಪ್ಪಾರಸರಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಣ್ಣ, ಯುವಜನಸೇವೆ ಕ್ರೀಡಾಇಲಾಖೆಯ ಶಿವಕುಮಾರ್, ಭಗೀರಥ ಉಪ್ಪಾರ ಪ್ರಚಾರಸಮಿತಿ ಅಧ್ಯಕ್ಷ ಕಾಳಪ್ಪ, ಖಜಾಂಚಿ ನಾರಾಯಣ, ಜಿಲ್ಲಾ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ಸ್ವಾಮಿ, ಪ್ರಧಾನಕಾರ್ಯದರ್ಶಿ ಸಿಎಸ್.ನಾಗರಾಜು, ಕುಮಾರ್, ಸಂಪತ್, ಜೆ.ಜಿ.ಮಹೇಶ್, ಶಿವಕುಮಾರ್ ಹಾಜರಿದ್ದರು.
