ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಹಾಗೂ ರೋಟರಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿಂದು ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ನೇತ್ರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ ನಡೆಸಲಾಯಿತು. ೩೮೦ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು. ಕಣ್ಣಿನ ಪೊರೆ ಚಿಕಿತ್ಸೆ, ಗ್ಲಕೋಮ, ಕಾರ್ನಿಯಾ, ರೆಟಿನಾ, ನರ ಸಮಸ್ಯೆ ಇನ್ನಿತರ ತೊಂದರೆಗಳನ್ನು ಗುರುತಿಸಿ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ೮೦ ಮಂದಿಗೆ ಕನ್ನಡಕ ಬಳಸಲು ತಿಳಿಸಲಾಯಿತು. ೬೦ ಜನರು ಸ್ಥಳದಲ್ಲಿಯೇ ಕನ್ನಡಕ ಖರೀದಿಸಿದರು.

ಬೆಳಿಗ್ಗೆಯಿಂದಲೇ ಆರಂಭವಾದ ಆರೋಗ್ಯ ತಪಾಸಣಾ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಚ್ಚುಕಟ್ಟಾಗಿ ಪರೀಕ್ಷಾ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಶಿಬಿರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಕಣ್ಣಿನ ತಪಾಸಣೆ, ಕನ್ನಡಕ ವಿತರಣೆಯ ಕೌಂಟರ್‌ಗಳಿಗೆ ತೆರಳಿ ಮಾಹಿತಿ ಪಡೆದುಕೊಂಡರು.

ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಪಿ. ಚಂದ್ರಶೇಖರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ, ಡಾ. ನೀತ್ ಪರೀಕ್, ಡಾ. ಶಿವಂಗಾಂಧಿ ಸೇರಿದಂತೆ ಆರೋಗ್ಯ ಸಿಬ್ಬಂದಿ ಇದ್ದರು.