ಪವನ್ ಶೌರ್ಯ-ಮೌರ್ಯಾನಿ ಅಭಿನಯದ ಸಿನಿಮಾ

ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ ಗೌಡ ಮತ್ತು ಮೀನಾ ವೆಂಕಟ್ ಗೌಡ ನಿರ್ಮಾಣ, ಶಶಾಂಕ್ ರಾಜ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ನಾಚಿ. 

ಗೂಳಿಹಟ್ಟಿ, ಹಾಲು ತುಪ್ಪ ಮತ್ತು ಉಡುಂಬಾ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದವರು ಪವನ್ ಶೌರ್ಯ. ಈಗ ನಾಚಿ ಚಿತ್ರದಲ್ಲಿಯೂ ನಾಯಕನಟನಾಗಿ ನಟಿಸುತ್ತಿದ್ದಾರೆ. ಕ್ರೇಜ಼ಿಸ್ಟಾರ್ ರವಿಚಂದ್ರನ್ ಅವರ ಗರಡಿಯಲ್ಲಿ ಕೆಲಸ ಕಲಿತು, ನಂತರ ಯುಗಯುಗಗಳೇ ಸಾಗಲಿ, ಉಡ, ಮಾವಳ್ಳಿ ಮಿಲ್ಟ್ರಿ ಹೋಟೆಲ್, ಗೂಳಿಹಟ್ಟಿ, ಹನಿ ಹನಿ ಇಬ್ಬನಿ, ಹಾಲುತುಪ್ಪ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿರುವ ಶಶಾಂಕ್ ರಾಜ್ `ನಾಚಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ಎಲ್ಲ ಅಂದುಕೊಂಡಂತೇ ಆಗಿದ್ದಿದ್ದರೆ ಅಕ್ಟೋಬರ್ 29ರಂದು ಅದ್ದೂರಿ ಮುಹೂರ್ತ ನಡೆಸಿ ಚಿತ್ರೀಕರಣಕ್ಕೆ ತೆರಳುವ ಯೋಜನೆ ಚಿತ್ರತಂಡದ್ದಾಗಿತ್ತು. ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಸರಳವಾಗಿ ಪೂಜೆ ನೆರವೇರಿಸಿಕೊಂಡು ಚಿತ್ರೀಕರಣ ಆರಂಭಿಸಲಾಗಿತ್ತು. ಸದ್ಯ ನಾಚಿ ಚಿತ್ರ ಸರಿಸುಮಾರು ಮೂವತ್ತೈದು ದಿನಗಳ ಚಿತ್ರೀಕರಣ ನಡೆಸಿದೆ. ಇನ್ನೂ ಇಪ್ಪತ್ತೈದು ದಿನಗಳ ಶೂಟಿಂಗ್ ಬಾಕಿ ಇದೆ. ಈ ಮಧ್ಯೆ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಸಾಂಕೇತಿಕ ಮುಹೂರ್ತ ಕಾರ್ಯಕ್ರಮ ನಡೆಸುವ ಮೂಲಕ ಮತ್ತೊಮ್ಮೆ ಚಿತ್ರಕ್ಕೆ ಚಾಲನೆ ನೀಡಲಾಗಿದೆ. 

ತಾತ ಮೊಮ್ಮಗಳ ಸುತ್ತ ಪ್ರಧಾನವಾಗಿ ಬೆಸೆದುಕೊಂಡ ಕತೆ ʻನಾಚಿʼ ಚಿತ್ರದ್ದು. ನಚಿತಾ ಎನ್ನುವುದು ಆಕೆಯ ಹೆಸರು. ಎಲ್ಲರೂ ಪ್ರೀತಿಯಿಂದ ʻನಾಚಿʼ ಎಂದು ಕರೆಯುತ್ತಿರುತ್ತಾರೆ. ಪುರಾತತ್ವ ವಿಭಾಗದ ಅಂತಿಮ ವರ್ಷದಲ್ಲಿ ಓದುತ್ತಿರುತ್ತಾಳೆ. ಅದೊಮ್ಮೆ ಮಲೆನಾಡಿನ ಪ್ರದೇಶವೊಂದರಲ್ಲಿ ಪ್ರಾಚ್ಯವಸ್ತುಗಳ ಸಂಶೋಧನೆಗೆಂದು ಹೋದಾಗ ಅದು ತನ್ನದೇ ಪೂರ್ವಜರ ಮನೆ ಎಂದು ಗೊತ್ತಾಗುತ್ತದೆ. ಇದರ ಜೊತೆ ನಿಧಿಯ ಕತೆ ಕೂಡಾ ತೆರೆದುಕೊಳ್ಳುತ್ತದೆ. ಇತಿಹಾಸ, ವಿಜ್ಞಾನ, ಲವ್, ಕಾಮಿಡಿ, ಥ್ರಿಲ್ಲರ್, ಹಾರರ್ ಅಂಶಗಳೊಂದಿಗೆ ಆಕ್ಷನ್ ಕೂಡಾ ಕತೆಯಲ್ಲಿ ಬೆಸೆದುಕೊಂಡಿದೆ. ಅಂತಿಮವಾಗಿ ʻಸೈನ್ಸ್ ಬಿಯಾಂಡ್ ಸೆನ್ಸ್ʼ ಎನ್ನುವ ಸಿದ್ದಾಂತವನ್ನು ಮಂಡಿಸುವ ಉದ್ದೇಶ ʻನಾಚಿʼ ಚಿತ್ರದ್ದು.

ಮಲೆನಾಡಿನ ಸುಂದರ ತಾಣಗಳಲ್ಲಿ ʻನಾಚಿʼಗಾಗಿ ಚಿತ್ರೀಕರಣ ನಡೆಸಲಾಗಿದೆ. ಯಕ್ಷಗಾನ, ಭೂತಕೋಲಾಗಳ ದೃಶ್ಯಗಳನ್ನು ನೈಜವಾಗಿ ಸೆರೆ ಹಿಡಿಯಲಾಗಿದೆ. ನಾಲ್ಕು ಫೈಟ್, ಮೂರು ಹಾಡು, ಒಂದು ಬಿಟ್ ಸಾಂಗ್ ಕೂಡಾ ʻನಾಚಿʼ ಚಿತ್ರದಲ್ಲಿರಲಿದೆ. 

ತೆಲುಗಿನಲ್ಲಿ ಸುಮಾಋು ಹದಿನೈದು ಚಿತ್ರಗಳಲ್ಲಿ ನಟಿಸಿರುವ ಕನ್ನಡದ ಹುಡುಗಿ ಮೌರ್ಯಾನಿ. ಕನ್ನಡ ಸಿನಿಮಾದಲ್ಲಿ ನಟಿಸುವ ಬಯಕೆಯಿಂದ ಕಳೆದ ನಾಲ್ಕು ವರ್ಷಗಳಿಂದ ಹಲವಾರು ಕತೆಗಳನ್ನು ಕೇಳಿದ್ದರಂತೆ. ಕಡೆಗೆ ಶಶಾಂಕರ್ ರಾಜ್ ಅವರು ಹೇಳಿದ ಸಬ್ಜೆಕ್ಟ್ ಇಷ್ಟವಾದ ಕಾರಣಕ್ಕೆ ನಟಿಸಲು ಒಪ್ಪಿದ್ದಾಗಿ ಮೌರ್ಯಾನಿ ಹೇಳಿಕೊಂಡರು.

ಪವನ್ ಶೌರ್ಯ ಮತ್ತು ಮಾರ್ಯಾನಿ ಅವರ ಜೊತೆಗೆ ಆರ್ಯಭಟ ಜಾಗ್ವಾರ್, ಕ್ರಿಷ್, ಪ್ರಿಯಾ ಶೆಟ್ಟಿ, ಶ್ರೇಯಾ ಶೆಟ್ಟಿ, ನೀನಾಸಂ ನಂಜಪ್ಪ, ಖಳನಟನಾಗಿ ಪ್ರಶಾಂತ್, ಮನೀಶ್ ಸೇರಿದಂತೆ ಇತರರು ʻನಾಚಿʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ರಂಗಭೂಮಿ, ಕಿರುತೆರೆಗಳಲ್ಲಿ ಸಾಕಷ್ಟು ದುಡಿದಿರುವ ಎಸ್.ಎಲ್. ಎನ್ ಸ್ವಾಮಿ ತಾತನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಚಿತ್ ಫಿಲಂಸ್ ಲಾಂಛನದಲ್ಲಿ ವೆಂಕಟ್ ಗೌಡ ನಿರ್ಮಿಸುತ್ತಿರುವ ಐದನೇ ಚಿತ್ರವಿದು.