ಮೈಸೂರು: ಕೊರೋನ ಮಹಾಮಾರಿ ಹರಡುತ್ತಿರುವ ಈ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸದೆ ಶಿಕ್ಷಣ ತಜ್ಞರು, ಶಿಕ್ಷಕರು, ವಿದ್ಯಾರ್ಥಿಗಳ ಅಭಿಪ್ರಾಯದೊಂದಿಗೆ ವೈಜ್ಞಾನಿಕ ಮೌಲ್ಯಮಾಪನ ಪದ್ಧತಿಯನ್ನು ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಡಿಎಸ್ ಓ ವತಿಯಿಂದ ಆನ್ ಲೈನ್ ಪ್ರತಿಭಟನೆ ನಡೆಸಿ ಮನವಿಯನ್ನು ವಿಶ್ವವಿದ್ಯಾನಿಲಯಗಳ ಕುಲಪತಿ ಹಾಗೂ ಶಿಕ್ಷಣ ಸಚಿವರಿಗೆ ಇಮೇಲ್ ಮಾಡಲಾಯಿತು.
ಪ್ರತಿಭಟನೆಯಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಬಿಸಿ ಊಟಕ್ಕೆ ಸಮವಾದ ಆಹಾರದ ಕಿಟ್ ವಿತರಿಸಿ, ಬಸ್ ಪಾಸ್, ಹಾಸ್ಟೆಲ್ ಶುಲ್ಕ ಮತ್ತು ಕಾಲೇಜು ಶುಲ್ಕದ ವೆಚ್ಚಗಳನ್ನು ಭರಿಸಲು ವಿದ್ಯಾರ್ಥಿಗಳಿಗೆ ಆರ್ಥಿಕ ಪ್ಯಾಕೇಜನ್ನು ಒದಗಿಸುವಂತೆ ಆಗ್ರಹಿಸಲಾಯಿತು.
ಈ ಕುರಿತು ಎಐಡಿಎಸ್ ಓ ಜಿಲ್ಲಾ ಅಧ್ಯಕ್ಷ ಬಿ.ಜೆ.ಸುಭಾಷ್ ಮಾತನಾಡಿ ಎಲ್ಲಾ ಜಿಲ್ಲೆಗಳ, ವಿವಿಧ ಸ್ತರಗಳ ವಿದ್ಯಾರ್ಥಿ ಪ್ರತಿನಿಧಿ ಗಳನ್ನೊಳಗೊಂಡ ಗೂಗಲ್ ಫಾರ್ಮ್ ಸಮೀಕ್ಷೆ ನಡೆಸಲಾಯಿತು. ಸುಮಾರು1,600 ಸಾವಿರ ವಿದ್ಯಾರ್ಥಿಗಳು ಈ ಸಮೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಕೋವಿಡ್-19 ಎರಡನೇ ಅಲೆಯು ಇಡೀ ದೇಶದಲ್ಲಿ ಅಪ್ಪಳಿಸಿದ್ದು ಎಲ್ಲಡೆ ಭೀಕರ ಸಾವು, ನೋವು, ಜೀವನದ ಮೇಲಿನ ಹತಾಶೆ ಸಮಾಜದಲ್ಲಿ ಮನೆಮಾಡಿದೆ. ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳ ಸಂಖ್ಯೆ ಒಂದೆಡೆಯಾದರೆ, ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೇಕಾಗಿರುವ ಆಮ್ಲಜನಕದ ಸಿಲಿಂಡರ್‌ಗಳು, ಐಸಿಯು, ವೆಂಟಿಲೇಟರ್, ಹಾಸಿಗೆಗಳ ಸಮರ್ಪಕ ಪೂರೈಕೆ ಇಲ್ಲದಿರುವುದು ಮತ್ತು ವೈದ್ಯರು ಆರೋಗ್ಯ ಸಿಬ್ಬಂದಿಗಳ ಹಾಗೂ ಕೋವಿಡ್ ಸೆಂಟರ್‌ಗಳ ಕೊರತೆಯಿಂದ ಅಮಾಯಕ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ಇಡೀ ದೇಶವು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಪ್ರಸ್ತುತ ಸರ್ಕಾರಗಳು ಕೈಗೆತ್ತಿಕೊಳ್ಳುತ್ತಿರುವ ವಿವಿಧ ಕ್ರಮಗಳು ಮತ್ತು ನೀತಿಗಳು ಮತ್ತ? ಜನರ ಬದುಕನ್ನು ದುರ್ಬರಗೊಳಿಸುತ್ತಿವೆ. ವಿದ್ಯಾರ್ಥಿ ಯುವಜನರು ಮುಂದಿನ ದೇಶದ ಭವಿಷ್ಯ ಎಂದು ಭಾಷಣ ಬಿಗಿಯುವ ಸರ್ಕಾರ ಮತ್ತು ಅದರ ಪ್ರತಿನಿಧಿಗಳು ಇಂದು ವಿದ್ಯಾರ್ಥಿಗಳ ಜೀವನ ಮತ್ತು ಶೈಕ್ಷಣಿಕ ಬದುಕಿನ ಮೇಲೆ ಕಿಂಚಿತ್ತು ಕಾಳಜಿ ಇಲ್ಲದಂತೆ ವರ್ತಿಸುತ್ತಿದೆ. ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಸ್ತುತ ಸೆಮಿಸ್ಟರ್‌ನ ಪರೀಕ್ಷೆಗಳನ್ನು ನಡೆಸದೆ ಮುಂದಿನ ಸೆಮಿಸ್ಟರ್‌ನ ಆನ್ಲೈನ್ ತರಗತಿಗಳನ್ನು ನಡೆಸುತ್ತಿರುವುದು ಅಪ್ಪಟ ಅವೈಜ್ಞಾನಿಕವಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಅವರ ಮುಂದಿನ ಭವಿಷ್ಯಕ್ಕೆ ಮಾರಕವಾದ ನಡೆಯಾಗಿದೆ ಎಂದು ದೂರಿದರು.
ಕೊರೋನಾ ಮಹಾಮಾರಿಯ ಭೀಕರ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸದೆ, ಶಿಕ್ಷಣತಜ್ಞರು, ಶಿಕ್ಷಕರು ವಿದ್ಯಾರ್ಥಿಗಳ ಅಭಿಪ್ರಾಯದೊಂದಿಗೆ ವೈಜ್ಞಾನಿಕ ಮೌಲ್ಯಮಾಪನ ಪದ್ಧತಿಯನ್ನು ರಚಿಸಬೇಕೆಂದು ಆಗ್ರಹಿಸಿದರು.

By admin