ಲೇಖನ ಅಭಿವ್ಯಕ್ತಿ:-ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)
ಬೆಲೆ ಬಾಳುವ ಅಥವಾ ಬೆಲೆ ಇರುವ ಯಾವುದನ್ನೇ ಆಗಲಿ ಪಣಕ್ಕಿಟ್ಟು ಆಡುವ ಅನಾಗರಿಕ ಸಂಸ್ಕೃತಿಯದ್ದಾದ ಈ ಜೂಜಿನ ಆಟ ಬಹಳ ಇತಿಹಾಸವನ್ನು ಪಡೆದಿದೆ.ಇಲ್ಲಿ ಮೋಜು ಒಣ ಪ್ರತಿಷ್ಠೆಗಳ ಹೊರತು ಒಂದೂ ನೈತಿಕ ಅಂಶಗಳನ್ನು ಒಳಗೊಂಡಿರುವುದು ಕಂಡುಬರುವುದಿಲ್ಲ.ಪುರಾಣಗಳಲ್ಲಾದ ಪಾಂಡವರ ವನವಾಸಕ್ಕೆ ಒಂದು ರೀತಿಯಲ್ಲಿ ಈ ಜೂಜೇ ಕಾರಣ. ಬರೀ ಅಪಮಾನ, ಅವಮಾನ, ನಷ್ಟಗಳೇ ಅಧಿಕವಾಗಿರುವ ಈ ಜೂಜಿನಿಂದ ಮನೆ ಮಠ ಹೆಂಡತಿ ಮಕ್ಕಳೆಲ್ಲರನ್ನೂ ಕಳೆದುಕೊಂಡು ಕೆಲವರು ಬೀದಿಗೆ ಬಂದಿದ್ದಾರೆ.ಇನ್ನೂ ಕೆಲವರು ಸಾಲ ಮಾಡಿ ಜೂಜಿನಲ್ಲಿ ಸೋತು ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾರೆ.
ಇಷ್ಟೆಲ್ಲಾ ನಕರಾತ್ಮಕ ಅಂಶಗಳಿಂದ ಕೂಡಿದ ಈ ಜೂಜಿನ ಆಟಕ್ಕೆ ಅಂತ್ಯವಂತೂ ಒದಗಿ ಬಂದಿಲ್ಲ.ಜೊತೆಗೆ ಈ ಜೂಜಿಗೆ ಅನುಯಾಯಿಗಳು ಯಾರೂ ಕಡಿಮೆ ಆಗಿಲ್ಲ.ಕಾಲಕ್ಕೆ ,ಪ್ರಾದೇಶಿಕತೆಗೆ, ಜನರ ಅಭಿರುಚಿಗೆ, ಬುದ್ಧಿವಂತಿಕೆಗೆ ತಕ್ಕಂತೆ ಆಟಗಳ ಆಧಾರಿತವಾಗಿ ಬೇರೆ ಬೇರೆ ಆಟಗಳಲ್ಲಿ ಈ ಜೂಜು ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ.ಸಮಾಜದ ಕೌಟುಂಬಿಕ ವ್ಯವಸ್ಥೆಯಲ್ಲಿ ದೊಡ್ಡ ಸಮಸ್ಯೆಯಾಗಿದ್ದ ಈ ಜೂಜನ್ನು ಕೆಲವು ದೇಶಗಳಲ್ಲಿ ರದ್ದುಗೊಳಿಸಿದ್ದಾರೆ.ವಿಶ್ವದ ಧರ್ಮಗಳು ಜೂಜಾಡುವುದು ಅಧರ್ಮವೆಂದು ಘೋಷಿಸಿ ನಿಷೇಧವನ್ನು ಏರಿದ್ದಾವೆ.ಸನಾತನ ಧರ್ಮವು ಜೂಜಾಡುವುದನ್ನು ಪಾಪ ಎಂದು ಪರಿಗಣಿಸಿ ಇದಕ್ಕೆ ಘೋರವಾದ ನರಳಾಟವು ಜನ್ಮಜನ್ಮಾಂತರಗಳಿಗೂ ಅಂಟುತ್ತದೆ ಎಂದು ಹೇಳಿದೆ.ಸೆಮೆಟಿಕ್ ಧರ್ಮಗಳು ಜೂಜಾಡುವುದು ತ್ಯಾಜ್ಯಕ್ಕೆ,ಕಸಕ್ಕೆ ಸಮ ಎಂದಿವೆ.
ಇಸ್ಲಾಂ ಧರ್ಮವು ಜೂಜಾಡುವುದನ್ನು ಪಾತಕ ಕೃತ್ಯವೆಂದು ನಿರ್ಧರಿಸಿದೆ.ಜಗತ್ತಿನ ಹೆಸರಾಂತ ತತ್ವಜ್ಞಾನಿಗಳಾದ ಚಾಣಕ್ಯ, ಅರಿಸ್ಟಾಟಲ್, ಪ್ಲೇಟೋ, ಸಾಕ್ರಟೀಸ್ ,ಕನ್ ಪೂಷಿಯಸರು ಜೂಜುಗಾರರನ್ನು ಅಲ್ಲೆಗಳೆದಿದ್ದಾರೆ.ಹೀಗೆಲ್ಲಾ ಇರುವ ಈ ಜೂಜನ್ನು ಪೋಷಿಸಿಕೊಂಡು ಬರುತ್ತಿರುವ ವರ್ಗಕ್ಕೆ ಮಾತ್ರ ಇದರ ಮೇಲಿನ ವ್ಯಾಮೋಹ ಕಡಿಮೆಯಾಗಿಲ್ಲ.ಒಂದು ಹಂತದಲ್ಲಿ ಈ ಜೂಜನ್ನು ಆಡಳಿತ ಸರ್ಕಾರ ಕಾನೂನು ಬಾಹಿರ ಚಟುವಟಿಕೆ ಎಂದು ಘೋಷಿಸಿ ಈ ಜೂಜನ್ನು ಆಡುವವರು ಎಲ್ಲೇ ಇದ್ದರೂ ಅವರನ್ನು ಬಂಧಿಸುವ ಆದೇಶವನ್ನು ಹೊರಡಿಸಿದ ಮೇಲಂತೂ ಕದ್ದು ಆಡುವವರ ಸಂಖ್ಯೆ ಇನ್ನೂ ಹೆಚ್ಚಾಗಿದೆ.
ಈ ಜೂಜನ್ನು ಮುಂದುವರೆಸಲು ಹೊಸ ಹೊಸ ಬಣ್ಣದ ಕಥೆಗಳನ್ನು ಕಟ್ಟುತ್ತಿದ್ದಾರೆ.ಜೂಜು ಬುದ್ದಿವಂತರ ಆಟದ ಪಾಲುದಾರಿಕೆ ,ಮನರಂಜನೆ ಹಾಗೂ ಕಾನೂನು ಬಾಹಿರವಾಗಿ ಆಡುವಾಗ ಪೋಲಿಸರು ನಮ್ಮನ್ನು ಹಿಡಿದರೆ ಅಲ್ಲಿ ದಂಡತೆರಬೇಕು ಅದಕ್ಕಿಂತ ನಮಗೇನೂ ಈ ಜೂಜಿನ ವೆಚ್ಚ ಹೊರೆ ಏನಲ್ಲಾ ಎಂದು ಹಾಗು ಇನ್ನೂ ಏನೇನೋ ಅರ್ಥವಿಲ್ಲದ ಸಬೂಬುಗಳನ್ನು ನೀಡಿ ಆಡಲು ಯತ್ನಿಸುತ್ತಿದ್ದಾರೆ.
ಈ ಜೂಜಿಗೆ ಪ್ರಸ್ತುತ ಈಗ ಹೊಸ ಆಯಾಮ ಒಂದು ಸಿಕ್ಕಿದೆ. ಎಲ್ಲವೂ ಈಗ ಡಿಜಿಟಲಿಕರಣ ಅಥವಾ ಯಂತ್ರಾಂಶ ಮತ್ತು ತಂತ್ರಾಂಶಗಳ ಬೆಳವಣಿಗೆ ಕಂಡ ಮೇಲಂತೂ ಈ ಜೂಜಿಗೆ ಒಳ್ಳೆಯ ವೇದಿಕೆ ಸಿಕ್ಕಂತಾಗಿದೆ.ಪ್ರಪಂಚದ ಪ್ರತಿಷ್ಠಿತ ಆಟಗಳನ್ನು ಆಧಾರವಾಗಿಟ್ಟುಕೊಂಡು ಆನ್ಲೈನ್ ಜೂಜು ಆರಂಭವಾಗಿದೆ.ಈ ಆನ್ಲೈನ್ ಜೂಜಿಗೂ ಸಾಮಾನ್ಯವಾಗಿ ಖಾಸಗಿ ಸ್ಥಳಗಳಲ್ಲಿ ಆಡುತ್ತಿದ್ದ ಜೂಜಿಗೂ ವ್ಯತ್ಯಾಸವೆಂದರೆ ಈಗ ಕಾನೂನು ಬಾಹಿರ ಚಟುವಟಿಕೆ ಎಂದು ಗುರುತಾಗಿದ್ದನ್ನು ಸರ್ಕಾರವನ್ನು ಸುಲಭವಾಗಿ ಮೋಸಗೊಳಿಸಿ ಸರ್ಕಾರದ ಒಪ್ಪಿಗೆಯನ್ನು ಪಡೆದಂತೆಯೇ ಈ ಜೂಜಿನ ಆಟವು ಶುರುವಾಗಿದೆ.ಈ ಆನ್ಲೈನ್ ಜೂಜಿನಲ್ಲಿ ಮಧ್ಯವರ್ತಿಗಳು ಹೆಚ್ಚಿದ್ದು ಜೂಜಿನ ಚಟುವಟಿಕೆಯು ನಿರ್ಭಯದಿಂದ ಸಾಗುತ್ತಿದೆ.ಎಲ್ಲಿ ಯಾರು ಯಾರಿಗೆ ಹಣ ಕಳುಹಿಸುತ್ತಿದ್ದಾರೆ ಎನ್ನುವುದು ಬಿಟ್ಟು ಏತಕ್ಕಾಗಿ ಹಣ ಕಳುಹಿಸುತ್ತಿದ್ದಾರೆ ಎನ್ನುವುದರ ಮಾಹಿತಿ ಇರದಿರವುದು ಜಾಗೂ ಹಲವು ಗೌಪ್ಯತೆ ವಿಚಾರಗಳು ಸುಲಭವಾಗಿ ನೆರವೇರುತ್ತಿವೆ.ಈ ಆನ್ಲೈನ್ ಜೂಜಿನಲ್ಲಿ ಪಾಲ್ಗೊಳ್ಳುವವರು ದೂರವಾಣಿ ಕರೆಗಳ ಮೂಲಕ ಜೂಜಿನ ಒಪ್ಪಂದ ಮಾಡಿಕೊಂಡು ಆಡುವುದು ಹೊಸ ರೂಢಿಯಾಗಿದೆ.
ಮನರಂಜನೆಗೆ ಇದ್ದ ಆಟಗಳನ್ನೆಲ್ಲಾ ಈಗ ಈ ಜೂಜಿಗಾಗಿ ಬಳಸಿಕೊಳ್ಳುತ್ತಿದ್ದಾರೆ.ಎಲ್ಲೋ ನಡೆಯುವ ಮನರಂಜನೆ ಆಟಗಳನ್ನು ಈ ಬೆಟ್ಟಿಂಗ್ ದಂಧೆಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ.ಈ ಜೂಜಿನ ಆಟವು ಹೊರಗಡೆ ನಡೆಯುವಾಗ ವಯಸ್ಕರು ಮತ್ತು ಮಧ್ಯವಯಸ್ಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚು ಪಡೆದಿತ್ತು ಆದರೆ ಆನ್ಲೈನ್ ಜೂಜಿನಿಂದಾಗಿ ಈಗ ಚಿಕ್ಕ ಮಕ್ಕಳಿಗೂ ಪರಿಚಯವಾಗುತ್ತಿದೆ.ಕೆಲವು ಆನ್ಲೈನ್ ಗೇಮ್ ಗಳು ಗ್ರೇಡ್ ಅಥವಾ ಅಂಕಗಳ ಮಾದರಿಯಲ್ಲಿ ಪ್ರಚಾರ ಪಡೆಯುತ್ತಿವೆ.ಈ ಆನ್ಲೈನ್ ಗೇಮ್ ಗಳು ಜೂಜಿನ ಆಟದ ಲಕ್ಷಣವೇ ಆಗಿದ್ದು ಹೊಸ ರೀತಿಯಲ್ಲಿ ಈಗಿನ ಪೀಳಿಗೆಯನ್ನು ತನ್ನತ್ತ ಸುಲಭವಾಗಿ ಸೆಳೆಯುತ್ತಿದೆ.ತಂದೆ ಅಥವಾ ತಾಯಿಯ ಆರ್ಥಿಕ ಬ್ಯಾಂಕಿನ ಡಿಜಿಟಲ್ ಖಾತೆಗಳನ್ನು ಉಪಯೋಗಿಸಿಕೊಂಡು ಮಕ್ಕಳು ಜೂಜನ್ನು ಆಡುತ್ತಿದ್ದಾರೆ.
ಈಗೇನೋ ಸಣ್ಣ ಪುಟ್ಟ ಹಣವನ್ನು ಕಟ್ಟಿ ಆಡುತ್ತಿದ್ದಾರೆ ಮುಂದೆ ಇದು ಭವಿಷ್ಯದಲ್ಲಿ ಒಂದು ಗೀಳಾಗಿ ಪರಿಣಮಿಸಿದಾಗ ಯುವ ಪೀಳಿಗೆಯು ಭವಿಷ್ಯದಲ್ಲಿ ಭಾರಿ ತೊಂದರೆಯನ್ನು ಅನುಭವಿಸುತ್ತದೆ.ಪ್ರಸ್ತುತ ಕರೋನಾ ಸಂಧರ್ಭದಲ್ಲಿ ಎಲ್ಲರೂ ಮನರಂಜನೆಗಾಗಿ ಈ ಮೊಬೈಲ್ ,ಕಂಪ್ಯೂಟರ್, ಲ್ಯಾಪ್‌ಟಾಪ್ ಇನ್ನಿತರ ಯಂತ್ರ ಸಾಧನಗಳ ಬಳಕೆಯನ್ನು ಹೆಚ್ಚು ಮಾಡಿಕೊಂಡಿದ್ದು ಹೊಸ ಹೊಸ ತಂತ್ರಾಂಶಗಳಲ್ಲಿ ತಮ್ಮನ್ನು ತಾವು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.ಆನ್ಲೈನ್ ಗೇಮ್ ಮತ್ತು ಆ್ಯಪ್ ಗಳ ಆವಿಷ್ಕಾರವು ಸುಲಭವಾಗಿ ವಂಚಿಸಲು ಅನುವಾಗಿ ನಿಂತಿವೆ.ಇದರ ದುರುದ್ದೇಶದ ಕಿಮ್ಮತ್ತಿಗೆ ಇಂದಿನ ಯುವಪೀಳಿಗೆ ತಲೆತೂಗುತ್ತಿವೆ.ವಿದ್ಯಾರ್ಥಿಗಳು ಸಹ ಈ ನಿಟ್ಟಿನಲ್ಲಿ ಹೆಚ್ಚಿನ ಪಾಲುದಾರಿಕೆಯನ್ನು ಪಡೆದಿದ್ದು ಚಿಕ್ಕವಯಸ್ಸಿನಲ್ಲಿಯೇ ಹಣದ ವ್ಯಾಮೋಹಕ್ಕೆ ಒಳಗಾಗುತ್ತಿದ್ದಾರೆ.ಜೂಜಾಡಲು ಹಣವಿಲ್ಲದೆ ಸಾಲದ ಕೂಪಕ್ಕೆ ಬೀಳುತ್ತಿದ್ದಾರೆ.
ಹಣಕ್ಕಾಗಿ ಜೂಜಿಗಾಗಿ ಕಳ್ಳತನದ ಮಾರ್ಗವನ್ನು ಹಿಡಿಯುತ್ತಿದ್ದಾರೆ. ಆನ್ಲೈನ್ ಮೂಲಕ ಸುಲಭವಾಗಿ ಮುಗ್ಧಜನಗಳ ಹಣ ಕೀಳುತ್ತಿದ್ದಾರೆ.ಈ ಧಂಧೆಯಲ್ಲಿ ಸ್ಕ್ಯಾಮ್ ಪರಿಭಾಷೆಯ ಕೃತ್ಯದಲ್ಲಿ ಬಹುದೊಡ್ಡ ಮೋಸದ ಜಾಲವೇ ಸೃಷ್ಟಿ ಆಗುತ್ತಿದೆ. ಹಣಕ್ಕಾಗಿ ಶ್ರೀಮಂತರ ಮಕ್ಕಳು ಮಧ್ಯಮ ವರ್ಗದ ಮಕ್ಕಳು ಎಲ್ಲರೂ ಈ ಮೋಸಜಾಲದ ಗುಂಪಿಗೆ ಆನ್ಲೈನ್ ಮೂಲಕವೇ ಸೇರುತ್ತಿದ್ದಾರೆ. ಇಷ್ಟೆಲ್ಲಾ ಮೋಸದ ಕೆಲಸದಲ್ಲಿ ಭಾಗಿಯಾದವರು ಸೋಲಿನಿಂದ ಆದ ಅಪಮಾನವನ್ನು ಸಹಿಸಲಾಗದೆ ಮತ್ತು ಹಣದ ದುರ್ಬಳಕೆಯಿಂದಾದ ನಷ್ಟಕ್ಕೆ ತಂದೆ ತಾಯಿಯರಿಗೆ ಹೇಳಲಾಗದೆ ಸಮಾಜಕ್ಕೆ ಉತ್ತರಿಸಲಾಗದೆ ಸಣ್ಣಪುಟ್ಟ ವಿಚಾರಗಳಿಗೂ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ.
ಮಿತಿ ಮೀರಿ ಕೊಲೆಗೂ ಯತ್ನಿಸುತ್ತಿದ್ದಾರೆ.ಎಲ್ಲೋ ದೂರದಲ್ಲಿ ಕುಳಿತ ಅಂತರ್ಜಾಲ ಉದ್ಯಮಿಗಷ್ಟೇ ಇದರ ಲಾಭವಾಗುತ್ತಿದೆ.ಸುಲಭವಾಗಿ ಆನ್ಲೈನ್ ಮೂಲಕ ಗ್ರಾಹಕರನ್ನು ಸೆಳೆಯುವ ಅವಕಾಶ ಈ ಅಂತರ್ಜಾಲ ಉದ್ಯಮಿಗಳಿಗೆ ಒಂದು ದೊಡ್ಡ ಉಡುಗೊರೆಯಾಗಿದೆ.ಆದರೆ ಹದಗೆಡುತ್ತಿರುವ ಸಮಾಜದ ಬಗ್ಗೆ ಯಾರಿಗೂ ಅರಿವಿಲ್ಲ.ಇಂದು ತಂದೆ ತಾಯಿ ಅಥವಾ ಪೋಷಕರೇ ತಮ್ಮ ಮಕ್ಕಳಿಗೆ ಪರಿಚಯಿಸಿಕೊಟ್ಟ ಆನ್ಲೈನ್ ಗೇಮ್ ಆ್ಯಪ್ ಇನ್ನಿತರವುಗಳು ಮಕ್ಕಳ ದುರ್ಬಳಕೆಯಲ್ಲಿ ಅಡ್ಡದಾರಿಯಲ್ಲಿ ಕೆಟ್ಟದಾಗುತ್ತಿರುವುದು ಪೋಷಕರಿಗೆ ತಿಳಿಯದಾಗಿದೆ.ಯುವ ಪೀಳಿಗೆಯು ದೇಶದ ಆಸ್ತಿಯಾಗಿದ್ದು ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸಿದಷ್ಟೂ ಮನೆಗೆ ಮಾತ್ರವಲ್ಲ ದೇಶಕ್ಕೆ ಉಪಯೋಗ ಹಾಗು ಪ್ರಪಂಚಕ್ಕೂ ಉಪಯೋಗವೇ.ಸರ್ಕಾರವು ,ಸೈಬರ್ ಕ್ರೈಂ ಇಲಾಖೆಯು ಹಾಗು ಪೋಷಕರು ಈ ವಿಚಾರದಲ್ಲಿ ಹೆಚ್ಚಿನ ಗಮನಹರಿಸಿ ಒಳ್ಳೆಯದಕ್ಕಾಗಿ ಶ್ರಮಿಸಬೇಕಾಗಿದೆ.
ಭವಿಷ್ಯದ ದೇಶದ ಭದ್ರತೆಗೆ ಈಗಿನ ಯುವಪೀಳಿಗೆಯನ್ನು ಸರಿದಾರಿಗೆ ತರುವಲ್ಲಿಯೋಜಿಸಬೇಕಾಗಿದೆ.ಇಲ್ಲದಿದ್ದರೆ ಹತ್ತಿರದಲ್ಲೇ ಮತ್ತೊಂದು ಮಹಾ ಅವಘಢ ಕಾದಿದೆ.ಎದುರಿಸಲು ಎಲ್ಲರೂ ಸಿದ್ಧರಾಗಿ.