ಮೈಸೂರು,ನವೆಂಬರ್.3- ಕೋವಿಡ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗಳಲ್ಲಿ ಇರುವ ವಯೋಸಹಜ ಕಾಯಿಲೆಗಳ ಬಗ್ಗೆ ಮಾಹಿತಿ ಪಡೆದು, ಅವರ ಮೇಲೆ ಹೆಚ್ಚಿನ ನಿಗಾವಹಿಸಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಅವರು ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19 ಸೋಂಕು ತಪಾಸಣೆ, ಚಿಕಿತ್ಸೆ ಹಾಗೂ ನಿಯಂತ್ರಣ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಕೋವಿಡ್‍-19 ದೃಢಪಟ್ಟು ಆಸ್ಪತ್ರೆಗೆ ದಾಖಲಾಗುವ ಬಹುತೇಕ ವ್ಯಕ್ತಿಗಳು ನಾನಾ ಖಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅವರಿಗೆ ಅಗತ್ಯವಿರುವ ಚಿಕಿತ್ಸೆ ಹಾಗೂ ಸೂಕ್ತ ಸಲಹೆಯನ್ನು ನೀಡುವಂತೆ ಕ್ರಮವಹಿಸಿ ಎಂದು ಸೂಚಿಸಿದರು.

ಕೆಲವು ಖಾಸಗಿ ಆಸ್ಪತ್ರೆಗಳು ಕೋವಿಡ್ ಸಂಬಂಧ ಮಾಹಿತಿಯನ್ನು ಆಸ್ಪತ್ರೆ ಮುಂದೆ ನಾಮಾಕಾಸ್ತೆಗೆ ಪ್ರಕಟಿಸಿರುತ್ತಾರೆ. ಆದ್ದರಿಂದ ಜಿಲ್ಲಾಡಳಿತ ರಚಿಸಿರುವ ತಂಡವು ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದರು.

ಕೋವಿಡ್ ಇರುವ ಕಾರಣ ಮದುವೆ ಹಾಗೂ ಇನ್ನಿತರ ಸಮಾರಂಭಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ನಡೆಸಲು ಜನರಲ್ಲಿ ಜಾಗೃತಿ ಮೂಡಿಸಿ. ಬಸ್‍ಸ್ಟಾಂಡ್, ರೈಲ್ವೆನಿಲ್ದಾಣ, ಮಾರುಕಟ್ಟೆ ಮುಂತಾದ ಸ್ಥಳಗಳಲ್ಲಿ ಕೋವಿಡ್-19 ನಿಯಂತ್ರಿಸುವ ನಿಯಮಗಳನ್ನು ಪಾಲಿಸುವಂತೆ ಜನರ ಮನವೊಲಿಸಿ ಎಂದು ತಿಳಿಸಿದರು.

ಕೋವಿಡ್ ಸೋಂಕಿಗೆ ಒಳಪಟ್ಟು ಆಸ್ಪತ್ರೆ ಹಾಗೂ ಹೋಂ ಐಶುಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವರಿಗೆ ಧೈರ್ಯ ತುಂಬುವ ಸಲುವಾಗಿ ಪರಿಣಿತ ಸಮಾಲೋಚಕರಿಂದ ಆಪ್ತ ಸಮಾಲೋಚನೆ ಮಾಡಿಸಿ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ. ಆದರೂ ಕೂಡಾ ಮುಂಜಾಗ್ರತೆ ದೃಷ್ಟಿಯಿಂದ ಪರೀಕ್ಷೆಗಳನ್ನು ಹೆಚ್ಚು ಮಾಡಲಾಗುತ್ತಿದೆ. ಕೋವಿಡ್ ಆಸ್ಪತ್ರೆಗಳಲ್ಲಿ ಒಂದು ಸಾವಿರ ಹಾಸಿಗೆ ಲಭ್ಯವಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್ ಸಿಇಒ ಡಿ.ಭಾರತಿ, ಮಹಾನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಡಿಸಿಪಿ ಡಾ.ಎನ್.ಪ್ರಕಾಶ್‍ಗೌಡ, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ್‍ಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ.ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

By admin