ಮೈಸೂರು,ಜ. ಕುರುಬರ ಕುಲ-ಶಾಸ್ತ್ರೀಯ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಕೂಡಲೇ ಮಂಡಿಸಲು ಆಗ್ರಹ ಹಾಗೂ ಕುರುಬರ ಎಸ್.ಟಿ.ಮೀಸಲಾತಿ ಅಧ್ಯಯನ ನೆಲೆ-ಹಿನ್ನೆಲೆ ಕೈಪಿಡಿ ಬಿಡುಗಡೆ ಕಾರ್ಯಕ್ರಮವನ್ನು ಶಾರದಾದೇವಿ ನಗರದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸದಲ್ಲಿ ನಾಳೆ ಮಧ್ಯಾಹ್ನ 3.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್ಒಯು ಮಾಜಿ ಸಿಂಡಿಕೇಟ್ ಸದಸ್ಯ ಕೆ.ಎಸ್.ಶಿವರಾಮು ತಿಳಿಸಿದರು.
ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕೈಪಿಡಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಾನಸ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಭಾರ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ಮರೀಗೌಡ ಭಾಗವಹಿಸಲಿದ್ದಾರೆಂದರು.
ಕುರುಬ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆನ್ನುವ ಹೋರಾಟ ಪ್ರಾರಂಭವಾಗಿದೆ. ಇಂತಹ ಒಂದು ಬೇಡಿಕೆಯನ್ನು ಸರ್ಕಾರದ ಮುಂದಿಡುವ ಅಧಿಕಾರ ಎಲ್ಲರಿಗೂ ಇದೆ. ಸಮುದಾಯಕ್ಕೆ ಹಿತವನ್ನುಂಟು ಮಾಡುವ ಎಲ್ಲಾ ಪ್ರಯತ್ನಗಳಿಗೆ ನಮ್ಮ ಬೆಂಬಲ ಕೂಡ ಇದೆ. ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಕುರುಬ ಸಮುದಾಯ ಹೋರಾಟವನ್ನು ನಡೆಸುತ್ತಿದೆ. ಆ ನಿಟ್ಟಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಲು ಅಪೇಕ್ಷಿಸುವ ಜಾತಿ ಕುಲಶಾಸ್ತ್ರೀಯ ಅಧ್ಯಯನ ಆಗಲೇಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಲೋಕೇಶ್ ಕುಮಾರ್, ಆರ್ ಕೆ.ರವಿ, ಎಂ.ಮಹೇಂದ್ರ ಕಾಗಿನೆಲೆ, ಪವನ್ ಸಿದ್ಧರಾಮು, ದೀಪಕ್ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

By admin