ಈಗ ಯಂತ್ರಗಳ ಮಧ್ಯೆ, ಜನಗಳ ಮಧ್ಯೆ ಕೆಲಸ ಮಾಡಿ ನಮಗೂ ಬೇಸರ ಎನಿಸುತ್ತದೆ. ದೈಹಿಕ ಮತ್ತು ಮಾನಸಿಕವಾಗಿ ಒತ್ತಡದ ಬದುಕು ಇದರಿಂದಾಗಿ ದೇಹ ಮತ್ತು ಮನಸ್ಸು ಒಂದಷ್ಟು ಏಕಾಂತತೆಯನ್ನು ಬಯಸುತ್ತದೆ. ಹಿಂದಿನ ಕಾಲದಲ್ಲಿ ಒಂದಷ್ಟು ಸಮಯವನ್ನು ದೇವರ ಧ್ಯಾನ, ಭಜನೆ ಮಾಡುವ ಮೂಲಕ ಕಳೆಯುತ್ತಿದ್ದರು. ಈಗ ವೀಕೆಂಡ್ ಹೆಸರಿನಲ್ಲಿ ಮೋಜು ಮಸ್ತಿಯಲ್ಲಿ ದಿನಕಳೆಯುತ್ತಾರೆಯಾದರೂ ಇದರಿಂದ ಮಾನಸಿಕ ನೆಮ್ಮದಿ ಪಡೆಯುವುದು ಸಾಧ್ಯವಾಗುವುದಿಲ್ಲ.
ಪ್ರಶಾಂತ ವಾತಾವರಣದಲ್ಲಿರುವ ಯಾವುದಾದರೊಂದು ದೇವಾಲಯಕ್ಕೆ ಹೋಗಿ ಒಂದಷ್ಟು ಹೊತ್ತು ಹಸಿರು ಪರಿಸರದ ನಡುವೆ ಕಳೆದು ಬರುವುದರಿಂದ ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ಒಂದೆಡೆ ಏಕಾಂತದಲ್ಲಿ ಕೂತು ಓಂಕಾರದ ಜಪ ಮಾಡುವುದರಿಂದ ಮಾನಸಿಕ ನೆಮ್ಮದಿ ಪಡೆಯಬಹುದು ಎಂಬುವುದಾಗಿ ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯಪಡುತ್ತಾರೆ. ಇವತ್ತಿನ ಒತ್ತಡದ ಬದುಕಿನಲ್ಲಿ ಕೂತರೂ ಏನಾದರೊಂದು ಯೋಚನೆ ಮಾಡುತ್ತಲೇ ಇರುತ್ತೇವೆ. ಅದು ಅನಿವಾರ್ಯವೂ ಹೌದು. ಆದರೆ ಅದರಲ್ಲೂ ಆಗಾಗ್ಗೆ ರಿಂಗಣಿಸುವ ಮೊಬೈಲ್, ಇನ್ನೇನೋ ಒತ್ತಡಗಳು ನಮ್ಮನ್ನು ಏಕಾಂತವಾಗಿ ಇರಲು ಬಿಡುತ್ತಿಲ್ಲ. ಹಾಗಾಗಿ ಒತ್ತಡದ ಮಧ್ಯೆ ಆರೋಗ್ಯಕರ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡಬೇಕಾಗಿದೆ. ದೈಹಿಕವಾಗಿ ಆರೋಗ್ಯವಾಗಿರಬೇಕಾದರೆ ಮಾನಸಿಕ ನೆಮ್ಮದಿ ಅಗತ್ಯ. ಮಾನಸಿಕವಾಗಿ ಆರೋಗ್ಯವಾಗಿದ್ದರೆ ನಾವು ನಮ್ಮ ಕೆಲಸವನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗುತ್ತದೆ. ಓಂಕಾರದ ನಿರಂತರ ಜಪದಿಂದ ನಮ್ಮೊಳಗಿನ ಸಂಕಲ್ಪ ಶಕ್ತಿಯು ಹೆಚ್ಚುವುದಲ್ಲದೆ ಮಾನಸಿಕ ಹಾಗೂ ದೈಹಿಕ ತೊಂದರೆಯೂ ಶಮನಗೊಳ್ಳುತ್ತದೆ. ಓಂ ಎಂದು ಉದ್ಘಾರ ಮಾಡುತ್ತಾ ಭಗವಂತನನ್ನು ಧ್ಯಾನಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಓಂ ಬಳಿಕ ನಮಗಿಷ್ಟವಾದ ಭಗವಂತನ ಸ್ಮರಣೆ ಮಾಡುತ್ತೇವೆ. ಹಾಗಾದರೆ ಓಂ ಪದವನ್ನೇ ಏಕೆ ಉಚ್ಛಾರಣೆ ಮಾಡಬೇಕು ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳಬಹುದು. ಅದಕ್ಕೆ ಉತ್ತರವೂ ಇದೆ. ಓಂ ಪದದಿಂದ ಸೃಷ್ಠಿಯಲ್ಲಿ ರಚಿತವಾಗಿದೆ.
ಓಂ ಬಗ್ಗೆ ಆಧ್ಯಾತ್ಮ ಚಿಂತಕರು ಹೀಗೆಯೇ ಹೇಳಿದ್ದಾರೆ. ಅ, ಉ, ಮ ಎಂಬ ಅಕ್ಷರಗಳನ್ನು ಒಟ್ಟಿಗೆ ಓಂಕಾರದಂತೆ ಉಚ್ಛಾರ ಮಾಡಿದರೆ ಈ ಎಲ್ಲ ಶಬ್ದಗಳಿಗೆ ಓಂ ಚಿಹ್ನೆಯಾಗುತ್ತದೆ. ಆ ಕಾರದಲ್ಲಿ ಎಲ್ಲಕ್ಕಿಂತ ಕಡಿಮೆ ವಿಶೇಷಣವಿದೆ. ಇಷ್ಟೇ ಅಲ್ಲ ಭಗವದ್ಗೀತೆ ಬೋಽಸುತ್ತಾ ಕೃಷ್ಣ ಅಕ್ಷರಗಳಲಿ ಆ ಕಾರ ನಾನೇ ಎಂದಿದ್ದಾನೆ ಆ ಕಾರ ಗಂಟಲಿನ ಒಳಗಿನಿಂದ ಬಂದರೆ, ಮ ಕಾರ ಕೊನೆಗೆ ತುಟಿಯ ಮೂಲಕ ಉ ಕಾರ ನಾಲಿಗೆಯ ಆದಿಯಲ್ಲಿ ಪ್ರಾರಂಭವಾಗಿ ತುಟಿಯಲ್ಲಿ ಕೊನೆಗಾಣುವವರೆಗೂ ಇರುತ್ತದೆ. ಹಾಗೆನೋಡಿದರೆ ಓಂಕಾರದಲ್ಲಿ ವರ್ಣೋತ್ಪತ್ತಿಯ ಸ್ವರವೆಲ್ಲ ಅಡಕವಾಗಿರುವುದನ್ನು ತಳ್ಳಿ ಹಾಕುವಂತಿಲ್ಲ. ಓಂಕಾರದ ಕುರಿತಂತೆ ಹಿಂದಿನ ಕಾಲದಿಂದಲೂ ಮಹರ್ಷಿಗಳು, ಆಧ್ಯಾತ್ಮಿಕ ಚಿಂತಕರು ತಮ್ಮದೇ ಆದ ವ್ಯಾಖ್ಯಾನ ನೀಡಿರುವುದನ್ನು ನಾವು ಕಾಣಬಹುದು. ಅದರ ಮಹಿಮೆಯನ್ನು ಅರಿತು ಸಾರ್ಥಕತೆಯನ್ನು ಕಂಡಿದ್ದಾರೆ.
ಸ್ವಾಮಿ ವಿವೇಕಾನಂದರು ಓಂಕಾರದ ಕುರಿತಂತೆ ಹೇಳುತ್ತಾ ಜೀವದ ಮೇಲೆ ಅನೇಕ ಜನ್ಮ ಸಂಪ್ರದಾಯವಾದ ಸಂಸ್ಕಾರ ಎಂಬುವುದೊಂದೇ ಎಂಬುವುದನ್ನು ನಾವು ಮರೆಯಬಾರದು. ಈ ಸಂಸ್ಕಾರಗಳು ಹೆಚ್ಚು ಹೆಚ್ಚಾಗಿ ಅಂತರ್ಗತವಾಗಿದ್ದುಕೊಂಡು ಒಂದಿಷ್ಟು ಪ್ರಚೋದನೆ ಸಿಕ್ಕಾಗ ಹೊರಕ್ಕೆ ಕಾಣಿಸುತ್ತವೆ. ದ್ರವ್ಯರೂಪದ ಈ ಅಣುಗಳ ಸ್ಪಂದನವಿಲ್ಲ. ಈ ಜಗತ್ತು ಪ್ರಳಯಕ್ಕೊಳಗಾದ ಎಲ್ಲ ಬ್ರಹತ್ ಸ್ಪಂದನಗಳೂ ಕಾಣದೆ ಇದ್ದಾಗ ಸೂರ್ಯ, ನಕ್ಷತ್ರ, ಚಂದ್ರ ಮತ್ತು ಈ ಭೂಮಿಯೇ ಕರಗಿ ಹೋದರೂ ಅಣುಗಳ ಸ್ಪಂದನ ಮಾತ್ರ ನಿಲ್ಲುವುದೇ ಇಲ್ಲ. ಪ್ರತಿಯೊಂದು ಅಣುವೂ ಈ ದೊಡ್ಡ ದೊಡ್ಡ ಜಗತ್ತುಗಳು ಮಾಡುವ ಕೆಲಸವನ್ನೇ ಮಾಡುತ್ತವೆ. ಹಾಗೆಯೇ ಚಿತ್ತದ ಸ್ಪಂದನವೂ ಉಪಶಮನಗೊಂಡರೂ ಅದರ ದ್ರವ್ಯರೂಪವಾಗಿರುವ ಅಣುಗಳ ಸ್ಪಂದನವು ಮುಂದುವರಿದೇ ಇರುತ್ತದೆ. ಮತ್ತು ಯಾವುದೇ ಪ್ರೇರಣೆ ಒದಗಿದರೂ ಮತ್ತೆ ಮೈದೋರುತ್ತದೆ. ಓಂಕಾರ ಜಪದ ಪುನರಾವೃತ್ತಿಯೂ ಹಾಗೆಯೇ ಏಕೆಂದರೆ ಪವಿತ್ರವಾದುದರೊಂದಿಗಿನ ಒಂದು ಕ್ಷಣದ ಸಹವಾಸವಷ್ಟೆ ಸಾಕು ಅದೇ ಭವಸಾಗರವನ್ನು ದಾಟಿಸುವ ಹಡಗಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮನಸ್ಸಿನಿಂದ ಬೇರ್ಪಡಿಸಿಕೊಂಡು ನೋಡುವುದನ್ನು ಕಲಿಯಬೇಕು. ಪವಿತ್ರವಾದ ಓಂಕಾರವನ್ನು ಜಪಿಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಹುಚ್ಚು ಕುದುರೆಯಂತೆ ಓಡುವ ನಮ್ಮ ಮನಸ್ಸಿಗೆ ಲಗಾಮು ಹಾಕಲು ಸಾಧ್ಯವಾಗುತ್ತದೆ.
ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ ಓಂಕಾರ ಜಪ ದೈನಂದಿನ ಚಟುವಟಿಕೆಗಳ ನಡುವೆ ಚಕ್ರದಂತೆ ತಿರುಗುತ್ತಲೇ ಇರಬೇಕು. ಆಗ ಹೃದಯದ ಬೇಗೆಯೆಲ್ಲವೂ ತಣ್ಣಗಾಗುತ್ತದೆ. ಭಗವಂತನ ಆಶ್ರಯ ಪಡೆದು ಎಷ್ಟೋ ಪಾಪಿಗಳು ಪವಿತ್ರರೂ, ಮುಕ್ತರೂ ಆಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಮನಸ್ಸಿನೊಳಗೆ ಅನಪೇಕ್ಷಣೀಯ ವಿಚಾರಗಳು, ಚಾಂಚಲ್ಯಗಳು ಪ್ರವೇಶಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಓಂಕಾರದ ಜಪ ಮಾಡುವುದರಿಂದ ಅವುಗಳನ್ನು ತಡೆಯಬಹುದಾಗಿದೆ. ಪತಂಜಲಿಯ ಪ್ರಕಾರ ಓಂಕಾರವನ್ನು ಜಪಿಸಬೇಕು ಮತ್ತು ಅದರ ಅರ್ಥವನ್ನು ಪರಿಭಾವಿಸಬೇಕು. ಹೀಗೆ ಅದನ್ನು ಜಪಿಸುವ ಯೋಗಿಗೆ ಏಕಾಗ್ರತೆಯುಂಟಾಗುತ್ತದೆ. ಆ ಮೂಲಕ ಆತನ ಮನಸ್ಸು ಅಂತರಾತ್ಮದ ಕಡೆ ಹೊರಳಿ ಚಿತ್ತದ ಏಕಾಗ್ರತೆಗೆ ಅಡೆತಡೆಯಾದ ತೊಂದರೆಯಿಂದ ಬಿಡುಗಡೆ ಹೊಂದುತ್ತದೆ. ಓಂಕಾರದ ನಿರಂತರ ಜಪದಿಂದ ಹಾಗೂ ಚಿಂತನೆಯಿಂದ ನಮ್ಮೊಳಗಿನ ಸಂಕಲ್ಪ ಶಕ್ತಿಯು ಹೆಚ್ಚುತ್ತದೆ. ಅಷ್ಟೇ ಅಲ್ಲ ಮಾನಸಿಕ ಮತ್ತು ದೈಹಿಕ ತೊಂದರೆಗಳು ಸದ್ದಿಲ್ಲದೆ ನಿವಾರಣೆಯಾಗುತ್ತದೆ. ಒಂದಷ್ಟು ಹೊತ್ತನ್ನು ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಓಂಕಾರದ ಜಪದಲ್ಲಿ ತೊಡಗಿಸಿಕೊಂಡಿದ್ದೇ ಆದರೆ ಒಂದಷ್ಟು ಮನಶಾಂತಿ, ನೆಮ್ಮದಿ ಪಡೆಯಬಹುದು ಎಂಬುವುದರಲ್ಲಿ ಎರಡು ಮಾತಿಲ್ಲ.