ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಜಾತಿ ಪ್ರಮಾಣ ಪತ್ರ ನೀಡದಿರುವ ಕಾರಣ ನೀಡಿ ತಮ್ಮ ಸಮುದಾಯದ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ತೀರ್ಮಾನಿಸಿದ್ದ ಒಡ್ಡರ ಬೋವಿ ಜನಾಂಗದ ಪೋಷಕರನ್ನು ಅಧಿಕಾರಿಗಳು ಮನವೊಲಿಸಿದ ಪರಿಣಾಮ ಮಕ್ಕಳು ಶಾಲೆಗೆ ಹಾಜರಾಗಿದ್ದಾರೆ.
ತಾಲೂಕಿನ ಹೊಂಡರಬಾಳು ಗ್ರಾಮದಲ್ಲಿ ಒಡ್ಡರ ಬೋವಿ ಜನಾಂಗಕ್ಕೆ ಜಾತಿ ಪ್ರಮಾಣ ಪತ್ರ ನೀಡದಿರುವ ಕಾರಣ ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ಜನಾಂಗದ ಮುಖಂಡರು ಹಾಗೂ ಪೋಷಕರು ನಿರ್ಧರಿಸಿರುವ ಕಾರಣ ೧೫ಕ್ಕೂ ಹೆಚ್ಚು ಮಕ್ಕಳು ನಾಲ್ಕೈದು ದಿನಗಳಿಂದ ಶಾಲೆ ಹಾಗೂ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಕುರಿತ ಸುದ್ದಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ತಲುಪಿದ ಕೂಡಲೇ ಸೂಚನೆ ಮೇರೆಗೆ ತಹಶೀಲ್ದಾರ್ ವಿ. ಶಂಕರ್‌ರಾವ್ ಅವರು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಲ್. ಗಂಗಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟಿಲ್ ಅವರೊಂದಿಗೆ ಹೊಂಡರಬಾಳು ಗ್ರಾಮದ ಶಾಲೆಗೆ ಭೇಟಿ ನೀಡಿ ಮಕ್ಕಳ ಪೋಷಕರೊಂದಿಗೆ ಸಮಾಲೋಚಿಸಿದರು. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಹೀಗಾಗಿ ಮಕ್ಕಳ ಶಾಲೆಗೆ ಇಂದು ಹಾಜರಾಗಿದ್ದಾರೆ.
ಜಾತಿ ಧೃಢೀಕರಣ ನೀಡುವ ಕುರಿತು ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲಿಸಿ ಮೇಲ್ಮಟ್ಟದ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಮಕ್ಕಳು ಶಾಲೆಗೆ ಬರುವುದನ್ನು ತಪ್ಪಿಸಬಾರದು ಎಂದು ಪೋಷಕರಿಗೆ ಮನವಿ ಮಾಡಿದ ಪರಿಣಾಮ ಮಕ್ಕಳು ಶಾಲೆಗೆ ಬಂದಿದ್ದಾರೆ. ಕೊಳ್ಳೇಗಾಲದಲ್ಲಿ ವ್ಯಾಸಂಗ ಮಾಡುತ್ತಿರುವ ೩ ರಿಂದ ೪ ವಿದ್ಯಾರ್ಥಿಗಳಿಗೂ ಕಾಲೇಜಿಗೆ ಕಳುಹಿಸಲು ಸಹ ಪೋಷಕರಿಗೆ ಹೇಳಿದ್ದೇವೆ. ಪೋಷಕರೂ ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಹಶೀಲ್ದಾರ್ ವಿ. ಶಂಕರ್‌ರಾವ್ ಅವರು ತಿಳಿಸಿದ್ದಾರೆ.