ಗುಂಡ್ಲುಪೇಟೆ: ಕ್ವಾರಿಯಲ್ಲಿ ನಡೆದಿರುವ ಅಕ್ರಮ ಹಾಗು ಹತ್ತಾರು ಎಕರೆ ಒತ್ತುವರಿಯನ್ನು ಮರೆಮಾಚುವ ಉದ್ಧೇಶದಿಂದ ತಾಲೂಕಿನ ಹಿರೀಕಾಟಿ ಕ್ವಾರಿ ಸೇರಿದಂತೆ ಕೃಷಿ ಜಮೀನಿನಲ್ಲಿ ಗಣಿಗಾರಿಕೆ ಮಾಡಿದ ಅನೇಕ ಲೀಸ್‍ದಾರರು ಇದೀಗ ಕ್ರಸರ್ಸ್ ವೇಸ್ಟ್(ಸ್ಲರಿ) ಸುರಿದು ಹಳ್ಳ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ಧಾರೆ. ಈ ಬಗ್ಗೆ ತಾಲೂಕು ಮತ್ತು ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಮೌನಕ್ಕೆ ಶರಣಾಗಿದ್ದಾರೆ.

ಈಗಾಗಲೇ ಹಲವು ಕ್ವಾರಿಯಲ್ಲಿ ಹೆಚ್ಚಿನ ರೀತಿಯಲ್ಲಿ ಒತ್ತುವರಿ ಹಾಗೂ ಹಳ್ಳ ಹಿಡಿದಿದೆ. ಈ ಕಾರಣ ಹಳ್ಳ ಮುಚ್ಚಿ ಕೆಲಸ ಮಾಡಿಲ್ಲ ಎಂದು ತೋರಿಸುವ ಉದ್ದೇಶ ಹಾಗೂ ದಂಡ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಲೀಸ್ ಪಡೆದು ಹಳ್ಳ ಮಾಡಿ ಕೋಟ್ಯಾಂತರ ರೂ. ದಂಡ ಕಟ್ಟದೇ ಇರುವ ಕ್ವಾರಿಯ ಆಳ ದ್ರೋಣ್ ಸರ್ವೇ ಮಾಡಿದರೆ ತೊಂದರೆಯಾಗುತ್ತದೆ ಎಂದು ಹಳೆಯ ಲೀಸ್‍ದಾರರು ಚಾಣಾಕ್ಷ ಬುದ್ಧಿ ಉಪಯೋಗಿಸಿ ಹಳ್ಳ ಮುಚ್ಚುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇನ್ನು ಈ ಮಧ್ಯೆ ಅಧಿಕ ಮಂದಿ ಕ್ವಾರಿ ಮಾಲೀಕರು ನೂರಾರು ಕೋಟಿ ಬಾಕಿ ಉಳಿಸಿಕೊಂಡಿದ್ದರೂ ಸಹ ಅಂತವರಿಗು ಹೊಸದಾಗಿ ಲೀಸ್ ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟ ಉಂಟಾಗಲಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಸೂಕ್ರ ಕ್ರಮ ಜರುಗಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ನಡೆಯುತ್ತಿರುವ ಹಲವು ಗಣಿಗಾರಿಕೆಯಲ್ಲಿ ಹೆಚ್ಚಿನ ನ್ಯೂನ್ಯತೆಯಿದೆ. ಹೀಗಿದ್ದರೂ ಸಹ ಮಡಹಳ್ಳಿ ಗುಡ್ಡ ಹೊರತು ಪಡಿಸಿ ಅಭಿವೃದ್ಧಿ ಹೆಸರಿನಲ್ಲಿ ಇತರೆಡೆ ನಡೆಯುತ್ತಿರುವ ಗಣಿಗಾರಿಕೆಗೆ ಕೆಲ ಷರತ್ತು ವಿಧಿಸಿ ಅವಕಾಶ ನೀಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದ್ದಿದೆ.

ವರದಿ: ಬಸವರಾಜು ಎಸ್.ಹಂಗಳ