-ಚಿದ್ರೂಪ ಅಂತಃಕರಣ

ಭಾರತೀಯರೆಲ್ಲರಿಗೂ ಒಂದಷ್ಟು ತಪ್ಪಾದ ಮಾಹಿತಿ ರವಾನೆಯಾಗುತ್ತಿರುವ ಮತ್ತು ಕೆಲವೊಂದು ವಿಷಯಗಳಲ್ಲಿ ಬಲವಂತವಾಗಿ ಹೇರಿಕೆ ಕಂಡುಬರುತ್ತಿರುವುದರ ಹಿಂದಿನ ಗುಟ್ಟು ರಾಜಕೀಯದ ವಿಷತಂತ್ರ ಎಂಬುವುದು ಇದೀಗ ಎಲ್ಲಾ ವಿಚಾರಗಳ ಸರಿಯಾದ ಮೂಲ ಪರಿಶೀಲನೆಗಳಿಂದ ತಿಳಿದುಬರುತ್ತಿದೆ. ಭಾರತದ ಭವ್ಯ ಸ್ವಭಾವವೆಂದರೆ ಭಾವೈಕ್ಯತೆ. ಈ ಭಾವೈಕ್ಯತೆ ಕಾಣಲು ಪ್ರಾದೇಶಿಕತೆಯ ಸ್ವ-ಪ್ರತಿಷ್ಠೆಗಳನ್ನು ತೊಡೆದುಹಾಕಿ ದೇಶದ ವಿವಿಧತೆಗಳನ್ನು ಸಮಾನವಾಗಿ ಗೌರವಿಸುವುದು ಸಂವಿಧಾನರ್ಹ. ಈ ನಿಟ್ಟಿನಲ್ಲಿ ಕ್ರೀಡಾ ಕ್ಷೇತ್ರದ ಮೂಲಕ ಭಾರತ ವಿಶ್ವಕ್ಕೆ ತೆರದುಕೊಂಡದ್ದು ಒಂದು ಬಗೆಯ ವೈವಿಧ್ಯತೆಯ ಸೂಚ್ಯಾಂಶ. ಭಾರತದಲ್ಲಿ ಕ್ರೀಡೆಗಳು ಹಲವಿವೆ; ಇವುಗಳು ರಾಜ್ಯ ವಿಂಗಡಿತ ಪ್ರಾದೇಶಿಕ ಗೌರವ ಮಾತ್ರವಾಗಿ ಗುರುತಾಗಬಾರದು ಬದಲಿಗೆ ಒಟ್ಟಾರೆ ದೇಶದ ಸಾಧನೆಯ ಪ್ರತೀಕವಾಗಿ ಮುಂಬರಬೇಕು. ಇದಕ್ಕನುಸಾರವಾಗಿ ಸಂವಿಧಾನದಲ್ಲಿ ಸ್ಥಾನಮಾನ ಸಮಾನತೆಗಳು ಅಳವಡಿಕೆಯಾಗಿರುವುದು ಎಲ್ಲರ ಪಾಲ್ಗೊಳ್ಳುವಿಕೆಯನ್ನು ಗೌರವಿಸುವುದಾಗಿದೆ. ಇದನ್ನು ಭಾರತೀಯರಾದ ನಾವುಗಳು ಮೊದಲು ಅರ್ಥಮಾಡಿಕೊಳ್ಳಬೇಕು.


ಹಾಕಿ ಆಟ ಭಾರತೀಯ ಕ್ರೀಡಾ ಜಗತ್ತಿನಲ್ಲಿಯೇ ಒಲಂಪಿಕ್ ವಿಭಾಗದಲ್ಲಿ ವಿಶ್ವ ಪ್ರಜ್ಞೆಗೆ ಮುನ್ನುಡಿ ಬರೆದಂತಹ ಆಟ ಎನ್ನುವುದು ಗೌರವಾರ್ಹ. ಭಾರತದ ಹಾಕಿ ಆಟದ ಸಾಧಕಗಳು ಮೈನವಿರೇಳಿಸುತ್ತವೆ. ಇಂದು ಸಕಲ ಕ್ರೀಡಾ ಸೌಕರ್ಯಗಳು ಎಲ್ಲಾ ಕ್ರೀಡೆಗಳ ಕ್ರೀಡಾಪಟುಗಳಿಗೆ ದಕ್ಕುತ್ತಿವೆ. ಆದರೆ ಭಾರತೀಯ ಕ್ರೀಡಾರಂಗದ ಆರಂಭದಲ್ಲಿ ಕ್ರೀಡಾಪಟುಗಳಿಗೆ ಯಾವುದೇ ಸೌಲಭ್ಯಗಳು ಸಮರ್ಥವಾಗಿ ದೊರಕುತ್ತಿರಲಿಲ್ಲ. ಆ ಸಂದರ್ಭದಲ್ಲಿ ಕೊರತೆಗಳಲ್ಲಿಯೇ ಹಾಕಿ ಆಟದ ಕ್ರೀಡಾಪಟುಗಳು ಒಲಿಂಪಿಕ್ ನಲ್ಲಿ ಭಾಗವಹಿಸಿ ಕ್ರೀಡಾ ಸಾಧನೆಯ ಮೂಲಕ ಗೌರವ ಕಿರೀಟವನ್ನು ಭಾರತದ ಮುಡಿಗೇರಿಸಿದ್ದರು. ಇದಕ್ಕೆ ಭಾರತೀಯರೆಲ್ಲರೂ ಋಣಿ. ಈ ಬಗೆಯಲ್ಲಿ ಧ್ಯಾನ್ ಚಂದ್ ಅವರು ಹಾಕಿ ಆಟದ ಧೃವತಾರೆಯಾಗಿ ಆ ಸಂದರ್ಭದಲ್ಲಿ ಕಾಣಿಸಿಕೊಂಡದಕ್ಕೆ ಪ್ರತಿಫಲವಾಗಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಈ ರೀತಿಯಾಗಿ ಪ್ರಶಸ್ತಿ ಪಡೆಯುವಲ್ಲಿ ಎಲ್ಲಾ ಕ್ರೀಡೆಯ ಮಹತ್ತರ ಸಾಧಕ, ಸಾಧಕಿ ಕ್ರೀಡಾಪಟುಗಳಿಗೂ ಸಮಾನ ಹಕ್ಕಿದೆ. ಇಲ್ಲಿವರೆಗೆ ಆಯಾಯ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ವಿವಿಧ ಪ್ರಶಸ್ತಿ ನೀಡಿ ಗೌರವ ಮತ್ತು ಪ್ರೋತ್ಸಾಹ ತೋರುತ್ತಾ ಬಂದಿದೆ. ಈ ಹಕ್ಕು ಮತ್ತು ಕರ್ತವ್ಯ ನಮ್ಮ ಸಂವಿಧಾನ.


ಈ ಹಾಕಿ ಆಟದಂತೆಯೇ ಇನ್ನಿತರ ದೇಶಿ ಕ್ರೀಡೆಗಳು ರೂಢಿಗತವಾಗಿ ಹಾಗು ವಿದೇಶಿ ಕ್ರೀಡೆಗಳು ಹೊಸತನದ ಸ್ವೀಕೃತಿಯಲ್ಲಿ ಹೆಚ್ಚಿನ ಅಭ್ಯಾಸವಾಗಿ ಭಾರತೀಯ ಕ್ರೀಡಾಪಟುಗಳಿಗೆ ಪರಿಚಯವಾಯಿತು. ಆ ಮೂಲಕ ಭಾರತದ ಕ್ರೀಡಾ ಹಿರಿಮೆ ಗರಿಮೆ ಹೆಚ್ಚಿತು. ಹೀಗಾಗಿ ದೇಶದ ಯಾವುದೇ ಕ್ರೀಡೆಯು ಸಂವಿಧಾನ ಮುಖೇನ ಸಮಾನ ಗೌರವಕ್ಕೆ ಅರ್ಹ. ಹೀಗಿರುವಾಗ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಆಟ ಎಂದು ಪ್ರತ್ಯೇಕ ಗೌರವ ಅಥವಾ ಪದವಿ ಸಮರ್ಪಣೆ ಸಲ್ಲಿಸುವುದು ಅಸಮಾನತೆ ತೋರಿದಂತೆ‌. ಈ ಸುಳ್ಳು ವದಂತಿ ದೇಶದ ಒಳಗಿ‌ನ ರಾಜ್ಯಗಳ ಪ್ರಾದೇಶಿಕ ಪ್ರತಿಷ್ಠೆಯನ್ನು ತೋರಿಸಿದಂತೆ ಕಾಣುತ್ತದೆಯೇ ಹೊರತು ಸಂವಿಧಾನದ ಆಶಯಕ್ಕೆ ಒಳಪಡುವುದಿಲ್ಲ.


ಭಾರತ ಸಂವಿಧಾನವು ಸಮಾನತೆಯ ತಳಹದಿಯೊಂದಿಗೆ ರಚನೆಯಾಗಿರುವ ವಿಶ್ವದ ಪ್ರಮುಖ ಪ್ರಜಾಪ್ರಭುತ್ವ ಕಾನೂನಾಗಿದೆ. ಹೀಗಿರುವಾಗ ಭಾರತ ದೇಶದಲ್ಲಿ ಹೇಗೆತಾನೆ ಎಲ್ಲಾ ಕ್ಷೇತ್ರಗಳಲ್ಲಿ ಯಾವುದೋ ಒಂದು ವಿಷಯಕ್ಕೆ ಮಾತ್ರ ಅಗ್ರಸ್ಥಾನ ಅಥವಾ ಪ್ರಥಮ ಸ್ಥಾನ ನೀಡಿ ಇನ್ನುಳಿದವುಗಳನ್ನು ಮೂಲೆಗುಂಪು ಮಾಡಲು ಸಾಧ್ಯ. ಇದು ಸಂವಿಧಾನ ವಿರುದ್ಧ ಅಲ್ಲವೇ? ಈ ರೀತಿ ಸಂವಿಧಾನ ವಿರುದ್ಧ ಚಟುವಟಿಕೆಗಳು ಜರಗುತ್ತಿದ್ದು ಈಗದು ಸರಿಯಾಗಿ ಗೊತ್ತಾಗುವ ಸಂದರ್ಭದಲ್ಲಿ ಹಾಗಾದರೆ ಇಷ್ಟು ದಿನ ಸಂವಿಧಾನ ಯಾರಿಗೂ ಅರ್ಥವಾಗಿರಲಿಲ್ಲವೇ? ಇಷ್ಟು ದಿನ ಸಂವಿಧಾನದ ಕಣ್ಣಿಗೆ ಮಣ್ಣೆರೆಚಿ ಸುಳ್ಳು ವದಂತಿಯನ್ನು ಹಬ್ಬಿಸಿದ ಸಂವಿಧಾನ ವಿರುದ್ಧ ಮೋಸಗಾರರು ಪತ್ತೆಯಾಗಲಿಲ್ಲವೇಕೆ?


ಶಾಲೆಗಳಲ್ಲಿ ಶಿಕ್ಷಕರೇ, ರಾಷ್ಟ್ರೀಯ ಕ್ರೀಡೆ “ಹಾಕಿ ಆಟ” ಎಂಬ ತಪ್ಪು ಸಂದೇಶವನ್ನು ನಮಗೆ ಕಂಠಪಾಠ ಅಥವಾ ಮನದಟ್ಟು ಮಾಡಿಸುತ್ತಿದ್ದದ್ದು ದೊಡ್ಡ ವಿಪರ್ಯಾಸ! ಪಾಪ ಅವರಿಗೂ ಇನ್ನೆಷ್ಟರಮಟ್ಟಿಗೆ ಅವರ ಶಿಕ್ಷಕರು ಈ ತಪ್ಪಾದ ಮಾಹಿತಿಯನ್ನು ವರ್ಷಗಟ್ಟಲೇ ಕಿವಿ ಊದಿರಬಹುದು! ನಾವುಗಳು ಈ ಹಿಂದೆ ಶಾಲಾ ಪರೀಕ್ಷೆಯಲ್ಲಿ ಕೇಳಿದ ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು? ಎಂಬ ಪ್ರಶ್ನೆಗೆ ಸರಿ ಉತ್ತರವೆಂದು ಉತ್ತರಿಸಿದ ಹಾಕಿ ಆಟ ಎಂಬ ಉತ್ತರ ಇಂದು ತಪ್ಪಾಗಿದೆ ಎಂದು ತಿಳಿದಿರುವಲ್ಲಿ ನಾವೆಲ್ಲಾ ತಪ್ಪು ಅಂಕಗಳೊಂದಿಗೆ ತೇರ್ಗಡೆಹೊಂದಿ ಬಂದಿದ್ದೇವೆ ಎಂದು ತಿಳಿದು ನಾಚಿಕೆ ಎನಿಸುತ್ತಿದೆ.


2008ರ ದೈಹಿಕ ಶಿಕ್ಷಣ ವಿಷಯದ ಅಧ್ಯಾಯ-2ರಲ್ಲಿ ನಮೂದಿತವಾಗಿರುವ ಪಠ್ಯಹೇಳಿಕೆ ಈ ರೀತಿ ಇದೆ; “ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಹಾಕಿ ಆಟವು ಭಾರತದ ಪ್ರಸಿದ್ಧ ರಾಷ್ಟ್ರೀಯ ಕ್ರೀಡೆಯಾಗಿ ಗುರುತಿಸಲ್ಪಟ್ಟಿದೆ”(ಪುಟ ಸಂಖ್ಯೆ 6) ಈ ಮಾಹಿತಿ ಕೇವಲ 2008ರ ದೈಹಿಕ ಶಿಕ್ಷಣ ಪಠ್ಯಕ್ರಮದಲ್ಲಿ ಮಾತ್ರವಿಲ್ಲ ಪ್ರಾಥಮಿಕ ಶಾಲೆಯ ಇತರ ವಿಷಯ ಪಠ್ಯಕ್ರಮದಲ್ಲೂ ನಮೂದಿಸಲಾಗಿದೆ, ಅದಕ್ಕೆ ದಾಖಲೆಗಳಿವೆ. ಪಠ್ಯಕ್ರಮದಲ್ಲಿದ್ದ ಮಾಹಿತಿಯಿಂದಾಗಿ ಈ ತಪ್ಪಾದ ಮಾಹಿತಿಯ ಪ್ರಚಾರಕ್ಕೆ ಶಿಕ್ಷಕರೇನು ನೇರ ಹೊಣೆಗಾರರಾಗುವುದಿಲ್ಲ. ಆದರೆ ಇದರ ಬಗ್ಗೆ ಯಾರೊಬ್ಬರಿಗಾದರೂ ಇದು ಸರಿಯೇ? ತಪ್ಪೇ? ಎನ್ನುವುದರ ಪ್ರಶ್ನೆ ಮತ್ತು ಅನುಮಾನ ಮೂಡದಿರುವುದು ಪ್ರತಿಯೊಬ್ಬರ ಕುರಿನಡೆಯನ್ನು ಸೂಚಿಸುತ್ತದೆ. ಪಠ್ಯಕ್ರಮದಲ್ಲಿ ಈ ರೀತಿ ತಪ್ಪಾದ ಅಂಕಿ ಅಂಶಗಳನ್ನು ಸೇರಿಸುತ್ತಿದ್ದ ಪಠ್ಯಕ್ರಮ ಆಯ್ಕೆ ಸಮಿತಿಯ ಆಗಿನ ಸದಸ್ಯರುಗಳ ಬೌದ್ಧಿಕ ಪ್ರಜ್ಞೆ ಎಷ್ಟಿತ್ತೆಂದು ತಿಳಿಯಪಡುತ್ತದೆ. ಏನೇ ಇರಲಿ ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿ ದೋಷ ಕಂಡು ಬಂದಿರುವುದು ಅಸಹನೀಯ.


ಹಾಗಾಗಿಯೂ ಆಯ್ಕೆಯ ಸಮಿತಿಯಲ್ಲಿ ಅರ್ಹರೇ ಇದ್ದರೆಂದಿಟ್ಟುಕೊಳ್ಳೋಣ; ಆದರೆ ಲೋಪದೋಷಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುದುದರ ಕೈವಾಡದ ದುರುದ್ದೇಶ ಏನಿರಬಹುದು? ಯಾಕಿರಬಹುದು? ಯಾರದಿರಬಹುದು? ಎಲ್ಲವೂ ಮುಗಿದು ಹೋದ ಇಂದಿಗೆ ಯಕ್ಷಪ್ರಶ್ನೆ. ಇನ್ನೂ ಅದೆಷ್ಟು ಲೋಪದೋಷಗಳು ಅಥವಾ ತಪ್ಪಾದ ಮಾಹಿತಿಗಳು ಪಠ್ಯಕ್ರಮದಲ್ಲಿ‌ ಸೇರಿರಬಹುದು! ಎಲ್ಲವೂ ಮುಂದಿನ ದಿನಮಾನಗಳಲ್ಲಿ ತಿಳಿಯುತ್ತದೆ ಮತ್ತು ಬಗೆಹರಿಯುವುದು ಅಷ್ಟೇ ಅಗತ್ಯವಾಗಿದೆ.


ಈ ವಿಚಾರವಾಗಿ ಮಾಹಿತಿ ಹಕ್ಕುಗೆ ಪ್ರಶ್ನೆಯಾಗಿ ಬಂದ ವೇಳೆಯಲ್ಲಿ ಯುವಜನ ಕ್ರೀಡೆಗಳ ಒಕ್ಕೂಟ ಸಚಿವಾಲಯವು ಇತ್ತೀಚೆಗೆ ಸ್ಪಷ್ಟವಾಗಿ ತಿಳಿಸಿದೆ. ನಮ್ಮ ಭಾರತ ದೇಶವು ಯಾವುದೇ ರಾಷ್ಟ್ರೀಯ ಕ್ರೀಡೆಯನ್ನು ಹೊಂದಿಲ್ಲ. ಈ ಹಿಂದೆ ಒಲಂಪಿಕ್ ನಲ್ಲಿ ಭಾರತದ ಹಾಕಿ ತಂಡವು 8 ಪದಕವನ್ನು ಗೆದ್ದಿತ್ತು. ಆ ಸಂದರ್ಭದಲ್ಲಿ ಕ್ರಿಕೆಟ್ ಗಿಂತ ಹಾಕಿ ಆಟ ಹೆಚ್ಚು ಪ್ರಸಿದ್ಧವಾಗಿತ್ತು ಹಾಗಾಗಿ ಇದು ಜನರಲ್ಲಿ ಸಹಜವಾಗಿ ಹಾಕಿ ಆಟ ಭಾರತದ ರಾಷ್ಟ್ರೀಯ ಕ್ರೀಡೆ ಎನಿಸಿರಬಹುದು ಅಥವಾ ಸುಳ್ಳು ಸುದ್ದಿಯಾಗಿ ಯಾರೋ ಹರಡಿರಬಹುದು. ಇದು ಅಂದು ಬಹಿರಂಗಗೊಂಡ ತಪ್ಪಾದ ಮಾಹಿತಿಯೇ ಹೊರತು ನಮ್ಮ ಸಂವಿಧಾನಬದ್ಧ ಭಾರತ ದೇಶದಲ್ಲಿ ಯಾವುದೇ ಕ್ರೀಡೆಗೆ ಪ್ರತ್ಯೇಕವಾಗಿ ರಾಷ್ಟ್ರೀಯ ಕ್ರೀಡೆ ಎಂದು ಸ್ಥಾನಮಾನ ನೀಡಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ‌.


ಹೀಗಾಗಿ ಪಠ್ಯಕ್ರಮದಲ್ಲಿರುವ ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಆಟ ಎಂಬುವುದನ್ನು ಆದಷ್ಟು ಬೇಗ ತೆಗೆದುಹಾಕಿ ಸಾಮಾಜಿಕ ಅರಿವನ್ನು ಸಂಬಂಧಪಟ್ಟವರು ದೇಶದ ಜನತೆಯಲ್ಲಿ ಮೂಡಿಸುವುದು ಒಳಿತು. ಜೊತೆಗೆ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆ ಎಂದು ಬಲವಂತವಾಗಿ ಹೇರಿಕೆ ಮಾಡುತ್ತಿರುವ ದುರುದ್ದೇಶವೂ ಈ ಬಗೆಯದ್ದೇ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಈ ರೀತಿಯ ಪ್ರಾದೇಶಿಕ ಪ್ರತಿಷ್ಠೆಗಳ ಸಲುವಾಗಿ, ರಾಜಕೀಯ ಸ್ವಾರ್ಥ ಅಧಿಕಾರ ಸ್ಥಾಪನೆಯ ಸಲುವಾಗಿ ದೇಶದಲ್ಲಿ ವೈವಿಧ್ಯತೆಯನ್ನು ಬಗ್ಗುಬಡಿದು ಏಕತಾನತೆಯನ್ನು ಅಥವಾ ನಿರಂಕುಶತೆಯನ್ನು ಸೃಷ್ಟಿಸುವುದು ಭಾರತ ಸಂವಿಧಾನಕ್ಕೆ ಸಲ್ಲಿಸುವ ಅಗೌರವಾಗಿದೆ.

ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ವಿಮರ್ಶಕ, ಸಂಶೋಧಕ
ಹೆಚ್ .ಡಿ . ಕೋಟೆ ಮೈಸೂರು.
ದೂರವಾಣಿ ಸಂಖ್ಯೆ:-8884684726