ಗುಂಡ್ಲುಪೇಟೆ: ಸ್ಥಗಿತಗೊಂಡಿದ್ದ ಗಣಿಗಾರಿಕೆ ಪುನರ್ ಆರಂಭಿಸುವಂತೆ ಜಿಲ್ಲಾಡಳಿತ ಸೂಚನೆ ನೀಡುವ ಮುನ್ನವೇ ತಾಲೂಕಿನ ಹಿರೀಕಾಟಿ ಕ್ವಾರಿಯಲ್ಲಿ ಗಣಿಗಾರಿಕೆ ಮಂಗಳವಾರ ಬೆಳಗ್ಗೆಯಿಂದಲೇ ಪ್ರಾರಂಭವಾಗಿದೆ. ಇದರಿಂದ ಜಿಲ್ಲಾಡಳಿತ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ.

ಮಡಹಳ್ಳಿ ಗುಡ್ಡ ಕುಸಿತದ ಪ್ರಕರಣದ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನಿರ್ದೆಶನದ ಮೇರೆಗೆ ಜಿಲ್ಲೆಯ ಎಲ್ಲಾ ಕ್ವಾರಿಯ ಗಣಿಗಾರಿಕೆ ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸುರಕ್ಷಿತ ಕ್ರಮಗಳನ್ನು ಪರಿಶೀಲಿಸಿ ನಂತರ ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಸೂಚಿಸಲಾಗಿತ್ತು. ಈ ಮಧ್ಯೆ ಮಾ.30ರಂದು ಅನುಮತಿ ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿದ್ದತೆ ನಡೆಸಿದ್ದರು. ಇದರ ವರದಿ ಬರುವ ಮುನ್ನವೇ ಕೆಲವು ಕ್ವಾರಿಗಳು ಮಾ.29ರ ಬೆಳಗ್ಗೆಯಿಂದಲೇ ಕೆಲಸ ಆರಂಭಿಸಿವೆ.

ಮಾ.29ರ ಮಂಗಳವಾರ ಬೆಳಗ್ಗೆಯಿಂದಲೇ ಹಿರೀಕಾಟಿ ಕ್ವಾರಿಯಲ್ಲಿ ಗಣಿಗಾರಿಕೆ ಆರಂಭಿಸಲಾಗಿದ್ದು, ಹಿಟಾಚಿ ಮೂಲಕ ಟಿಪ್ಪರ್‍ಗಳಿಗೆ ಕಲ್ಲು ತುಂಬಲಾಗುತ್ತಿದೆ. ಜೊತೆಗೆ ಸ್ಪೋಟಕದ ವಾಹನವೂ ಕೂಡ ಬಂದು ನಿಂತಿದೆ. ವಿಷಯ ಅರಿತ ಬೇಗೂರು ಪೊಲೀಸರು ನೆಪಮಾತ್ರಕ್ಕೆ ಕ್ವಾರಿಗಳಿಗೆ ಹೋಗಿ ಕನಿಷ್ಟ ಪ್ರಶ್ನೆಯನ್ನು ಮಾಡದೆ ವಾಪಸ್ ಬಂದಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ ಮಾತನಾಡಿ, ಜಿಲ್ಲಾಡಳಿತ ಸೂಚನೆ ಮೇರೆಗೆ ಗಣಿಗಾರಿಕೆ ನಿಲ್ಲಿಸಿ ಎಂದು ಕ್ವಾರಿ ಮಾಲೀಕರಿಗೆ ಪತ್ರ ನೀಡಿದ್ದೇವು. ಮಾ.30ರಂದು ಕ್ವಾರಿ ಕೆಲಸ ಮತ್ತೆ ಪ್ರಾಂಭಿಸಲು ಪತ್ರ ನೀಡಲಾಗುವುದು. ನಂತರ ನಿಯಮ ಬದ್ದವಾಗಿರುವ ಕ್ವಾರಿಯಲ್ಲಿ ಕೆಲಸ ಆರಂಭವಾಗಲಿದೆ. ತಪಾಸಣಾ ವರದಿ ಆಧಾರಿಸಿಯೇ ಗಣಿಗಾರಿಕೆಗೆ ಅನುಮತಿ ನೀಡುತ್ತಿದ್ದು, ಕ್ವಾರಿಯಲ್ಲಿ ಕೆಲ ನ್ಯೂನತೆ ಸರಿಪಡಿಸಿಕೊಳ್ಳಲು 2ರಿಂದ 3 ತಿಂಗಳ ಅವಕಾಶ ನೀಡಲಾಗುವುದು. ಜೊತೆಗೆ ವಾರದಲ್ಲಿ ಎರಡು ದಿನ ಕ್ವಾರಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ವರದಿ: ಬಸವರಾಜು ಎಸ್.ಹಂಗಳ