ಚಾಮರಾಜನಗರ: ತಂಬಾಕು ನಿಯಂತ್ರಣ ಕೋಟ್ಪಾ ಕಾಯ್ದೆಯನ್ನು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲೂಕು ಆರೋಗ್ಯಾಧಿಕಾರಿಗಳು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸದಸ್ಯ ಕಾರ್ಯದರ್ಶಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಸೂಚಿಸಿದರು. 
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿಯಿಂದ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂಬಾಕು ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಆಯಾ ತಾಲೂಕು ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಪ್ರತಿ ೩ ತಿಂಗಳಿಗೊಮ್ಮೆ ಸಭೆ ಕರೆದು ವಿವಿಧ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದು ತಂಬಾಕು ಬಳಕೆ ನಿಯಂತ್ರಣಕ್ಕಾಗಿ ಸಕ್ರಿಯರಾಗಬೇಕು. ಯಳಂದೂರು ತಾಲೂಕು ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಕಾಯ್ದೆಯ ಅನುಷ್ಠಾನ ಪ್ರಗತಿಗೆ ತಾಲೂಕು ಆರೋಗ್ಯಾಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.
ವಿವಿಧ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಕಚೇರಿಗಳಿಗೆ ಘಟಕದ ವತಿಯಿಂದ ೨ ಸಾವಿರ ತಂಬಾಕು ಮುಕ್ತ ವಲಯ ನಾಮಫಲಕವನ್ನು ಮುದ್ರಿಸಿ ಈಗಾಗಲೇ ವಿತರಿಸಲಾಗಿದ್ದು, ಆಯಾ ಇಲಾಖೆಗಳ ಮುಖ್ಯಸ್ಥರಿಂದ ಘೋಷಣಾ ಪತ್ರವನ್ನು ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ಸಲ್ಲಿಸಲು ಜಿಲ್ಲಾ ಆಡಳಿತದಿಂದ ಸುತ್ತೋಲೆ ಹೊರಡಿಸಲಾಗಿದೆ. ಜಿಲ್ಲೆಯ ಎಲ್ಲಾ ಇಲಾಖೆ ಕಚೇರಿಗಳ ಮುಂಭಾಗದಲ್ಲಿ ಧೂಮಪಾನ ನಿಷೇಧದ ನಾಮಫಲಕ ಸೆಕ್ಷನ್-೪ ಹಾಗೂ ತಂಬಾಕು ಮುಕ್ತ ವಲಯದ ಫಲಕಗಳನ್ನು ಪ್ರದರ್ಶಿಸಬೇಕು ಎಂದು ತಿಳಿಸಿದರು.
ಆರೋಗ್ಯ ಇಲಾಖೆಯು ನಡೆಸುವ ಐ.ಇ.ಸಿ ಕಾರ್ಯಕ್ರಮಗಳೊಂದಿಗೆ ವಿಶೇಷವಾಗಿ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಅಳವಡಿಸಿಕೊಂಡಿದೆ. ಸಾರಿಗೆ ಇಲಾಖೆ ವತಿಯಿಂದ ಸವಾರರಿಗೆ ವಾಹನಗಳ ಚಲಾವಣೆ ಹಾಗೂ ಎಲ್.ಎಲ್.ಆರ್ ಪರೀಕ್ಷೆ ವೇಳೆ ತಂಬಾಕು ನಿಯಂತ್ರಣದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು. ಆಟೋ, ಕಾರು ಹಾಗೂ ವಿವಿಧ ವಾಹನಗಳ ಮೇಲೆ ಚಲನಚಿತ್ರ ನಟರು ಧೂಮಪಾನ ಮಾಡುವ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದು ನಿಯಮಾನುಸಾರ ಮೋಟಾರು ವಾಹನಗಳ ಕಾಯ್ದೆ ಹಾಗೂ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಾಗುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ತಂಬಾಕು ಸೇವನೆ ಮಾಡಲು ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ಚಿಕ್ಕ ಮಕ್ಕಳನ್ನು ತಂಬಾಕು ಉತ್ಪನ್ನಗಳನ್ನು ಅಂಗಡಿಯಿಂದ ತರಲು ಬಳಸಿಕೊಳ್ಳುತ್ತಿದ್ದು, ಈ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸಲು ಶಿಕ್ಷಣ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಲಾಗುವುದು. ಶಾಲೆಗಳ ೧೦೦ ಗಜ ಅಂತರದಲ್ಲಿ ಯಾವುದೇ ಬಗೆಯ ತಂಬಾಕು ಉತ್ಪನ್ನಗಳನ್ನು ನಿಷೇಧಿಸುವ ಕುರಿತು ಸುತ್ತೋಲೆಯಲ್ಲಿರುವ ಮಾನದಂಡಗಳನ್ನು ಎಲ್ಲಾ ಶಾಲೆಗಳು ಕಟ್ಟುನಿಟ್ಟಾಗಿ ಅನುಸರಿಸಿ ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ನಗರಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಆಯಾಯ ವ್ಯಾಪ್ತಿಯಲ್ಲಿ ಮನೆಮನೆ ಕಸ ಸಂಗ್ರಹಿಸುವ ವಾಹನಗಳಲ್ಲಿ ತಂಬಾಕು ನಿಯಂತ್ರಣದ ಅರಿವು ಮೂಡಿಸುವ ಪ್ರಚಾರ ಫಲಕ ಅಳವಡಿಸಬೇಕು. ಮೈಕ್ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ವಿವಿಧ ನ್ಯಾಯಬೆಲೆ ಅಂಗಡಿಗಳ ಮುಂಭಾಗ ತಂಬಾಕು ನಿಷೇಧದ ನಾಮಫಲಕವನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಬೇಕು. ಅರಣ್ಯದಲ್ಲಿ ಟ್ರಕ್ಕಿಂಗ್ ಮಾಡುವವರಿಗೆ ತಿಳಿಯುವಂತೆ ಅರಣ್ಯ ಇಲಾಖೆಯ ಮುಂಭಾಗದಲ್ಲೂ ಸಹ ತಂಬಾಕು ನಿಯಂತ್ರಣದ ಪ್ರಚಾರ ಫಲಕ ಅಳವಡಿಸಬೇಕು ಎಂದು ತಿಳಿಸಿದರು.
ಬದನಗುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಿಯಾಲ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿಸಲು  ಶಿಕ್ಷಣ ಮತ್ತು ಆರೋಗ್ಯ ಇಲಾಖೆ ವತಿಯಿಂದ ಹೆಚ್ಚಿನ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಪೊಲೀಸ್ ಇಲಾಖೆಯಿಂದ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ದಂಡ ವಿಧಿಸಿದ ವಿವರಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಅಬಕಾರಿ ಇಲಾಖೆ ವತಿಯಿಂದ ಬಾರ್, ರೆಸ್ಟೊರೆಂಟ್‌ಗಳ ಬಳಿ ಧೂಮಪಾನ ಮಾಡುತ್ತಿದ್ದ ೭೭ ಪ್ರಕರಣಗಳಲ್ಲಿ ದಾಳಿ ನಡೆಸಿ ೨೪೦೫ ರೂ. ಗಳ ದಂಡ ವಿಧಿಸಲಾಗಿದೆ ಎಂದು ಸಭೆಗೆ ತಿಳಿಸಿದರು.   
ತಂಬಾಕು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ನಾಗರಾಜು ಸೇರಿದಂತೆ ವಿವಿಧ ತಾಲೂಕು ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸಭೆಯ ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಕೆ.ಎಂ. ವಿಶ್ವೇಶ್ವರಯ್ಯ ಅವರು ತಂಬಾಕು ನಿಯಂತ್ರಣ ಅರಿವು ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿದರು.