ಚಾಮರಾಜನಗರ: ಮಾನವ ಜೀವಿಯನ್ನು ಶಾಂತಿ, ಸಹನೆ, ಪ್ರೀತಿಯಿಂದ ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವುದೇ ಭಗನಾನ್ ಮಹಾವೀರರ ಅಹಿಂಸಾ ಮಾರ್ಗವಾಗಿದೆ ಎಂದು ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಎಂ. ರಾಮಚಂದ್ರ ಅವರು ಅಭಿಪ್ರಾಯಪಟ್ಟರು. 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಗವಾನ್ ವರ್ಧಮಾನ ಮಹಾವೀರರ ಜಯಂತಿಯನ್ನು ಉದ್ಘಾಟಿಸಿ, ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಭದ್ರಬುನಾದಿಗೆ ಎಲ್ಲಾ ಧರ್ಮ-ಸಂಸ್ಕೃತಿಗಳು ಅಡಿಪಾಯವಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು ಜೈನಧರ್ಮ ಬೋಧಿಸಿದ ಅಹಿಂಸಾ ಮಾರ್ಗವಾಗಿದೆ. ಯಾವುದೇ ಜೀವಿಗೆ ಕೆಡುಕನ್ನು ಬಯಸದೇ ಸತ್ಯ, ಅಹಿಂಸೆಯಿಂದ, ಸರ್ವರನ್ನು ಶಾಂತಿ, ಪ್ರೀತಿಯಿಂದ ಕಾಣುವುದೇ ಜೈನಧರ್ಮದ ಸಾರವಾಗಿದೆ. ಮಹಾವೀರರ ನಡೆ-ನುಡಿ, ಆಚಾರ-ವಿಚಾರ, ತಾತ್ವಿಕ ಚಿಂತನೆಗಳು, ಮಾನವೀಯ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ರಾಮಚಂದ್ರ ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರು ಹಾಗೂ ಉಪನ್ಯಾಸಕರಾದ ಸುರೇಶ್ ಋಗ್ವೇದಿ ಅವರು ಮಾತನಾಡಿ ಪ್ರತಿಯೊಬ್ಬರು ಭಗವಾನ್ ಮಹಾವೀರರ ಜೀವನ, ಇತಿಹಾಸ, ಜಿನ ಪರಂಪರೆಯನ್ನು ಅಧ್ಯಯನ ಮಾಡಿದಾಗ ಸತ್ತ ಮತ್ತು ಅಹಿಂಸೆಯ ಸಾರ ಅರಿವಾಗಲಿದೆ. ಮಾನವನ ಪರಿಪೂರ್ಣತೆಗೆ ಅಹಿಂಸೆಯೇ ಮೂಲ. ಮನುಷ್ಯನು ತನ್ನ ಜೀವಿತ ಕಾಲದಲ್ಲಿ ಎಲ್ಲಾ ಇಂದ್ರಿಯಗಳನ್ನು ನಿಗ್ರಹಿಸಿ ಅತ್ಮ ಸಾಕ್ಷಾತ್ಕಾರ ಹೊಂದಬೇಕೆಂಬ ಶ್ರೇಷ್ಠ ಚಿಂತನೆಯನ್ನು ಭಗವಾನ್ ಮಹಾವೀರರ ಭಾರತದ ಮೂಲಕ ಇಡೀ ವಿಶ್ವಕ್ಕೆ ತೋರಿಸಿಕೊಟ್ಟರು ಎಂದರು.
ಇದುವರೆಗೆ ಭಾರತದ ಮೇಲೆ ಅನೇಕ ದೇಶಗಳು ದಾಳಿ ಮಾಡಿವೆ. ಸಾಕಷ್ಟು ಪ್ರಬಲವಾಗಿದ್ದರೂ ಸಹ ಭಾರತ ಮಾತ್ರ ಯಾವುದೇ ದೇಶದ ಮೇಲೆ ದಾಳಿ ಮಾಡದಿರುವುದು ಇತಿಹಾಸದಿಂದ ತಿಳಿದಿದೆ. ದೇಶಕ್ಕೆ ಸಾಧುಸಂತರು, ದಾರ್ಶನಿಕರು, ಮಹಾನ್ ಚಿಂತಕರು ಹಾಕಿಕೊಟ್ಟ ಪರಿಪೂರ್ಣ ಮಾನವೀಯ ಮೌಲ್ಯಗಳು, ತತ್ವ ಸಿದ್ದಾಂತಗಳು ಭಾರತ ಇಂದು ವಿಶ್ವಗುರುವಾಗಲು ಕಾರಣವಾಗಿದೆ. ಮಹಾತ್ಮ ಗಾಂಧಿಜೀಯವರು ಸಹ ಮಹಾವೀರರ ಅಹಿಂಸಾ ಮಾರ್ಗವನ್ನು ಅನುಸರಿಸಿ ರಾಷ್ಟ್ರಪಿತರಾಗಿ ವಿಶ್ವದ ಗಮನ ಸೆಳೆದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂದು ತಿಳಿಸಿದರು.
ಚಾಮರಾಜನಗರ ಅರಿಕುಠಾರವಾಗಿದ್ದ ಕಾಲಘಟ್ಟದಲ್ಲಿ ಜಿಲ್ಲೆಗೂ ಜೈನ ಪರಂಪರೆಯ ಕೊಡುಗೆ ಸಾಕಷ್ಟಿದೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ಉತ್ತಮ ಶಿಲ್ಪಕಲೆ ಹೊಂದಿರುವ ಜೈನ ದೇಗುಲಗಳು, ತೀರ್ಥಂಕರರ ಬಸದಿಗಳು ಅಹಿಂಸಾ ಮಾರ್ಗದ ಪ್ರಸಾರಕ್ಕೆ ನಾಂದಿ ಹಾಡಿವೆ. ಕನಕಗಿರಿ ಕ್ಷೇತ್ರ ಜೈನಧರ್ಮದ ಪ್ರಮುಖ ಪ್ರಸಾರ ಕೇಂದ್ರವಾಗಿತ್ತು. ಜೈನಧರ್ಮವು ಸೇರಿದಂತೆ ಎಲ್ಲಾ ಧರ್ಮಗಳ ಸಮಗ್ರತೆಯ ಮೂಲಕ ಭಾರತ ಇಂದು ಜಾಗತಿಕಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಸುರೇಶ್ ಋಗ್ವೇದಿ ಅವರು ತಿಳಿಸಿದರು.
ನಗರಸಭೆ ಅಧ್ಯಕ್ಷರಾದ ಆಶಾನಟರಾಜು ಅವರು ಮಾತನಾಡಿ ಭಗವಾನ್ ಮಹಾವೀರರ ಸತ್ಯ ಮತ್ತು ಅಹಿಂಸೆಯನ್ನು ಎಲ್ಲರೂ ಅನುಸರಿಸಬೇಕು. ಇತ್ತೀಚೆಗೆ ಮೊಬೈಲ್ ಹಾವಳಿಯಿಂದ ಸುಳ್ಳು, ಅಸತ್ಯ ಎಲ್ಲೆಡೆ ಅವರಿಸಿಕೊಂಡಿವೆ. ಪ್ರತಿಯೊಬ್ಬರು ಸತ್ಯವನ್ನೇ ನುಡಿಯಬೇಕು. ಸತ್ಯದ ಮಾರ್ಗದಲ್ಲಿ ನಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹನೂರು ಚೆನ್ನಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಗವಾನ್ ವರ್ಧಮಾನ ಮಹಾವೀರರ ಆದರ್ಶ ನಡೆ ನುಡಿ ಮಾನವೀಯ ಚಿಂತನೆಗಳು ಇಂದಿಗೂ ಪ್ರಸ್ತುವಾಗಿವೆ ಎಂದರು. 
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾದ ಸಿ. ಎಂ. ನರಸಿಂಹಮೂರ್ತಿ, ಜಿಲ್ಲಾ ಪಂಚಾಯಿತಿ ಲೆಕ್ಕಾಧಿಕಾರಿ ಗಂಗಾಧರ್, ಜೈನ ಸಮಾಜದ ಜಿಲ್ಲಾಧ್ಯಕ್ಷರಾದ ನಿರ್ಮಲ್‌ಕುಮಾರ್ ಜೈನ್, ಉಪಾಧ್ಯಕ್ಷರಾದ ಸತೀಶ್‌ಕುಮಾರ್, ಜಿನ ಉಪಾಸಕಿ ಇಂಧುಮತಿ, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.