ಬೆಂಗಳೂರು: ಕೊರೋನಾ ಉಚಿತ ಚಿಕಿತ್ಸೆ ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ನೀಡುವುದಿಲ್ಲವಾದರೆ ಯಾವ ಪುರುಷಾರ್ಥಕ್ಕೆ ಈ ಯೋಜನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಟ್ವೀಟ್ ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಅವರು ಕೇಂದ್ರ ಕೊರೋನಾ ಚಿಕಿತ್ಸೆಗೆ ಅನುಕೂಲವಾಗುವಂತೆ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಲ್ಲಿರುವ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಒತ್ತಾಯಿಸಿರುವ ಅವರು ಈ ಸಂಬಂಧ ಕೇಂದ್ರ ಸರ್ಕಾರ ತಕ್ಷಣವೇ ಆದೇಶ ಹೊರಡಿಸಬೇಕು ಆಗ್ರಹಿಸಿದ್ದಾರೆ.
ಆಯುಷ್ಮಾನ್ ಭಾರತ ಯೋಜನೆ ಅಡಿ ಕೊರೋನಾ ಸೋಂಕಿತರು ಉಚಿತವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿರ್ಬಂಧಿಸಿರುವ ಐದು ಲಕ್ಷ ರೂಪಾಯಿ ವ್ಯಾಪ್ತಿಯಲ್ಲಿ ಚಿಕಿತ್ಸೆ ಪಡೆಯಲು ಎಡರು ತೊಡರುಗಳಿದ್ದು, ಇಡೀ ದೇಶ ಕೊರೋನಾದಿಂದ ನಲುಗುತ್ತಿರುವ ಈ ಕಾಲದಲ್ಲಿ ಕೇಂದ್ರ ಸರ್ಕಾರ ಔದಾರ್ಯ ತೋರುವುದು ಬಹಳ ಅಗತ್ಯ ಎಂದು ಹೇಳಿದ್ದಾರೆ.
ಈಗಾಗಲೇ ಬಿಪಿಎಲ್ ಕಾರ್ಡುದಾರರು ಆಯುಷ್ಮಾನ್ ಭಾರತ ಯೋಜನೆ ಅಡಿ ಐದು ಲಕ್ಷ ರೂಪಾಯಿಗಳವರೆಗೆ ಮಾರಣಾಂತಿಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಎಪಿಎಲ್ ಕಾರ್ಡ್ ದಾರರಿಗೆ ಗರಿಷ್ಠ ಐದು ಲಕ್ಷ ರೂಪಾಯಿಗಳವರೆಗೆ ಶೇಕಡ ಮೂವತ್ತರಷ್ಟು ಚಿಕಿತ್ಸಾ ವೆಚ್ಚದಲ್ಲಿ ರಿಯಾಯಿತಿ ದಕ್ಕಲಿದೆ. ಕೊರೋನಾಕ್ಕೆ ಇದು ಅನ್ವಯವಾಗುವುದಾದರೆ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ ಎಂದಿದ್ದಾರೆ.