ಗುಂಡ್ಲುಪೇಟೆ: ತಾಲೂಕಿನ ಸಿದ್ದಯ್ಯನಪುರ ಕಾಲೋನಿಯಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಉಚಿತ ಆಯುಷ್ ಆರೋಗ್ಯ ಶಿಬಿರ ನಡೆಯಿತು.
ಕಾರ್ಯಕ್ರಮವನ್ನು ಆಯುಷ್ ವೈದ್ಯಾಧಿಕಾರಿ ಡಾ.ಗುರುಪ್ರಸಾದ್ ಉದ್ಘಾಟಿಸಿ ಮಾತನಾಡಿ, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಮೊದಲು ರೋಗದ ಮೂಲವನ್ನು ಪತ್ತೆ ಮಾಡಲಾಗುತ್ತದೆ. ಆ ಬಳಿಕ ರೋಗಕ್ಕೆ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಈ ಕಾರಣಕ್ಕಾಗಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗ ವಾಸಿಯಾಗಲು ಹೆಚ್ಚಿನ ಸಮಯ ಬೇಕಾಗುತ್ತದೆ. ಹಾಗಾಗಿ, ಈ ಪದ್ಧತಿಯಲ್ಲಿ ಚಿಕಿತ್ಸೆ ಪಡೆಯಲು ಜನರಿಗೆ ತಾಳ್ಮೆ ಅಗತ್ಯ. ಆಯುರ್ವೇದಿಕ್‍ನಲ್ಲಿ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಇಂಗ್ಲೀಷ್ ಚಿಕಿತ್ಸೆ ಮೊರೆ ಹೋದರೆ ಬೇಗನೆ ಅನಾರೋಗ್ಯ ಬರಬಹುದು. ಆದ್ದರಿಂದ ಆಯುರ್ವೇದಿಕ್ ಔಷಧಿಗಳನ್ನು ಉಪಯೋಗಿಸಿ ಎಂದು ಸಲಹೆ ನೀಡಿದರು.
ಆಯುಷ್ ಚಿಕಿತ್ಸಾ ವಿಧಾನವು ಪ್ರಾಚೀನ ಚಿಕಿತ್ಸಾ ಪದ್ಧತಿಯಾಗಿದ್ದು, ಜನಸಾಮಾನ್ಯರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಎಲ್ಲಾ ಜನ ಸಾಮಾನ್ಯರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಉಚಿತ ಆಯುಷ್ ಆರೋಗ್ಯ ಶಿಬಿರದಲ್ಲಿ ಗ್ರಾಮದ 100ಕ್ಕು ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿ ಔಷಧಿ ವಿತರಣೆ ಮಾಡಲಾಯಿತು.
ಶಿಬಿರ ವೈದ್ಯಾಧಿಕಾರಿ ಡಾ.ನಿಶ್ಚಲ, ಡಾ.ಚೈತ್ರ, ಶಾಲೆ ಶಿಕ್ಷಕಿ ಮಮತ, ಸೋಮಶೇಖರ್, ಆಲತ್ತೂರು ಗ್ರಾಪಂ ಸದಸ್ಯ ದಾಸಯ್ಯ, ಮಾಜಿ ಸದಸ್ಯ ಮೂರ್ತಿ, ಆಯುರ್ವೇದಿಕ್ ಆಸ್ಪತ್ರೆ ಸಿಬ್ಬಂದಿ ಜಿ.ಆರ್.ರವಿ, ಚಂದ್ರಪ್ಪ, ರೂಪ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
ವರದಿ: ಬಸವರಾಜು ಎಸ್.ಹಂಗಳ