ಗುಂಡ್ಲುಪೇಟೆ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ನಡೆಯಿತು.
ಖಾಯಂ ವೈದ್ಯರಿಲ್ಲದ ಕಾರಣ ಸ್ಥಳೀಯವಾಗಿ ಸುಸಜ್ಜಿತ ಸೌಲಭ್ಯಗಳಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಆರೋಗ್ಯ ಸೇವೆಗೆ ಹೋಬಳಿ ಅಥವಾ ತಾಲೂಕು ಕೇಂದ್ರಕ್ಕೆ ಹೋಗಬೇಕಿದ್ದು, ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಹೇಳತೀರದಂತಾಗುತ್ತದೆ. ಆದ್ದರಿಂದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯೊಬ್ಬರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನರ್ಸ್‍ವೊಬ್ಬರು ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಿ ಎಂದು ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಗ್ರಾಮಗಳಲ್ಲಿ ಸಮರ್ಪಕ ಬೀದಿ ದೀಪದ ವ್ಯವಸ್ಥೆಯಿಲ್ಲ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸರ್ಕಾರದ ಮಹತ್ವಕಾಂಕ್ಷೆಯ ಬೆಳಕು ಯೋಜನೆ ಜಾರಿಗೊಳಿಸುತ್ತಿದೆ. ಹಿಂದೆ ನಿರಂತರ ಜ್ಯೋತಿ ಯೋಜನೆ ಜಾರಿಯಾಗಿದೆ. ಈಗಿದ್ದರೂ ವಿದ್ಯುತ್ ಸಂಪರ್ಕ ಮತ್ತು ಬೀದಿ ದೀಪದ ವ್ಯವಸ್ಥೆ ಬಗ್ಗೆ ದೂರು ಬರುತ್ತಿವೆ. ಆದ್ದರಿಂದ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸೆಸ್ಕ್ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಗ್ರಾಮದಲ್ಲಿ ಮೂರು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಜಲಜೀವನ್ ಮಿಷನ್ ಯೋಜನೆಯ ಪೈಪ್‍ಲೈನ್ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ. ನಲ್ಲಿ ಸಂಪರ್ಕಕ್ಕೆ ಸಾವಿರ ರೂ ಹಣ ಪಾವತಿಸುವಂತೆ ಒತ್ತಾಯಿಸುತ್ತಾರೆ ಎಂದು ಕುಂದಕೆರೆ ಗ್ರಾಮಸ್ಥರು ದೂರಿದರು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ, ಜೆಜೆಎಂ ಯೋಜನೆ ಪೈಪ್‍ಲೈನ್ ಕಾಮಗಾರಿ ಬೇಗ ಮುಗಿಸಿ, ನಿಯಮವಿದ್ದರೂ ರೈತಾಪಿ ವರ್ಗದ ಜನರನ್ನು ನಲ್ಲಿ ಸಂಪರ್ಕಕ್ಕಾಗಿ ಹಣ ಪಾವತಿಸುವಂತೆ ಬಲವಂತ ಮಾಡಬೇಡಿ ಎಂದು ಶಾಸಕರು ಸೂಚಿಸಿದರು.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ನೀರು ಹರಿವಿನಿಂದ ತಮ್ಮ ಬಾಬ್ತು ಎಕರೆಯಷ್ಟು ಪ್ರದೇಶದಲ್ಲಿ ಬೆಳೆ ಮಾಡಲು ಆಗುತ್ತಿಲ್ಲ. ಏನಾದರೂ ಪರಿಹಾರ ಕೊಡಿಸಿ ಎಂದು ರೈತರೊಬ್ಬರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಮನರೇಗಾ ಯೋಜನೆಯಡಿ ಕಾಲುವೆ ಮಾಡಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‍ಕುಮಾರ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಅನೇಕ ದೂರುಗಳಿಗೆ ಶಾಸಕ ಸಿ.ಎಸ್.ನಿರಂಜನಕುಮಾರ್ ಸ್ಥಳದಲ್ಲೇ ಅಧಿಕಾರಿಗಳಿಂದ ಪರಿಹಾರ ಕೊಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಿ, ಉಪಾಧ್ಯಕ್ಷ ಮಲ್ಲು, ಬಿಇಒ ಎಸ್.ಸಿ.ಶಿವಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‍ಕುಮಾರ್, ಪಿಡಬ್ಲ್ಯೂಡಿ ಮತ್ತು ಜಿ.ಪಂ ತಾಂತ್ರಿಕ ಉಪವಿಭಾಗದ ಎಇಇ ಗಳಾದ ರವಿಕುಮಾರ್, ಸಂತೋಷ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಂದ್ರ, ಚನ್ನಬಸಪ್ಪ, ಸಿದ್ದೇಶ್, ಸವಿತ, ರತ್ನಮ್ಮ, ಕಮಲಮ್ಮ, ಪಿಡಿಒ ರವಿಚಂದ್ರ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.
ವರದಿ: ಬಸವರಾಜು ಎಸ್.ಹಂಗಳ