
ಚಾಮರಾಜನಗರ:ಚಾಮರಾಜನಗರ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶವಾದ ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೦೯ರ ಚಾಮರಾಜನಗರ-ಪುಣಜನೂರು-ಸತ್ಯಮಂಗಲಂ ಮಾರ್ಗ ಮುಖೇನ ಸಂಚರಿಸುವ ಮತ್ತು ತಮಿಳುನಾಡು ಗಡಿ ಪ್ರದೇಶವನ್ನು ಪ್ರವೇಶಿಸುವ ಎಲ್ಲಾ ಬಾರಿ ವಾಹನಗಳು ಸಂಜೆ ೬ ಗಂಟೆಯೊಳಗೆ ಹಾಗೂ ಇತರೆ ವಾಹನಗಳು ರಾತ್ರಿ ೯ ಗಂಟೆಯೊಳಗೆ ತಮಿಳುನಾಡು ರಾಜ್ಯವನ್ನು ಪ್ರವೇಶಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ಕೋರಿದ್ದಾರೆ.
ಮಾನ್ಯ ಮದ್ರಾಸ್ ಉಚ್ಚನ್ಯಾಯಾಲಯದ ಆದೇಶ ಸಂಖ್ಯೆ ಡಬ್ಲ್ಯೂಪಿ ನಂ: ೧೮೩೦-೧೮೩೨/೨೦೨೨ ಡಬ್ಲ್ಯೂಎಂಪಿ: ೧೯೬೫-೧೯೬೯/೨೦೨೨ ರೀತ್ಯಾ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಂತೆ ಈರೋಡ್ ಜಿಲ್ಲೆಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಅವರ ಆದೇಶದ ದಿನಾಂಕ ೦೭-೦೧-೨೦೧೯ರಲ್ಲಿ ಬಣ್ಣಾರಿ ಮತ್ತು ಕಾರ್ಯಪಲ್ಲಂ ರಸ್ತೆಯಿಂದ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುವ ಎಲ್ಲಾ ಬಾರಿ ವಾಹನಗಳನ್ನು ಸಂಜೆ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ಹಾಗೂ ಇತರೆ ವಾಹನಗಳನ್ನು ರಾತ್ರಿ ೯ ಗಂಟೆಯಿಂದ ಬೆಳಿಗ್ಗೆ ೬ ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಲಾಗಿರುತ್ತದೆ. ಈ ಆದೇಶವು ೨೦೨೨ರ ಫೆಬ್ರವರಿ ೧೦ ರ ಸಂಜೆ ೬ ಗಂಟೆಯಿಂದ ಜಾರಿಗೆ ಬರುತ್ತದೆ.
ಈ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶವಾದ ಬಿ.ಆರ್.ಟಿ ಹುಲಿ ಸಂರಕ್ಷಿತ ಅರಣ್ಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ೨೦೯ರ ಚಾಮರಾಜನಗರ-ಪುಣಜನೂರು-ಸತ್ಯಮಂಗಲಂ ಮಾರ್ಗ ಮುಖೇನ ಸಂಚರಿಸುವ ಮತ್ತು ತಮಿಳುನಾಡು ಗಡಿ ಪ್ರದೇಶವನ್ನು ಪ್ರವೇಶಿಸುವ ಎಲ್ಲಾ ಬಾರಿ ವಾಹನಗಳು ಸಂಜೆ ೬ ಗಂಟೆಯೊಳಗೆ ಹಾಗೂ ಇತರೆ ವಾಹನಗಳು ರಾತ್ರಿ ೯ ಗಂಟೆಯೊಳಗೆ ತಮಿಳುನಾಡು ರಾಜ್ಯವನ್ನು ಪ್ರವೇಶಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಅರಣ್ಯ ಪ್ರದೇಶದಲ್ಲಿ ನಿಲುಗಡೆ ಮಾಡುವುದರಿಂದ ವನ್ಯಜೀವಿಗಳಿಂದ ಆಗಬಹುದಾದ ತೊಂದರೆಗಳನ್ನು ತಡೆಯುವ ನಿಟ್ಟಿನಲ್ಲಿ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರಾದ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
