ಚಾಮರಾಜನಗರ:ಸಂಶೋಧನೆಗಳು ಹಾಗೂ ಹೊಸ ಪ್ರಯೋಗಗಳಿಂದ ಗಿರಿಜನರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಬದಲಾವಣೆಗಳು ತರಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಭಿಪ್ರಾಯಪಟ್ಟರು.
ನಗರದ ಗಿರಿಜನ ಭವನ (ಲ್ಯಾಂಪ್ಸ್ ಸಭಾಂಗಣ)ದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಶಿ? ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘ ಹಾಗೂ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಇನ್ನಿತರ ಸಂಸ್ಥೆಗಳ ಸಹಯೋಗದೊಂದಿಗೆ ಬುಡಕಟ್ಟು ಜನಾಂಗಗಳ ಆರೋಗ್ಯ ಸಮಸ್ಯೆ ಕುರಿತ ಸಂಶೋಧನೆ, ಹೊಸ ಬದಲಾವಣೆ ಹಾಗೂ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಪೌಷ್ಟಿಕತೆ ನಿರ್ಮೂಲನೆಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೂ ಈಗಲೂ ಸಹ ಬುಡಕಟ್ಟು ಜನರ ಮಕ್ಕಳು ಹಾಗೂ ಮಹಿಳೆಯರಲ್ಲಿ ಅಪೌಷ್ಟಿಕತೆಯನ್ನು ಕಾಣಬಹುದಾಗಿದೆ. ಅನೇಕ ಗಂಭೀರ ರೀತಿಯ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ. ಇದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಸಂಶೋಧನೆಗಳು ಹಾಗೂ ಹೊಸ ಪ್ರಯೋಗಗಳಿಂದ ಗಿರಿಜನರ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಬದಲಾವಣೆಗಳು ತರಲು ಸಾಧ್ಯವಿದೆ. ಇಂತಹ ಕಾರ್ಯಗಳಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರವಿರಲಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದರು.
ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಸಂಸ್ಥೆಯ ಉಪನಿರ್ದೇಶಕರಾದ ಡಾ. ಎನ್.ಎಸ್. ಪ್ರಶಾಂತ್ ಅವರು ಮಾತನಾಡಿ ಜಿಲ್ಲೆಯಲ್ಲಿ ಸಿಕೆಲ್-ಸೆಲ್ ಅನೀಮಿಯಾ ಹಾಗೂ ಇತರೆ ರಕ್ತ ಸಂಬಂಧಿತ ಖಾಯಿಲೆಗಳ ದಾಖಲಾತಿ, ನೊಂದಣಿ ಮಾಡಲಾಗುತ್ತದೆ. ಧೀರ್ಘಾವಧಿಯ ಸಂಶೊಧನೆಯಿಂದಾಗಿ ಗಿರಿಜನರ ಮಕ್ಕಳ ಬೆಳವಣಿಗೆಯಲ್ಲಿನ ನ್ಯೂನ್ಯತೆಗಳು ಹಾಗೂ ಅದರ ಹಿಂದಿನ ಕಾರಣಗಳ ಅರಿಯಲು ಅದಕ್ಕೆ ಸರಿಯಾದ ರೀತಿಯ ಮಾರ್ಗೋಪಾಯಗಳನ್ನು ರೂಪಿಸುವಲ್ಲಿ ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿಗಳಾದ ಡಾ. ಸಿ. ಮಾದೇಗೌಡ ಮಾತನಾಡಿ, ಸಂಶೋಧನೆಗಳು ಕೇವಲ ಸಂಶೋಧಕರ ಜ್ಞಾನ ವೃದ್ಧಿಗೆ ಸೀಮಿತವಾಗದೇ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು. ಸಂಶೋಧನೆಯ ಸಂಪೂರ್ಣ ಪ್ರಯೋಜನ ಸಮುದಾಯದ ಅಭಿವೃದ್ಧಿಗೆ ಸಹಕಾರಿಯಾಗಿರಬೇಕು ಎಂದು ತಿಳಿಸಿದರು.
ಇಂಡಿಯನ್ ಇನ್ಟ್ಸಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ನಿರ್ದೇಶಕರಾದ ಡಾ. ಸುರೇಶ್ ಶಾಪೇಟಿ ಅವರು ಮಾತನಾಡಿ, ಗಿರಿಜನರ ಆರೋಗ್ಯ ಸುಧಾರಣೆಗೆ ಸಂಬಂಧಿಸಿದ ಕಾರ್ಯಕ್ರಮ ಯಶಸ್ವಿಯಾಗಬೇಕಿದ್ದಲ್ಲಿ ಸಮುದಾಯ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವ ಬಹಳ ಪ್ರಮುಖವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗು ಡೀನ್ ಡಾ. ಜಿ. ಎಂ. ಸಂಜೀವ್, ಡಾ. ಮಹೇಶ್, ಡಾ. ದೀಪಾ ಭಟ್, ಪರಿಶಿ? ವರ್ಗಗಳ ಕಲ್ಯಾಣಾಧಿಕಾರಿ ಮಂಜುಳ, ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಡಾ. ಎಂ. ಜಡೇಗೌಡ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸೋಲಿಗ ಅಭಿವೃದ್ಧಿ ಸಂಘದ ಪ್ರತಿನಿಧಿಗಳು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
