ಮೈಸೂರು, ನ.- ಏಷಿಯನ್ ಪೇಯಿಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದವರಿಗೆ ನಿಯಮಾನುಸಾರ ಕಾರ್ಖಾನೆ ಉದ್ಯೋಗ ನೀಡದೇ ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ರೈತರಿಂದ ಜಮೀನು ಸ್ವಾಧೀನಪಡಿಸಿಕೊಂಡು ಕಾರ್ಖಾನೆಗೆ ಹಸ್ತಾಂತರಿಸಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೇ ಮುಂದೆ ನಿಂತು ರೈತರಿಗೆ ಏಷಿಯನ್ ಪೇಯಿಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ಕಾರ್ಖಾನೆಯನ್ನು ಮುಚ್ಚಿಸಬೇಕು ಎಂದು ಪಟ್ಟು ಹಿಡಿದ ರೈತರು, ನಗರದ ಕೆಆರ್‍ಎಸ್ ರಸ್ತೆಯಲ್ಲಿರುವ ಕೆಐಎಡಿಬಿ(ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ವಲಯ ಕಚೇರಿ ಎದುರು ಜಮಾಯಿಸಿದ ನೂರಾರು ರೈತರು, ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಸಮೀಪ ಕೆಐಎಡಿಬಿ ಮೂಲಕ ಏಷಿಯನ್ ಪೇಯಿಂಟ್ಸ್ ಕಾರ್ಖಾನೆ ಸ್ಥಾಪನೆಗೆ ರೈತರು ತಮ್ಮ ಭೂಮಿ ನೀಡಿದ್ದರು. ಆ ಸಮಯದಲ್ಲಿ ಇವರಿಗೆ ಉದ್ಯೋಗ ನೀಡುವ ಭರವಸೆ ನೀಡಲಾಗಿತ್ತು.
ಆದರೆ, ಇದುವರೆಗೂ ಉದ್ಯೋಗ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ, ಬಳಿಕ ಸ್ಥಳಕ್ಕೆ ಆಗಮಿಸಿದ ಕೆಐಎಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಕೆ.ಎಂ.ಸುರೇಶ್‍ಕುಮಾರ್, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಧರ್, ರೈತರ ಬೇಡಿಕೆ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಸಿದ ವಿಶೇಷ ಭೂಸ್ವಾಧೀನ ಅಧಿಕಾರಿ ಕೆ.ಎಂ.ಸುರೇಶ್‍ಕುಮಾರ್, ಏಷಿಯನ್ ಪೇಯಿಂಟ್ಸ್ ಕಾರ್ಖಾನೆಗೆ ಭೂಮಿ ನೀಡಿದವರಿಗೆ ಕಾರ್ಖಾನೆಯಲ್ಲಿಯೇ ಉದ್ಯೋಗ ಕಲ್ಪಿಸಿಕೊಡುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. 94 ಮಂದಿ ರೈತರಿಂದ 175 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಅವರಲ್ಲಿ 53 ಮಂದಿ ಕಾರ್ಖಾನೆಯಲ್ಲಿ ಉದ್ಯೋಗ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.
ಅಂತೆಯೇ ಕಾರ್ಖಾನೆಯಲ್ಲಿ ಉದ್ಯೋಗ ನೀಡಲಾಗಿದೆ. ಆದರೆ, ಕಾರ್ಖಾನೆಯವರು ತಮ್ಮಲ್ಲಿ ಉದ್ಯೋಗ ನೀಡಿದೆ ಬೇರೆ ಕಾರ್ಖಾನೆಯಲ್ಲಿ ನೀಡುವುದಾಗಿ ಹೇಳುತ್ತಿದ್ದಾರೆ ಎಂದು ರೈತರು ಆರೋಪಿಸಿ, ಈ ಸಂಬಂಧ ಏಷಿಯನ್ ಪೇಯಿಂಟ್ಸ್ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ.

ಕಾರ್ಖಾನೆಯಿಂದ ಯಾವುದೇ ಪ್ರತಿಕ್ರಿಯೆ ಇನ್ನೂ ಇಲ್ಲ, ಭೂಮಿ ನೀಡಿದವರಿಗೆ ಕಡ್ಡಾಯವಾಗಿ ಉದ್ಯೋಗ ಕಲ್ಪಿಸಿಕೊಡುವಂತೆ ಕಾರ್ಖಾನೆಗೆ ಸೂಚನೆ ನೀಡಲಾಗುವುದು. ಒಂದೂ ವೇಳೆ ಕಾರ್ಖಾನೆಯಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನ.18ರವರೆಗೆ ಗಡವು: ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಏಷಿಯನ್ ಪೇಯಿಂಟ್ಸ್ ಕಾರ್ಖಾನೆ ಸ್ಥಾಪನೆಗೆ ಭೂಮಿ ನೀಡಿದವರಿಗೆ ಉದ್ಯೋಗ ಕಲ್ಪಿಸುವ ಕುರಿತು ನ.18ರವರೆಗೆ ಗಡವು ನೀಡಲಾಗುವುದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿಯೂ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊಸಕೋಟೆ ಬಸವರಾಜು, ಪ್ರಸನ್ನ ಎನ್.ಗೌಡ, ಎನ್.ಪುನೀತ್, ಹೋಸೂರ್ ಕುಮಾರ್, ಲೋಕೇಶ್ ರಾಜ್ ಅರಸ್ ಮತ್ತಿತರರಿದ್ದರು.

By admin