ಮಾನವ ಸಂಕುಲಕ್ಕೆ ಅಂಟಿದ, ಈವರೆಗೆ ಔಷಧಿಯೇ ಸಿಗದ ರೋಗವೆಂದರೆ ಜಾತಿ ಎನ್ನಬಹುದು. ಜಾತಿ ಎಂಬ ರೋಗಕ್ಕೆ ಮಾತ್ರ ಮದ್ದು ಕಂಡುಹಿಡಿಯುವುದು ಅಧಿಕಾರದಾಹಿ ಪಟ್ಟಭದ್ರ ಹಿತಾಶಕ್ತಿಯವರಿಗೆ, ಜಾತಿವಾದಿ ಲಾಭಿಗಳಿಗೆ ವಲ್ಲದ ವಿಚಾರ ಮತ್ತು ಭಯದ ವಿಚಾರ. ಬೇಕಾದರೆ ಈ ಜಾತಿಯೆಂಬ ನರಪಿಡುಗುವಿನಲ್ಲೇ ರಕ್ತಕಾಣುವುದಾಗಲಿ ಎನ್ನುತ್ತಾರೆಯೇ ಹೊರತು, ಜಾತಿಯೆಂಬುದನ್ನು ಮಾತ್ರ ಬಿಡಲಾಗುವುದಿಲ್ಲ ಇವರಿಗೆ.ಮಾನವ ಲೋಕದಲ್ಲಿ ಹೊಸ ರೋಗಭಾದೆ ಸೃಷ್ಟಿಯಾಗಿ ಜನತೆಗೆ ಭಯ ಉಂಟಾದರೆ, ಆ ಭಯಬಿದ್ದ ಜನರ ಮನದ ದುಸ್ಥಿತಿಯನ್ನೇ ಲಾಭ ಮಾಡಿಕೊಂಡು ವೃದ್ಧಿಕಾಣುವ ಕೆಲ ಔಷಧ ಕ್ಷೇತ್ರ
ದ ಉದ್ಯಮಿಗಳ ರೀತಿ ಈ ಜಾತಿವಾದಿಗಳ ನೀತಿ, ಮನೋಧರ್ಮ ಎನ್ನಬಹುದು. ಪ್ರಸ್ತುತದಲ್ಲಿ ಈ ವಿಚಾರವಾಗಿ ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ಅನುಭವ ಪಡೆಯುತ್ತಿರುವವರೇ. ಔದು, ನಮಗೆ ಗೊತ್ತೇ ಆಗುವುದಿಲ್ಲ ನೋಡಿ! ಅವರು ಕಂಡುಹಿಡಿಯುವ ಮದ್ದು, ಶಸ್ತ್ರ ಚಿಕಿತ್ಸಾ ಸಲಕರಣೆಗಳು ಎಲ್ಲವೂ ಸಮಾಜ ಸೇವೆಯೇ,

ಆರೋಗ್ಯ ಸೇವೆಯೇ ಆದರೆ ಆ ಸೇವೆಗಳ ಹಿಂದಿನ ಸ್ವಾರ್ಥ ನಮಗೆ ತಿಳಿಯುವುದೇ ಇಲ್ಲ. ಹಾಗೊಂದು ವೇಳೆ ತಿಳಿದರೂ ಕಣ್ಣ ಮುಂದಿನ ಅವ್ಯವಹಾರಗಳಿಗೆ, ಮೋಸಗಳಿಗೆ ಒತ್ತಾಸೆ ನೀಡುವ ಬಹುತ್ವವರ್ಗ ಗೆಲ್ಲುತ್ತದೆ, ಸಾಮಾನ್ಯ ಜನರ ಬೆಕ್ಕಸನೋಟ ಹಾಗೆಯೇ ಉಳಿಯುತ್ತದೆ. ಇಲ್ಲಿ ಕ್ಷಣಾರ್ಧದಲ್ಲಿ ಹಣಕ್ಕಾಗಿ, ಅಧಿಕಾರಕ್ಕಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕಾಗಿ ನ್ಯಾಯ ದೇವತೆಯನ್ನು ತಮ್ಮ ಸುಳ್ಳಿನ ನಾಲಿಗೆಯ ವೇದಿಕೆಯಲ್ಲಿ ಕುಣಿಸುತ್ತಿದ್ದಾರೆ, ತಮ್ಮಿಚ್ಛೆಯ ಹಲ್ಲುಗಳಲ್ಲಿ ಕಚ್ಚುತ್ತಿದ್ದಾರೆ. ಒಳಿತುಗಳನ್ನೇ ಮಾಡುವ ಮುಖವಾಡ ಧರಿಸಿ ಲಾಭದ ಮೂಟೆ ಹೊತ್ತು ಸಾಗುತ್ತಿರುತ್ತಾರೆ. ಆ ಲಾಭದ ಮೂಟೆಯಲ್ಲಿ ಎಷ್ಟು ಜನರ ಅನಾರೋಗ್ಯದ ನರಳಾಟವಿದೆಯೋ, ಸಾವಿದೆಯೋ ಒಂದೂ ತಿಳಿಯದು.
ಇದೇ ರೀತಿ ಮಾನವ ಜಗತ್ತಿನಲ್ಲಿ ಯಾವುದೋ ಒಂದು ಸನ್ನಿವೇಶದಲ್ಲಿ ಉದಯಿಸಿದ ಈ ಜಾತಿ ಎಂಬ ಪೆಡಂ ಭೂತವನ್ನು ತಮ್ಮ ತಮ್ಮ ಸ್ವಾರ್ಥಗಳಿಗಾಗಿ ಇಂದಿಗೂ ಸಲಹುತ್ತಲೇ ಇದ್ದಾರೆ ಮನುಷ್ಯತ್ವ ದ್ರೋಹಿಗಳು. ಕಸುಬಿನ ಆಧಾರವಾಗಿ ಜನಿಸಿದ ಜಾತಿ ಸಮುದಾಯಗಳನ್ನು ನಂತರದ ದಿನಗಳಲ್ಲಿ ಮಡಿ-ಮೈಲಿಗೆ, ಶ್ರೇಷ್ಠ-ಕನಿಷ್ಠಕ್ಕೆ ಬಳಸಿಕೊಂಡು ಇಂದು ರಾಜಕೀಯದ ಮುಖ್ಯ ತಂತ್ರವನ್ನಾಗಿ ಮಾಡಿಕೊಂಡಿದ್ದಾರೆ. *ಸ್ವಾತಂತ್ರ್ಯ ಸಂದರ್ಭದಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಅವರು ಸೆರೆಮನೆಯಲ್ಲಿದ್ದಾಗ, ಧರ್ಮಗಳನ್ನು ಬಳಸಿಕೊಂಡು ರಾಜಕೀಯ ತಂತ್ರಗಾರಿಕೆಯನ್ನು ನಡೆಸುತ್ತಿದ್ದವರನ್ನು ಗಮನಿಸಿಯೇ ಅರಿಸ್ಟಾಟಲ್’ನ ಒಂದು ನಿರೂಪಣೆಯನ್ನು ಆ ಸಂದರ್ಭಕ್ಕೆ ತಮ್ಮ ದಿನವಹಿ ಪುಸ್ತಕದಲ್ಲಿ ಬರೆದುಕೊಂಡಿದ್ದರು. “ಪ್ರಜೆಗಳ ದಮನ ಮಾಡುವ ಯಾವುದೇ ಸರ್ಕಾರವಾಗಲಿ, ಮತಧರ್ಮದಲ್ಲಿ ಶ್ರದ್ಧೆ ಬೆಳೆಸಿಕೊಳ್ಳಬೇಕೆಂದು ಪ್ರಜೆಗಳನ್ನು ಪ್ರೇರೇಪಿಸುತ್ತದೆ”* ಎಂಬುದು ಆ ನಿರೂಪಣೆ. ಧರ್ಮಗಳಲ್ಲಿ ಮತ್ಸರ ತಂದು ಲಾಭಗಿಟ್ಟಿಸಿಕೊಂಡಿದ್ದು ಒಂದೆಡೆಯಾದರೆ ಈ ದಶಮಾನಗಳಲ್ಲಿ ಜಾತಿಗಳ ವಿಚಾರವಿಟ್ಟು ರಾಜಕೀಯದ ಕುತಂತ್ರ ಸಾಧನೆ ಇನ್ನೊಂದೆಡೆಯಾಗಿದೆ. ಸಮಾಜದಲ್ಲಿ ಒಡಕುಗಳನ್ನು ಸೃಷ್ಟಿಸುವ ಪದ್ಧತಿಗಳನ್ನು ಈ ರೀತಿಯಾಗಿ ಸರ್ವವಿಧದಲ್ಲೂ ಪೋಷಣೆ ಮಾಡುತ್ತಿರುವುದರ ಬಗ್ಗೆ, ನಮ್ಮ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಅರಿವಾಗುತ್ತಿಲ್ಲ. ಜೊತೆಗೆ ಗೊತ್ತಾದರೂ ಅದರ ವಿರುದ್ಧ ನ್ಯಾಯ ಸಾಧಿಸುವವರ ಸಾಮಥ್ರ್ಯ ಅಷ್ಟಕಷ್ಟಒಂದು ಮಗು ಈ ದೇಶದಲ್ಲಿ ಹುಟ್ಟುವಾಗಲೇ ಅದಕ್ಕೆ ಜಾತಿ ಪಟ್ಟ ನಿರ್ಮಾಣವಾಗಿಬಿಡುತ್ತದೆ. ಆ ಜಾತಿ, ಆ ಮಗುವಿನ ಹುಟ್ಟಿನಿಂದ ಸಾವಿನವರೆಗೆ ಮಾತ್ರ ಅಂಟಿರುತ್ತದೆ,

ಆನಂತರ ಮೈಗಂಟಿದ ಧೂಳಿನಂತೆ ಉದುರುತ್ತದೆ ಎಂದುಕೊಂಡಿದ್ದೋ. ಆದರೆ ಈಗ ಹಾಗಲ್ಲ, ಬದಲಾಗಿದೆ. ಸತ್ತಮೇಲೂ ಆತನನ್ನು ಜಾತಿಯ ವಿಚಾರವಾಗಿ ಬಂಧಿಸಲಾಗುತ್ತಿದೆ. *ಶ್ರೀಕೃಷ್ಣ ಆಧ್ಯಾತ್ಮಿ, ಭಗವದ್ಗೀತೆಯಲ್ಲಿ ಈ ಒಂದು ವಿಚಾರವನ್ನು ತಿಳಿಸಿದ್ದಾನೆ; ಸಮಾಧಿಗಳು ಮಾನವರು ನಿತ್ಯ ತಿರುಗಾಡುವ ಹಾದಿಯಲ್ಲೇ ಇರಬೇಕು, ಏಕೆಂದರೆ ಕೆಲವರು ಬದುಕಿದ್ದಾಗ ಏನೆಲ್ಲಾ ಹಮ್ಮಿನಿಂದ, ಮೇಲು–ಕೀಳು ಎಂದೆಲ್ಲಾ ಮೆರೆದು ಸಾಮಾನ್ಯರೊಂದಿಗೆ ಪ್ರತ್ಯೇಕತೆ ಬಯಸಿ ಬದುಕಿದ್ದರೋ ಅವರೆಲ್ಲಾ ಇಂದು ಅದೇ ಸಾಮಾನ್ಯರೊಂದಿಗೆ ಸಮಾಧಿಯಲ್ಲಿ ಸಮಾನರಾಗಿರುವುದನ್ನು ಕಂಡು, ಬದುಕಿರುವವರು ಆಗಲಾದರೂ ಎತ್ತೆಚ್ಚುಕೊಳ್ಳುತ್ತಾರೆ ಎಂದು.* ಈ ಬಹುದೊಡ್ಡ ಅರ್ಥವಿರುವ ಮಾತಿಗೆ ಮಾರ್ಮಿಕ ಹೇಳಿಕೆಯೊಂದನ್ನು ಪ್ರಸ್ತುತ ಸನ್ನಿವೇಶಕ್ಕೆ ನೀಡಬಹುದು. ಶ್ರೀಕೃಷ್ಣನ ಈ ಮಾತನ್ನು ಅರಿತೋ ಏನೋ ಕೆಲ ಜಾತಿವಾದಿಗಳು, ಸಮಾಧಿಗಳೂ ಸಹ ಜಾತಿಯ ಹೆಸರಿನಲ್ಲಿ ಪ್ರತ್ಯೇಕವಾಗಿರಬೇಕು ಎಂದು ನಿರ್ಧರಿಸಿರುವುದು. ಆಯಾಯ ಜಾತಿಗೆ ಸ್ವತಂತ್ರ ರುದ್ರಭೂಮಿಗಳು ಬೇಕು ಎಂದು ಸರ್ಕಾರದಲ್ಲಿ ಬೇಡಿಕೆಯನ್ನಿತ್ತು ಗ್ರಾಮದ ಗೋಮಾಳಗಳನ್ನು, ನಗರದ ಖಾಲಿ ಜಾಗಗಳನ್ನು ಪ್ರತ್ಯೇಕ ಜಾತಿ ಆಧಾರಿತ ರುದ್ರಭೂಮಿಗಳನ್ನಾಗಿ ನಿರ್ಮಾಣಮಾಡಿಕೊಳ್ಳುತ್ತಿದ್ದಾರೆ.
ಅಲ್ಲೂ ಕೂಡ ಆ ಜಾತಿಯವನಿಗೆ ಅಷ್ಟು ಜಾಗ ನಮ್ಮ ಜಾತಿಗೇಕೆ ಇಷ್ಟು ಕಡಿಮೆ ಜಾಗ ಎಂದು ಕಿತ್ತಾಡಿಕೊಳ್ಳುತ್ತಿದ್ದಾರೆ. ಸಾವಿನಲ್ಲೂ ಬಡಿದಾಡುವ ಜಾತಿ ರುದ್ರಭೂಮಿಗಳ ಸ್ಥಾಪನೆ ನಮ್ಮದೇ ಮೂರ್ಖತನದ, ಕ್ರೂರತನದ ಪರಮಾವಧಿ.
ಹೀಗೆ ಎಲ್ಲವನ್ನು ಹರಿದು ಹಂಚುವ ದುರ್ಬುದ್ಧಿ ತಿಳಿಗೇಡಿಗಳಿಗೆ ಒಳ್ಳೆಯ ಉಪಾಯವಾಗಿದೆ. ಓಟು ಅಥವಾ ಮತಗಳನ್ನು ಕದಿಯುವ ತಂತ್ರವಾಗಿದೆ. ಸಮುದಾಯಗಳ ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಐಕ್ಯತೆಗೆ ಕೊಡಲಿ ಏಟು ನೀಡುತ್ತಿರುವುದು ಮಾತ್ರ ಗೋಚರಿಸದ ಗೌಪ್ಯತೆ. ನಿರ್ಮಾಣಗೊಳ್ಳುತ್ತಿರುವ ಲಿಂಗಾಯತರ ರುದ್ರಭೂಮಿ, ಆದಿಕರ್ನಾಟಕ ರುದ್ರಭೂಮಿ, ಒಕ್ಕಲಿಗರ ರುದ್ರಭೂಮಿ, ಇನ್ನಿತರ ಹಲವು ಜಾತಿ ರುದ್ರಭೂಮಿ ನಾಮಗಳನ್ನು ಹೇಳುವುದಕ್ಕೆ, ಕೇಳುವುದಕ್ಕೆ ಹಿಂಸೆ ಎನಿಸುತ್ತದೆ. ನಮಗೆ ಸಿಗುತ್ತಿರುವ ಶಿಕ್ಷಣ ನಮ್ಮಲ್ಲಿ ಸಮಾನತೆಯನ್ನು ಸೃಷ್ಟಿಸುವಂತಿರಬೇಕು, ಮನುಷ್ಯತ್ವದ ಭದ್ರಬುನಾದಿಯನ್ನು ಹಾಕಿಕೊಡುವಂತಿರಬೇಕು.
*ನಮ್ಮ ಸಮಾಜದಲ್ಲಿ ಸೃಷ್ಟಿಯಾಗುವ ಸಾರ್ವಜನಿಕ ಆಸ್ತಿಗಳು ನಮ್ಮಲ್ಲಿ ಐಕ್ಯತೆ ಭಾವವನ್ನುಂಟುಮಾಡಬೇಕು. ಬದಲಿ ಇದು ಆ ಗುಂಪಿನವರದು, ಈ ಗುಂಪಿನವರದು ಎಂದು ಗುಂಪು ಗುಂಪುಗಳು ಸೃಷ್ಟಿಯಾದರೆ ಮಹಾತ್ಮ ಗಾಂಧೀಜಿ ಅವರು ಕನಸು ಕಂಡ ಗ್ರಾಮ ಗಣರಾಜ್ಯಗಳ ಮಹಾಒಕ್ಕೂಟ ಭಾರತ ರಾಷ್ಟ್ರ ಎನ್ನುವುದು ಕನಸಾಗಿಯೇ ಉಳಿಯುತ್ತದೆ.*
ಜಾತಿ ರುದ್ರಭೂಮಿಯ ಆಸಕ್ತರಿಗೆ, ಬಯಕೆ ಉಳ್ಳವರಿಗೆ ಒಂದು ನೇರವಾದ ಪ್ರಶ್ನೆ. ಕೊರೋನ ಮೊದಲನೆಯ ಹಂತದಲ್ಲಿ ಪ್ರಾಣ ತ್ಯಜಿಸಿದವರಿಗೆ ನಿಮ್ಮ ಜಾತಿರುದ್ರಭೂಮಿಗಳಲ್ಲಿ ಸ್ಥಳವೇಕೆ ಸಿಗಲಿಲ್ಲ. ನಿಮ್ಮ ಜಾತಿಯವರೇ ಆದ ಎಷ್ಟೋ ಮಂದಿ ಎಲ್ಲಿಯೋ ಮಣ್ಣಾದರಲ್ಲ, ಸುಟ್ಟು ಬೂದಿಯಾದರಲ್ಲ. ಅವರನ್ನೆಲ್ಲಾ ತಂದು ಇಲ್ಲಿಯೇ ಊಣಿ, ಇಲ್ಲಿಯೇ ಸುಡಿ ಎನ್ನಲಿಲ್ಲವೇಕೆ?
ನಮ್ಮ ಸಮುದಾಯಗಳು ವೈವಿಧ್ಯತೆಯಿಂದಿರಲಿ ಒಪ್ಪಿಕೊಳ್ಳೋಣ ಆದರೆ ಪ್ರತ್ಯೇಕತೆಯನ್ನು ಮಾತ್ರ ಒಪ್ಪಿಕೊಳ್ಳುವುದು ಬೇಡ, ಅನುಸರಿಸುವುದೂ ಬೇಡ, ನಿರೀಕ್ಷಿಸುವುದೂ ಬೇಡ. ಸಮಾಜವೊಂದು ಅವಿಭಕ್ತ ಕುಟುಂಬವಾದರೆ ಎಲ್ಲವೂ ಚೆಂದ, ಅವರವರ ಸ್ವಾರ್ಥಗಳಿಗೆ ವಿಭಕ್ತ ಕುಟುಂಬವಾದರೆ ಎಲ್ಲವೂ ಹಾಳಾದ ಕೊಂಪೆ. ಜಡ್ಡು ಸಂಪ್ರದಾಯಗಳನ್ನು, ಪದ್ದತಿಗಳನ್ನು ಆಚರಿಸಿದ ಹಿರಿಕರು ಸಮಾಧಿಯಲ್ಲಾದರೂ ಎಲ್ಲವನ್ನು ಮರೆತು ಒಂದಾಗಿರಲು ಬಿಡಿ. ಬದುಕಿದ್ದಾಗಲೂ ಎಲ್ಲರೊಂದಿಗೆ ಒಂದಾಗಿರಲು ಕಲಿತು ನೋಡಿ.
*ಚಿಮಬಿಆರ್ (ಮಂಜುನಾಥ ಬಿ.ಆರ್)*
*ಯುವಸಾಹಿತಿ, ಸಂಶೋಧಕ, ವಿಮರ್ಶಕ**ದೂರವಾಣಿ ಸಂಖ್ಯೆ:-೮೮೮೪೬೮೪೭೨೬*