ಚಾಮರಾಜನಗರ: ಕಿರು ಉದ್ದಿಮೆ ಸ್ಥಾಪನೆಗೆ ಅಗತ್ಯವಿರುವ ಸಹಾಯಧನ, ಮಾರ್ಗದರ್ಶನ ಕಲ್ಪಿಸಿಕೊಟ್ಟು ಸ್ವಯಂ ಉದ್ಯೋಗ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ತೋಟಗಾರಿಕೆಯಲ್ಲಿ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಸೃಜನೆ, ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮದಡಿ ಜೇನುಕೃಷಿ, ಅಣಬೆ ಬೇಸಾಯ, ತರಕಾರಿ ನರ್ಸರಿ ಅಭಿವೃದ್ದಿ ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿ ನಂತರ ಶಿಬಿರಾರ್ಥಿಗಳು ಸ್ವಯಂ ಉದ್ಯೋಗ ನಿರ್ವಹಿಸಲು ಅಗತ್ಯವಿರುವ ಬ್ಯಾಂಕ್ ಸಾಲ ಪಡೆಯಲು ಹಾಗೂ ಇತರೆ ಮಾಹಿತಿ ನೀಡಲಾಗುವುದು. ಅಮೆಜಾನ್ ನಂತಹ ಆನ್‌ಲೈನ್ ಟ್ರೇಡಿಂಗ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಿಳಿಸಿದರು.
ರೈತರು ಬೆಳೆದ ಫಸಲಿನ ಮೌಲ್ಯವರ್ಧನೆ ಮಾಡಲು ಸಾಕಷ್ಟು ಅವಕಾಶಗಳಿವೆ. ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳದಲ್ಲಿಯೂ ಉತ್ಪನ್ನಗಳಿಗೆ ಬೇಡಿಕೆಯಿದೆ. ಕಿರು ಉದ್ದಿಮೆ ಸ್ಥಾಪನೆಗೆ ಸಹಾಯಧನ, ಮಾರ್ಗದರ್ಶನ ಮಾಡಲಾಗುವುದು. ಶಿಬಿರಾರ್ಥಿಗಳು ಸರ್ಕಾರದ ವಿವಿಧ ಯೋಜನೆಗಳಡಿ ಲಭ್ಯವಿರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಮುಂದೆ ಬರಬೇಕೆಂದು ಸಲಹೆ ಮಾಡಿದರು.
ಮುಂದಿನ ದಿನಗಳಲ್ಲಿ ತರಬೇತಿಗೆ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಸ್ತ್ರೀಶಕ್ತಿ ಗುಂಪಿಗೆ ಎನ್.ಆರ್.ಎಲ್.ಎಂ ಯೋಜನೆಯಡಿ ಮೂಲಸೌಕರ್ಯ, ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಾಯಧನಕ್ಕಾಗಿ ಕಮ್ಯುನಿಟಿ ನಿಧಿಯಡಿ ನೆರವು ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ತಿಳಿಸಿದರು.
ತೋಟಗಾರಿಕೆ ಉಪನಿರ್ದೇಶಕರಾದ ಶಿವಪ್ರಸಾದ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸಿದ್ದರಾಜು, ಸಂಪನ್ಮೂಲ ವ್ಯಕ್ತಿ ಡಾ. ಮೋಹನ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.