ಚಾಮರಾಜನಗರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಚಾಮರಾಜನಗರ ತಾಲೂಕಿನ ಮಲ್ಲೂಪುರ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಬುಧವಾರ (ಮಾರ್ಚ್ ೯) ನಡೆಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಎಸ್ ಪ್ರೇಮಲತಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತ ಗ್ರಾಮಗಳಿಂದ ಕೂಡಿದ ದೇಶವಾಗಿದೆ. ಗ್ರಾಮೀಣ ಅಭಿವೃದ್ದಿ ಮೂಲಕ ರಾಷ್ಟ್ರೋದ್ದಾರ ಎಂಬುದು ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳು ದೇಶ ಕಟ್ಟುವ ಯುವ ಪ್ರಜೆಗಳಾಗಿ ಸೇವಾ ಮನೋಭಾವ, ಸಹಕಾರತತ್ವ, ಸಮಯ ಪ್ರಜ್ಞೆ, ಕಾಯಕದಲ್ಲಿ ಬದ್ದತೆ, ಶಿಸ್ತು ಇತ್ಯಾದಿ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಂಡು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮೀಣಾಭಿವೃದ್ದಿ ಕನಸನ್ನು ನನಸು ಮಾಡಲು ಕಾರ್ಯಪ್ರವೃತರಾಗಬೇಕು ಎಂದರು.

ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜಿನ ಡಾ. ಹೆಚ್. ಎಂ ನಿರ್ಮಲ ಅವರು ಮಾತನಾಡಿ ಯುವಶಕ್ತಿಯು ನಿಸ್ವಾರ್ಥ ಸೇವೆ, ಶಿಕ್ಷಣದ ಅರಿವು, ರಾಜಕೀಯ ಪ್ರಜ್ಞೆ, ಮತದಾನದ ಮಹತ್ವ, ಆರ್ಥಿಕ ಸ್ವಾವಲಂಬನೆ, ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿಯನ್ನು ಬೆಳೆಸಿಕೊಂಡು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬೇಕು. ಸರ್ಕಾರದ ಹಲವು ಸವಲತ್ತುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್. ಪ್ರೇಮ್‌ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಡಾ. ಎಂ.ಎಸ್. ಮಂಜುನಾಥ, ಎಂ. ಚಂದ್ರಕಲಾ, ಸಹ ಶಿಬಿರಾಧಿಕಾರಿ ಡಾ. ಎನ್.ಜೆ. ಶಶಿಕಲಾ, ಸಿ. ರಾಜೇಂದ್ರ, ಸಹಾಯಕ ಪ್ರಾಧ್ಯಾಪಕರಾದ ಸಿದ್ದರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗಶೆಟ್ಟಿ, ಎಂ.ಎಸ್. ಶಿವಸ್ವಾಮಿ, ಎಂ.ಎಸ್. ನಾಗರಾಜು, ಮಂಜುನಾಥ್, ಕೃಷ್ಣ ಹಾಗೂ ಗ್ರಾಮದ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
