ಮಡಿಕೇರಿ : ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಿಯಂದಡ-1ನೇ ಗ್ರಾಮದಲ್ಲಿ ಕೋವಿಡ್-೧೯ ಪಾಸಿಟಿವ್ ಸಂಖ್ಯೆ ಹೆಚ್ಚುತ್ತಿರುವುದರಿಂದ ಜೂನ್ 16ರ ಮಧ್ಯಾಹ್ನ 1 ಗಂಟೆಯಿಂದ ಜೂನ್ 24ರ ಸಂಜೆ 6 ಗಂಟೆಯವರೆಗೆ ನರಿಯಂದಡ-1 ಗ್ರಾಮವನ್ನು ಸಂಪೂರ್ಣ ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಈ ಸಮಯದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ, ಯಾರೂ ಅನಾವಶ್ಯಕವಾಗಿ ತಿರುಗಾಡದಂತೆ ಸೂಚಿಸಲಾಗಿದೆ. ಒಂದು ವೇಳೆ ಅನಾವಶ್ಯಕವಾಗಿ ವಾಹನಗಳು ತಿರುಗಾಡಿದರೆ ವಾಹನಗಳನ್ನು ಜಪ್ತಿ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಳ್ಳುವುದಲ್ಲದೆ, ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಲಿದೆ.
ಹೊರಗಡೆಯಿಂದ ಯಾವುದೇ ಕಾರ್ಮಿಕರು ಗ್ರಾಮದೊಳಗೆ ಪ್ರವೇಶಿಸದಂತೆ, ಅಂಗಡಿ ಮಾಲೀಕರು ಅಂಗಡಿಯನ್ನು ತೆರೆದು ವ್ಯಾಪಾರ ಮಾಡಿದಲ್ಲಿ ಪರವಾನಗಿಯನ್ನು ರದ್ದು ಪಡಿಸಲಾಗುವುದು ಎಂದು ನರಿಯಂದಡ ಗ್ರಾಮ ಪಂಚಾಯಿತಿ ಸೂಚಿಸಿದ್ದು, ಸಾರ್ವಜನಿಕರು ಗ್ರಾಮ ಪಂಚಾಯಿತಿಯೊಂದಿಗೆ ಕೋವಿಡ್-19ನ್ನು ತಡೆಗಟ್ಟಲು ಕೈ ಜೋಡಿಸುವಂತೆ ನರಿಯಂದಡ ಗ್ರಾಮ ಪಂಚಾಯಿತಿ ಪಿಡಿಒ ಮನವಿ ಮಾಡಿದ್ದಾರೆ.