ಪಾಂಡವಪುರ: ಸರ್ಕಾರ ಕೋವಿಡ್ ವಿಚಾರದಲ್ಲಿ ಜನರಿಗೆ ತ್ವರಿತವಾಗಿ ಒದಗಿಸುತ್ತಿರುವ ಸೇವೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ವಿರೋಧ ಪಕ್ಷದವರು ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಹಾಗೂ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿ ಅವರು ಮಾತನಾಡಿ, ಅರುವತ್ತು ವರ್ಷ ಅಧಿಕಾರದಲ್ಲಿದ್ದವರು ವೃಥಾ ಕಾಲು ಎಳೆಯುವುದನ್ನು ಬಿಟ್ಟು, ನಾವು ನಿಮ್ಮೊಂದಿಗೆ ಬರುತ್ತೇವೆ ಎಂದು ಸರ್ಕಾರದ ಜತೆಯಲ್ಲಿ ನಿಂತು ಕೆಲಸ ಮಾಡಬೇಕು ಎಂದರು.
ನನಗೂ ಎಂಟತ್ತು ಜನರು ದೊಣ್ಣೆ ತೆಗೆದುಕೊಂಡು ಬಂದಿದ್ದರು. ಅವರಿಗೆ ಸಾವಧಾನವಾಗಿಯೇ ಉತ್ತರ ಹೇಳಿ ಕಳುಹಿಸಿದ್ದೇನೆ. ಸರ್ಕಾರ ಮತ್ತು ನಾನು ತಪ್ಪು ಮಾಡದಿದ್ದಾಗ ಭಯ ಏಕೆ ಎಂದು ಪ್ರಶ್ನಿಸಿದರಲ್ಲದೆ, ಕೊರೊನಾ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಚಿವ ನಾರಾಯಣಗೌಡ ಅವರು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ಧೈರ್ಯವಂತರು. ಎರಡು ಬಾರಿ ಕೊರೋನಾ ಸೋಂಕಿಗೆ ತುತ್ತಾದರೂ, ಎದೆಗುಂದದೆ ನಾಲ್ಕೈದು ದಿನಕ್ಕೆ ಹೊರ ಬಂದು ಅಧಿಕಾರಿಗಳ ಸಭೆ ನಡೆಸಿ ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದರು. ಸಿದ್ದರಾಮಯ್ಯ ಅವರು ಒಮ್ಮೆ ಸೋಂಕಿಗೆ ಒಳಗಾಗಿ ಹದಿನೈದು ದಿನಗಳ ಕಾಲ ಯಾರ ಬಳಿಯೂ ಮಾತನಾಡಲಿಲ್ಲ. ಪ್ರಧಾನಿ ಮೋದಿಯವರಿಗೆ ದೇಶ ಮತ್ತು ದೇಶದ ಪ್ರಜೆಗಳ ಮೇಲಿನ ಪ್ರೀತಿ ಅಪಾರವಾಗಿದೆ ಯಾರಿಂದಲೂ ಈ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದರು.
ಸರ್ಕಾರದ ಸಂಬಳ ಪಡೆಯುವ ಕೆಲ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಸರ್ಕಾರದ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿದ್ದಾರೆ. ಈ ಎಲ್ಲದರ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಬಿಜೆಪಿ ಇದ್ಯಾವುದಕ್ಕೂ ಭಯ ಪಡಬಾರದು. ಸರ್ಕಾರಕ್ಕೆ ಎಲ್ಲವನ್ನು ನಿಭಾಯಿಸುವ ಶಕ್ತಿ ಇದೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ವಿಜಯಕುಮಾರ್, ತಾಲೂಕು ಅಧ್ಯಕ್ಷ ಎಲ್.ಅಶೋಕ್, ಮೈಷುಗರ್ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್, ಬಿಂಡಹಳ್ಳಿ ಉದಯ್, ಎಂ.ಚಿಕ್ಕಣ್ಣ ಇತರರು ಇದ್ದರು.

By admin