ನಂಜನಗೂಡು: ಮಳೆಗಾಲದಲ್ಲಿ ಸಂಭವಿಸಬಹುದಾದ ಕಪಿಲಾ ನದಿ ಪ್ರವಾಹದ ಹಿನ್ನಲೆಯಲ್ಲಿ ದಂಡಾಧಿಕಾರಿ ಮೋಹನ್ ಕುಮಾರಿ ಅವರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಂತೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದರು.
ಸಭೆಯಲ್ಲಿ ಮಾತನಾಡಿದ ದಂಡಾಧಿಕಾರಿ ಮೋಹನ್ ಕುಮಾರಿ ಅವರು ಕಳೆದ ವರ್ಷ ಪ್ರವಾಹದಲ್ಲಿ ಕೋವಿಡ್ 19 ಕಡಿಮೆಯಾಗಿತ್ತು ಆದರೆ ಈ ಬಾರಿ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು. ಅಂತರ ಕಾಯ್ದುಕೊಳ್ಳಬೇಕು ಆದ್ದರಿಂದ ಕಳೆದ ಬಾರಿ ಗಿಂತ ಹೆಚ್ಚು ಗಂಜಿ ಕೇಂದ್ರ ತೆರೆಯಬೇಕು. ಕಳೆದ ಬಾರಿ ಪ್ರವಾಹದಲ್ಲಿ ಹಾನಿಯಾದ ಮನೆಗಳಿಗೆ ಹಣ ಬಿಡುಗಡೆಯಾಗಿದೆ. ಈ ಬಾರಿ ಅದೇ ಮನೆಗೆ ಹಾನಿಯಾದರೆ ಹಣ ನೀಡುವುದಿಲ್ಲ. ಗೋಶಾಲೆ ತೆರೆಯಬೇಕು, ಬೆಳೆಗಳ ಮುಳುಗಡೆ ಬಗ್ಗೆ ಎಚ್ಚರಿಕೆ ವಹಿಸಬೇಕು, ಕಳೆದ ಬಾರಿ ನಗರದಲ್ಲಿ ಮುಳುಗಡೆಯಾಗಿದ್ದ ಹಳ್ಳದಕೇರಿ, ಮೇದರ ಬೀದಿ, ಒಕ್ಕಲಗೇರಿ, ಸರಸ್ವತಿ ಕಾಲೋನಿ, ಕುರುಬಗೇರಿ ಸ್ಥಳ ಪರಿಶೀಲಿಸಿ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಿದರು.
ಅಗ್ನಿಶಾಮಕದಳ ಮತ್ತು ನಗರಸಭೆಯವರು ಹೆಚ್ಚು ಮುಂಜಾಗ್ರತಾ ಕ್ರಮ ವಹಿಸಬೇಕು. ಇದರ ಜೊತೆಗೆ ಪ್ರಾವಿಣ್ಯತೆ ಹೊಂದಿರುವ ಈಜುಗಾರರನ್ನು ಗುರುತಿಸಬೇಕು ಮತ್ತು ಎಲ್ಲೆಲ್ಲಿ ರಸ್ತೆ ಮುಳುಗಡೆಯಾಗುತ್ತದೆಯೋ ಅಂತಹ ಕಡೆ ಬದಲಿ ರಸ್ತೆ ನಿರ್ಮಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದಲ್ಲದೆ, ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಅಗ್ನಿಶಾಮಕ ದಳ, ನೀರಾವರಿ ಇಲಾಖೆ, ನಗರಸಭೆ ಪೊಲೀಸ್, ಕೃಷಿ, ಲೋಕೋಪಯೋಗಿ,ದಾಸೋಹ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.