ಧಾರವಾಡ: ಕನ್ನಡದ ಹಿರಿಯ ಸಾಹಿತಿ ಚೆಂಬೆಳಕಿನ ಖ್ಯಾತಿಯ ಕವಿ ನಾಡೋಜ ಚೆನ್ನವೀರ ಕಣವಿ (೯೩) ಇಹಲೋಕ ತ್ಯಜಿಸಿದ್ದಾರೆ. ಇದು ಕನ್ನಡ ಸಾಹಿತ್ಯ ಲೋಕಕ್ಕೆ ಮತ್ತೊಂದು ಬರಸಿಡಿಲು ಬಡಿದಂತಾಗಿದೆ.
ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕನ್ನಡದ ಹಿರಿಯ ಸಾಹಿತಿ, ನಾಡೋಜ ಚೆನ್ನವೀರ ಕಣವಿ ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕವಿ ನಾಡೋಜ ಡಾ.ಚೆನ್ನವೀರ ಕಣವಿ ಆರೋಗ್ಯ ಹದಗೆಟ್ಟಿದ್ದು ಅವರು ಕಳೆದೊಂದು ತಿಂಗಳಿನಿಂದ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಚೆನ್ನವೀರ ಕಣವಿ ಅವರು ಸುಮಾರು ಒಂದು ತಿಂಗಳಿನಿಂದ ಎಸ್ಡಿಎಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚೆನ್ನವೀರ ಕಣವಿ ಅವರ ಆರೋಗ್ಯ ವಿಚಾರಿಸಿದ್ದರು. ಅಕ್ಯೂಟ್ ರೆಸ್ಪಿರೇಟರಿ ಡಿಸ್ಟ್ರೆಸ್ ಸಿಂಡ್ರೋಮ್ನಿಂದ ಚೆನ್ನವೀರ ಕಣವಿ ಬಳಲುತ್ತಿದ್ದರು. ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಹಿರಿಯ ಕವಿ ಕಣವಿ ಅವರಿಗೆ ಕೊರೊನಾ ಸೋಂಕು ಕೂಡ ದೃಢಪಟ್ಟಿತ್ತು. ಆ ನಂತರ ಚೆನ್ನವೀರ ಕಣವಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಕೆಲದಿನಗಳ ಬಳಿಕ ಮತ್ತೆ ಆರೋಗ್ಯ ಕ್ಷೀಣಿಸಿತ್ತು. ಇಂದು ಅವರು ವಿಧಿವಶರಾಗಿದ್ದಾರೆ.