೧೬ನೇ ಶತಮಾನದಲ್ಲಿ ದಕ್ಷಿಣ ಭಾರತದ ಚಕ್ರಾಧಿಪತಿ ಕನ್ನಡ ಸಾಮ್ರಾಜ್ಯ ರಮಾರಮಣ ವಿಜಯನಗರ ಮಹಾರಾಜ ಶ್ರೀಕೃಷ್ಣದೇವರಾಯರ ಭವಿತವ್ಯ ಆಡಳಿತ ವಿಜೃಂಭಿಸಿತ್ತು. ನಾಡು-ನುಡಿ ನೆಲ-ಜಲ ಜನ-ಮನ ಕವಿ-ಕಲಾವಿದ ಮಹಿಳೆ-ಮಕ್ಕಳು ಬೆಳೆ-ಬಂಗಾರ ಆದಿಯಾಗಿ ಇಡೀ ಸಾಮ್ರಾಜ್ಯವು ಶಾಂತಿ ನೆಮ್ಮದಿ ಸಮೃದ್ಧಿ ಮುಂತಾದವುಗಳಿಂದ ತುಂಬಿತುಳುಕಿತ್ತು. ದೇಶ-ವಿದೇಶದ ಪ್ರವಾಸಿಗರು ವರ್ತಕರು ಅತಿಥಿಗಳು ಸಾಮಂತರು ಮೊದಲ್ಗೊಂಡು ಪ್ರತಿಯೊಬ್ಬರೂ ವಿಜಯನಗರದ ಅರಸರ ಆಡಳಿತದ ಪರಿಣಾಮವಾಗಿ ಫಲಿಸಿದ್ದ ಸರ್ವಾಂಗೀಣ ಅಭಿವೃದ್ಧಿಯ ಸುಭಿಕ್ಷ ಅಸ್ಮಿತೆಯನ್ನು ಕಂಡು ಬೆರಗಾಗುತ್ತಿದ್ದರು. ಸಕಲ ಲೋಕವು ಹೊಗಳುವಂಥ ಹೃದಯ ಶ್ರೀಮಂತಿಕೆಯ ಸುಭದ್ರ ನೆಲೆಬೀಡು ಪ್ರಬುದ್ಧ ಕನ್ನಡನಾಡು ಚಕ್ರವರ್ತಿ ಕೃಷ್ಣದೇವರಾಯರ ಆಳ್ವಿಕೆಯಲ್ಲಿ ಅದ್ಭುತ ಎನಿಸಿತ್ತು! ಹಲವಾರು ಸಾಮಂತ ರಾಜ ಮಹಾರಾಜ ಪಾಳೇಗಾರರು ತಂತಮ್ಮ ಸಣ್ಣಪುಟ್ಟ ಪ್ರದೇಶ ರಾಜ್ಯ ಪ್ರಾಂತ್ಯಗಳ ಆಡಳಿತವನ್ನು ನಿಶ್ಚಿಂತೆಯಿಂದ ನಡೆಸುತ್ತಿದ್ದರು. ಇವರೆಲ್ಲರ ಪೈಕಿ ಅಗ್ರಗಣ್ಯನೆಂದರೆ ಸಾಮಂತರಾಜ ಪಾಳೇಗಾರ್ ಕೆಂಪೇಗೌಡರು.

ಕ್ರಿ.ಶ.೧೫೧೦ನೇ ಜೂನ್ ೨೭ರಂದು ಶ್ರೀಮತಿ ಲಿಂಗಾಂಬೆ ಮತ್ತು ಪಾಳೇಗಾರ ಕೆಂಪನಂಜೇಗೌಡ ದಂಪತಿಯ ಜೇಷ್ಠ ಪುತ್ರ ರತ್ನ ಜನನ. ೧೫೧೫ರಲ್ಲಿ ಐದು ವರ್ಷದವನಿದ್ದಾಗ ತಂದೆಯೊಡನೆ ಹಂಪಿಯಲ್ಲಿ ಪ್ರಾರಂಭವಾದ ಮೊಟ್ಟಮೊದಲ ವಿಜಯದಶಮಿ ಉತ್ಸವವನ್ನು ಕಣ್ಣಾರೆ ಕಂಡ ಬಾಲಕ ಕೆಂಪಯ್ಯನ ಮನದಲ್ಲಿ ಮೂಡಿದ್ದು; ಭವಿಷ್ಯದಲ್ಲಿ ತಾನೂ ಸಹ ಕೆಂಪರಾಯ ಹೆಸರಿನೊಡನೆ ರಾಜ್ಯವನ್ನು ವಿಸ್ತರಿಸಿ ಉತ್ತಮ ಆಳ್ವಿಕೆ ನಡೆಸಬೇಕೆಂಬ ಹೆಬ್ಬಯಕೆ! ದೈವಲೀಲೆ ಎಂಬಂತೆ ಗುರುಕುಲದಲ್ಲಿ ಶಸ್ತ್ರಾಸ್ತ್ರ ಮತ್ತು ಸಕಲ ವಿದ್ಯಾ ಪಾರಂಗತರಾದರು ಕೆಂಪೇಗೌಡರು. ೧೫೨೮ರಲ್ಲಿ ತಮ್ಮ ಸೋದರಮಾವನ ಮಗಳು ಚೆನ್ನಾಂಬೆಯೊಡನೆ ವಿವಾಹ. ಇದೇ ಸಂದರ್ಭದಲ್ಲಿ ಯುವರಾಜನಾಗಿ ಪಟ್ಟಾಭಿಷೇಕ. ೧೫೨೯ರಲ್ಲಿ ಶ್ರೀಕೃಷ್ಣದೇವರಾಯ ನಿಧನರಾದ ಬಳಿಕ, ಆವರೆಗೂ ಸಾಮಂತ ರಾಜ ನಾಗಿದ್ದ ಕೆಂಪನಂಜೇಗೌಡರ ಪುತ್ರ ಮೊದಲನೇ ಕೆಂಪೇಗೌಡರು ಸ್ವತಂತ್ರ ಮಹಾರಾಜನಾಗಿ ೧೫೩೦ರಿಂದ ೧೫೬೯ರವರೆಗೆ ೩೯ವರ್ಷ ನಿರಂತರ ಆಳ್ವಿಕೆ ನಡೆಸಿ ಸ್ತ್ಯುತ್ಯಾರ್ಹ ರೀತಿಯಲ್ಲಿ ನಿರಂಕುಶ ಪ್ರಭುವಾಗಿ ಮೆರೆಯುತ್ತಾರೆ.

ಆವತಿಯಿಂದ ಮೊದಲ್ಗೊಂಡು ಜಿಗಣಿ ಬಾಣಾವರ ತಲಘಟ್ಟಪುರ ಹಲಸೂರು ಹೊಸೂರು ಕೋಲಾರ ಶಿವಗಂಗೆ ಸಿದ್ಧಗಂಗೆ ಕುಣಿಗಲ್ ಹುಲಿಕಲ್ ಹುಲಿಯೂರುದುರ್ಗ ಹುತ್ತರಿದುರ್ಗ ಸಾವನದುರ್ಗ ದೇವನಹಳ್ಳಿ ಗಂಗೇನಹಳ್ಳಿ ಹೊಸಹಳ್ಳಿ ಸಾತನೂರು ಕಾನಕಾನಹಳ್ಳಿ ಮುದ್ದೇನಹಳ್ಳಿ ರಾಗಿಮುದ್ದನಹಳ್ಳಿ ಮಾಗಡಿ ಹಾಗೂ ರಾಮನಗರ ಸುತ್ತಮುತ್ತಲವರೆಗೆ ಹಬ್ಬಿಸಿದ್ದರು. ವಿಜಯನಗರ ಸಾಮ್ರಾಜ್ಯದ ಪ್ರತಿರೂಪದಂತಿದೆ ಎಂದು ಪ್ರಸಿದ್ಧಿಪಡೆದು ಸಾಂಗವಾಗಿ ಸಾಗಿತ್ತು ಕೆಂಪರಾಯ ಉರುಫ್‌ಕೆಂಪೇಗೌಡರ ದರ್ಬಾರ್! ಚಕ್ರವರ್ತಿ ಅಚ್ಯುತರಾಯನಿಂದಲೇ ಅನುಮತಿ ಪಡೆದು ಸರ್ವತಂತ್ರ ಸ್ವತಂತ್ರನಾಗಿ ಸಾರ್ವತ್ರಿಕ ಮೆಚ್ಚುಗೆ ಗಳಿಸಿದರು. ಅಪರಿಚಿತರು ಆಗಂತುಕರು ಆಶ್ಚರ್ಯಚಕಿತರಾಗುವಂತೆ ಸಕಲಗುಣ ಸಂಪನ್ನನಾಗಿ ವಿಜಯನಗರ ಆಳರಸರಿಂದ ಶಹಬ್ಬಾಸ್‌ಗಿರಿ ಪಡೆದರು. ಸಮರ್ಥ ಆಡಳಿತಗಾರನಾಗಿ ಶ್ರೇಷ್ಠ ರಾಜ್ಯಭಾರ ನಡೆಸುತ್ತಿದ್ದ ಏಕೈಕ ಸಾಮಂತನೆಂದೂ ಯಲಹಂಕ-ಮಾಗಡಿ ಜೋಡಿ ಸಂಸ್ಥಾನದ ಯಶಸ್ವಿ ದೊರೆಎಂದೂ ಅಪಾರಕೀರ್ತಿ ಗಳಿಸಿದರು ಯಲಹಂಕಪ್ರಭು ಮೊದಲನೆ ಕೆಂಪೇಗೌಡರು!

ಒಂದುದಿನ ಹುಣ್ಣಿಮೆರಾತ್ರಿಯಲ್ಲಿ ಅರಮನೆಯ ಸುಪ್ಪತ್ತಿಗೆಯಲ್ಲಿ ರಾಜಾ ಕೆಂಪೇಗೌಡರು ನಿದ್ರಾವಸ್ಥೆಯಲ್ಲಿದ್ದಾಗ ಬೆಳಗಿನ ಅಭಿಜಿನ್ ಮುಹೂರ್ತಕ್ಕೆ ಮುನ್ನ ಕೆಂಪೇಗೌಡರ ಕನಸಲ್ಲಿ ಕಾಣಿಸಿಕೊಂಡ ನಾಡದೇವತೆ ಅಣ್ಣಮ್ಮದೇವಿ ಪ್ರಸ್ತುತ ಪಡಿಸಿದ್ದೇನೆಂದರೆ:- ಮಗೂ ಕೆಂಪೇಗೌಡ ಸಕಲಜೀವಿಯ ಕಲ್ಯಾಣಾರ್ಥಕ್ಕಾಗಿ ನೀನೊಂದು ನವನಗರ ನಿರ್ಮಾಣ ಮಾಡುವಂತವನಾಗು, ನಿನ್ನ ಕಾರ್ಯವು ಶೀಘ್ರವೇ ಕೈಗೊಳ್ಳುವಂತಾಗಲಿ ಸಂಪೂರ್ಣ ಯಶಸ್ವಿಯಾಗಲಿ ಎಂದು ಆಶೀರ್ವದಿಸಿದಳು. ಅಣ್ಣಮ್ಮನ ಆಣತಿಯಂತೆ ಹೊಸದಾದ ಒಂದು ಬೃಹತ್ ನಗರವನ್ನು ನಿರ್ಮಿಸಲು ತಕ್ಕುದಾದ ಶುಭ ಮುಹೂರ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಂಪೇಗೌಡರು ಸತ್ಕಾರ್ಯವು ಪ್ರಾರಂಭವಾದ ಕ್ಷಣದಿಂದಲೆ ಆಲಸ್ಯ ತೊರೆದರು. ಸದರಿ ನಗರ ನಿರ್ಮಾಣದ ಕಾಮಗಾರಿಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಅಚ್ಚುಕಟ್ಟಾಗಿ ಸುಂದರವಾಗಿ ಸಾವಕಾಶವಾಗಿ ಆದರೆ ಪರಿಪೂರ್ಣವಾಗಿ ಯಶಸ್ವಿಯಾಗಿ ಮುಕ್ತಾಯಗೊಳಿಸಲು ಪಣ ತೊಟ್ಟರು. ತಮ್ಮ ತಾಯಿ ಮತ್ತು ಹೆಂಡ್ತಿ ಹಳೇಬೆಂದಕಾಳೂರಿನವರಾದ್ದರಿಂದ ಇವರಿಬ್ಬರ ತವರಿನ ಜ್ಞಾಪಕಾರ್ಥ ಮತ್ತು ಒಮ್ಮೆ ತಾವು ಬೇಟೆಯಾಡಲು ಬಂದಿದ್ದಾಗ ಅಜ್ಜಿನೀಡಿದ್ದ ಬೆಂದಕಾಳಿನ ನೆನಪಿಗೆ ಬೆಂಗಳೂರೆಂದು ನಾಮಕರಣ ಮಾಡಲು ಯೋ(ಜಿ)ಚಿಸಿದರು!

೧೫೩೭ರಲ್ಲಿ ಗುದ್ದಲಿಪೂಜೆಯೊಂದಿಗೆ ಪ್ರಾರಂಭವಾಗಿ ಕಾಲಕಳೆದಂತೆ ನಗರ ನಿರ್ಮಿತಿ ಕೈಂಕರ್ಯವು ನಿರೀಕ್ಷೆಗಿಂತ ಹೆಚ್ಚಿನ ಶೀಘ್ರಗತಿಯ ಪ್ರಗತಿಯಲ್ಲಿ ನಿರ್ವಿಘ್ನವಾಗಿ ಸಾಗತೊಡಗಿತು. ಇನ್ನೇನು ಕೆಲವೆ ದಿನಗಳಲ್ಲಿ ನವ ನಿರ್ಮಾಣದ ಬೆಂದಕಾಳೂರು ನಗರ ಅಸ್ತಿತ್ವಕ್ಕೆ ಬರುವ ಎಲ್ಲಾ ಲಕ್ಷಣ ಕಂಡುಬಂತು. ನಾಡಪ್ರಭು ಕೆಂಪೇಗೌಡರು ಈ ಹಿಂದೆ ಎಂದೋ ಒಂದು ಘಳಿಗೆ ತಮ್ಮ ಮನಸಲ್ಲಿ ಅಂದು ಕೊಂಡಿದ್ದಂತೆ ೪ ದಿಕ್ಕ್ಕುಗಳಲ್ಲಿ ಗಡಿಗೋಪುರ ಸಹಿತದ ಹೊಸ ರಾಜಧಾನಿ ನಿರ್ಮಾಣದ ಕನಸು ನನಸಾಗುವ ಸಕಾಲ ದೇವರ ಕೃಪೆಯಿಂದಾಗಿ ಒದಗಿಬಂದ ಕ್ಷಣವನ್ನು ಜ್ಞಾಪಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು ತೃಪ್ತಿಯ ಸಮಾಧಾನ ಪಟ್ಟರು. ಆದರೆ, ತಮ್ಮ ಇಚ್ಚೆ ಮತ್ತು ಅಣ್ಣಮ್ಮ ತಾಯಿ ಇಚ್ಚೆಯಂತೆ ಬೃಹತ್ ನಗರವೊಂದು ಲೋಕಾರ್ಪಣೆ ಆಗುವಕಾಲ ಸನ್ನಿಹಿತ ಆಗುತ್ತಿದ್ದಂತೆ ಅನಿರೀಕ್ಷಿತವಾಗಿ ಸಣ್ಣದೊಂದು ಎಡರುತೊಡರು ಕಾಣಿಸಿಕೊಂಡಿತು. ಇದು ದುರದೃಷ್ಟಕರವೋ ದುರ್ವಿಧಿಯೋ ಎಂಬ ಜಿಜ್ಞಾಸೆಯ ಜೇಡರಬಲೆಗೆ ಸಿಲುಕಿದಂತಿತ್ತು ನಾಡಪ್ರಭುಗಳ (ಪರಿ)ಸ್ಥಿತಿ?
ಲಕ್ಷ್ಮೀದೇವಿ ಬಲಿದಾನದ ತೊಡಕಿನ ಸಂಕ್ಷಿಪ್ತ ವಿವರ:-
ಯೋಚನೆ-ಯೋಜನೆಯಂತೆ ಒಟ್ಟಾರೆ ೯ದ್ವಾರಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ೫ ಕಿರಿಯ ರಹಸ್ಯ ದ್ವಾರಗಳ, ೪ಮಹಾದ್ವಾರಗಳ(ಪೂರ್ವಕ್ಕೆಹಲಸೂರುದ್ವಾರ, ಪಶ್ಚಿಮಕ್ಕೆಸೊಂಡೆಕೊಪ್ಪದ್ವಾರ, ಉತ್ತರಕ್ಕೆಯಲಹಂಕದ್ವಾರ ದಕ್ಷಿಣಕ್ಕೆಆನೆಕಲ್‌ದ್ವಾರ) ಗಡಿಗೋಪುರಗಳ ಕಾಮಗಾರಿ ಮುಗಿದಿತ್ತು. ನಗರದ ಸುತ್ತಲೂ ಕೋಟೆ ನಿರ್ಮಾಣ ಕಾಮಗಾರಿಗಾಗಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ನಿಲ್ಲಿಸಿದ ಕಂಬಗಳು ಮೂರೂ ದಿಕ್ಕಿನಲ್ಲಿ ಯಶಸ್ವಿಯಾಗಿ ನಿಂತವು. ಆದರೆ ದಕ್ಷಿಣ ದಿಕ್ಕಿನ ಹೆಬ್ಬಾಗಿಲ ಕಂಬವು ಮಾತ್ರ ಅದೆಷ್ಟು ಶ್ರಮಪಟ್ಟು ಪದೇಪದೇ ಕಟ್ಟಿದರೂ ಸ್ತಿರವಾಗಿ ನಿಲ್ಲದೆ ಬಿದ್ದುಹೋಗುತ್ತಿತ್ತು?!ಶಿಲ್ಪಿಗಳು ಶಾಸ್ತ್ರಜ್ಞರು ಪ್ರಾಜ್ಞರು ಆದಿಯಾಗಿ ತಿಳಿದವರೆಲ್ಲ ತಲೆಕೆರೆದು ಬೈತಲೆಕೆಡಿಸಿಕೊಂಡರೂ ಸಾಧ್ಯವಾಗಲಿಲ್ಲ.ಅದ್ಯಾರ್ಯಾರೋ ಎಂತೆಂತದ್ದೊ ಎಷ್ಟೆಷ್ಟೊ (ಕು)ಯುಕ್ತಿ ಖರ್ಚುಮಾಡಿದರೂ ಸಮಸ್ಯೆ ಬಗೆಹರಿಯದಿದ್ದಾಗ ವಿಧಿಯಿಲ್ಲದೆ ಈ ದುಸ್ಸಂಗತಿಯನ್ನು ದೊರೆಗಳ ಗಮನಕ್ಕೆ ತರುತ್ತಾರೆ. ವಿಷಯ ತಿಳಿದು ಹೌಹಾರಿ ದಿಗ್ಭ್ರಮೆಗೊಂಡ ಕೆಂಪೇಗೌಡರು ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಾರೆ. ಈ ಬಗ್ಗೆ ತಜ್ಞರೊಡನೆ ಕೂಲಂಕಶವಾಗಿ ಚರ್ಚಿಸಿದ ನಂತರ ಒಂದು ಪರಿಹಾರ ದೊರಕಿತು. ಜ್ಯೋತಿಷ್ಯರ ಸಲಹೆ ಪ್ರಕಾರ ಇದೊಂದು ಭೂತಚೇಷ್ಟೆಯಾಗಿದ್ದು ಶಮನಕ್ಕಾಗಿ ತುಂಬುಗರ್ಭಿಣಿಯನ್ನು ಜೀವಸಹಿತ ಬಲಿಕೊಡಬೇಕೆಂದು ತಿಳಿಸುತ್ತಾರೆ. ಇದನ್ನು ಕೇಳಿದ ನಾಡಪ್ರಭುಗಳು ಜರ್ಝರಿತಗೊಂಡು ಚಿಂತಾಕ್ರಾಂತರಾಗಿ ಬಹುಕಾಲ ನಿದ್ರಾಹಾರ ತೊರೆದು ಕೊರಗಿ ಕೃಶರಾಗುತ್ತಾರೆ.

ಕೈಗೆಬಂದತುತ್ತು ಬಾಯಿಗಿಲ್ಲವಾಯಿತಲ್ಲ ಎಂದು ಮಮ್ಮಲ ಮರುಗಿ ಹಗಲುರಾತ್ರಿ ತಮ್ಮ ಕುಲದೇವತೆ ಕೆಂಪಮ್ಮನ ಬಳಿ ಅಲವತ್ತುಕೊಂಡು ಆಕೆಯ ಆಣತಿಗಾಗಿ ಹಪಹಪಿಸುತ್ತಾರೆ. ದಿಕ್ಕು ತೋಚದ ಕೆಂಪೇಗೌಡರು ಸಾಮ್ರಾಟನಿಂದ ಸಲಹೆ ಪಡೆಯಲು ವಿಜಯನಗರಕ್ಕೆ ತೆರಳಿದರು. ಇದೇವೇಳೆ ಪ್ರಜೆಗಳ ಅರಿವಿಗೆ ಬರುವಂತೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆ:ನಗರ ನಿರ್ಮಾಣವು ಪೂರ್ಣವಾಗಲು ಅವಶ್ಯವಾದ ಪ್ರಾಣತ್ಯಾಗ ಮಾಡಲಿಚ್ಚಿಸುವ ಗರ್ಭಿಣಿಯು ಮುಂದೆ ಬರಬಹುದು. ಆಕೆಯ ಕುಟುಂಬಕ್ಕೆ ಜಾಗೇರುಜಾಗ ಚರಸ್ಥಿರಾಸ್ತಿ ನಗನಾಣ್ಯ ಬಿರುದುಬಹುಮಾನ ಬಳುವಳಿತಾಮ್ರಪತ್ರ ಮುಂತಾದ್ದನ್ನು ಕೊಡಲಾಗುವುದು ಎಂಬ ಢಂಗುರ ಸಾರಿಸಲಾಯ್ತು. ಕೆಲವೆತಾಸುಗಳಲ್ಲಿ ನೂರಾರು ಗರ್ಭಿಣಿಯರು ಸ್ವಇಚ್ಚೆಯಿಂದ ಸಹಕರಿಸಲು ಸಾಲುಗಟ್ಟಿನಿಂತರು. ಈಅಪೂರ್ವ ದೃಶ್ಯವನ್ನು ಕಣ್ಣಾರೆ ಕಂಡ ಕೆಂಪೇಗೌಡರ ಕುಟುಂಬವು ಕೃತಜ್ಞತಾ ಭಾವದಿಂದ ಶೋಕಕ್ಕೆ ಶರಣಾಗಿ ಆನಂದಬಾಷ್ಪ ಸುರಿಸಿ ಪ್ರಜೆಗಳ ಮನವೊಲಿಸಲು ಪ್ರಯತ್ನಿಸಿದರು. ಆತ್ಮಾರ್ಪಣೆಗೆ ಸಿದ್ಧರಿದ್ದ ಗರ್ಭಿಣಿಯರನ್ನು ಸಂತೈಸುವಾಗ ಗೌಡರ ಕುಟುಂಬವು ಜಾಗ್ರತೆವಹಿಸಿ ಜಗಜ್ಜಾಹೀರು ಪಡಿಸಿದ್ದು:ಬೇರೆಕುಟುಂಬದವರು ಅನ್ಯಾಯವಾಗಿ ಬಲಿಪಶುಆಗಬಾರದು ಅದೇನೆಇದ್ದರೂ ನಮ್ಮಕುಟುಂಬದವರೆ ಬಗೆಹರಿಸಿ ಕೊಳ್ಳುತ್ತೇವೆ. ನಾಡಿನೊಳಿತಿಗಾಗಿ ಪ್ರಜಾಕ್ಷೇಮಕ್ಕಾಗಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಸಮಸ್ಯೆ ನಮ್ಮ ಜವಾಬ್ಧಾರಿ ಆಗಿರುವುದರಿಂದ ನೀವು ನೆಮ್ಮದಿಯಿಂದ ಹೊರಡಬಹುದು. ಇದನ್ನು ಆಲಿಸಿದ ಪ್ರಜೆಗಳು ಕಣ್ಣಿರು ಸುರಿಸುತ್ತ ಹಿಂದಿರುಗಿದರು!

ಈ ಎಲ್ಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕೆಂಪೇಗೌಡರ ಸೊಸೆ ತುಂಬುಗರ್ಭಿಣಿ ಲಕ್ಷ್ಮಿದೇವಿಯು ತಮ್ಮ ಮಾವನವರ ಕನಸಿನ ರಾಜಧಾನಿ ಶೇ.೯೯ರಷ್ಟು ಮುಕ್ತಾಯವಾಗಿದ್ದು ಈಗ ಬಂದೊದಗಿರುವ ಏಕೈಕ ಅಡೆತಡೆ ಕೆಡಕು ತೊಡೆದು ಹಾಕಲು ನಿರ್ಧರಿಸುತ್ತಾಳೆ. ಮಧ್ಯರಾತ್ರಿಯಲ್ಲಿ ಯಾರಿಗೂ ತಿಳಿಯದಂತೆ/ತಿಳಿಸದೇ ಸ್ವಯಂತೀರ್ಪು ತೆಗೆದುಕೊಂಡು ಅರಮನೆ ತೊರೆದು ನಿಗಧಿತ ಸ್ಥಳಕ್ಕೆ ತಲುಪಿ ಜನಹಿತಕ್ಕಾಗಿ ಸಕಲಸಮಸ್ಯೆ ಪರಿಹಾರಕ್ಕಾಗಿ ಕೋಟೆಕಂಬವು ಸುಸ್ತಿರವಾಗಿ ಶಾಶ್ವತ ನಿಲ್ಲುವಂತೆ ದೇವರನ್ನು ಪ್ರಾರ್ಥಿಸಿದ ಬಳಿಕ ತಾನು ತಂದಿದ್ದ ಕುಡುಗೋಲಿಂದ ತನ್ನ ಕೈಯಾರೆ ಕತ್ತು ಕತ್ತರಿಸಿಕೊಂಡು ಪ್ರಾಣ ಸಮರ್ಪಿಸಿದಳು. ನಿಸ್ವಾರ್ಥ ನಿರ್ಮಲ ಚಿತ್ತದ ಕುಲವಧುವಾಗಿ ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅಪಾರಕೀರ್ತಿ ದೊರಕಿಸಿ ತ್ಯಾಗಮಯಿ ಪಟ್ಟ ಗಿಟ್ಟಿಸಿದ ಲಕ್ಷ್ಮಿದೇವಿಯಂಥ ವಂಶೀಕ ಹೆಣ್ಣುಮಗಳ ಪವಿತ್ರ ಜೀವನವು ಸಾರ್ಥಕತೆಯ ಜ್ವಲಂತ ನಿದರ್ಶನ, ಅನುಕರಣೀಯ!

ತಮ್ಮ ಬೀಗರ ಬಯಕೆಯಂತೆ ಲಕ್ಷ್ಮಿದೇವಿ ದೇಹವನ್ನು ಆಕೆಯ ತೌರೂರು ಕೋರಮಂಗಲದಲ್ಲೆ ಸಕಲ ವಿಧಿ ವಿಧಾನ ದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಮಹಾರಾಣಿ ಆಗಬೇಕಿದ್ದ ಸೊಸೆಯ ಸ್ಮರಣಾರ್ಥ ಆಕೆಯ ಸಮಾಧಿ ಬಳಿಯಲ್ಲಿ ಶ್ರೀಲಕ್ಷ್ಮೀದೇವಿಯ ಗುಡಿಯನ್ನು ಕಟ್ಟಿಸಿ ಪ್ರತಿದಿನವೂ ಪೂಜಾಕೈಂಕರ್ಯ ನಡೆಯಲು ಏರ್ಪಾಡು ಮಾಡುತ್ತಾರೆ. ಪುಣ್ಯವತಿ ಸತೀ ಲಕ್ಶ್ಮಿದೇವಿಯ ಸ್ಮರಣಾರ್ಥ ನಿತ್ಯಪೂಜಾ ಕಾರ್ಯ ಇವತ್ತಿಗೂ ಜರುಗುತ್ತಿರುವುದು ನಿತ್ಯಸತ್ಯ. ಅಂದಿನಿಂದ ಇಂದಿನವರೆಗೆ ಈ ಮಹಾತಾಯಿ ಬೆಂಗಳೂರು ನಾಡಪ್ರಭು ಕೆಂಪೇಗೌಡರ ಸೊಸೆ ಲಕ್ಶ್ಮಿದೇವಿಯಾಗಿ ಮಾತ್ರವಲ್ಲದೆ ಇಡೀ ಕನ್ನಡನಾಡಿನ ಮತ್ತು ಭರತ ಖಂಡದ ಕೋಟ್ಯಾಂತರ ಮನೆಮಗಳಾಗಿ ಮಮತೆವಾತ್ಸಲ್ಯದ ಶಿಖರವಾಗಿ ಮಾದರಿಯ ಮೇರುಪರ್ವತವಾಗಿ ಆಚಂದ್ರಾರ್ಕ ಅಜರಾಮರ! ಬೆಂಗಳೂರಲ್ಲಿ ೬೪ಪೇಟೆಗಳನ್ನು ನಿರ್ಮಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದ ನಾಡಪ್ರಭು ಕೆಂಪೇಗೌಡರ ವಂಶಸ್ಥರು ಪೀಳಿಗೆಯವರು ಇಂದಿಗೂ ಮಾಗಡಿ ತಾಲ್ಲೂಕು ಹುಲಿಕಲ್ ಗ್ರಾಮದ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.

*ಕುಮಾರಕವಿ ಬಿ.ಎನ್.ನಟರಾಜ, ೯೦೩೬೯೭೬೪೭೧