ಮೈಸೂರಿನ ಕ್ರೀಡಾ ಕಿರೀಟ ಪ್ರಭಾಕರ್ ಜಿ.ಆರ್: ಓಟದ ಹಾದಿಯಿಂದ ಬದುಕಿನ ಪಥವರೆಗೆ
::Manjunath.B.R
ಮೈಸೂರು ಕ್ರೀಡಾ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ಪದಕಗಳಿಗಿಂತ ದೊಡ್ಡವರು. ಅವರು ಕೇವಲ ಓಟಗಾರರಾಗಿಲ್ಲ, ಗುರುಗಳಾಗಿದ್ದಾರೆ; ಕ್ರೀಡಾಪಟುಗಳಷ್ಟೇ ಅಲ್ಲ, ವ್ಯಕ್ತಿತ್ವಗಳನ್ನು ರೂಪಿಸಿದ್ದಾರೆ. ಅಂತಹ ಅಪರೂಪದ ಕ್ರೀಡಾ ಸಾಧಕರಲ್ಲಿ ಪ್ರಭಾಕರ್ ಜಿ.ಆರ್ ಎಂಬ ಹೆಸರು ಮೈಸೂರಿನ ಕ್ರೀಡಾ ಕಿರೀಟವಾಗಿ ಮಿನುಗುತ್ತದೆ.
ಸಾಧಾರಣ ಹಿನ್ನಲೆ ಅಸಾಧಾರಣ ಸಾಧನೆ
1958 ರಲ್ಲಿ ಕೆ.ಆರ್. ನಗರದಲ್ಲಿ ರಂಗಶೆಟ್ಟಿ,ಗೌರಮ್ಮ ದಂಪತಿಗಳಿಗೆ ಜನಿಸಿದ ಪ್ರಭಾಕರ್ ಜಿ.ಆರ್, ತಮ್ಮ ಬಾಲ್ಯದಿಂದಲೇ ಕ್ರೀಡೆಯತ್ತ ಅಪಾರ ಆಸಕ್ತಿ ಬೆಳೆಸಿಕೊಂಡರು. ಕೆ.ಆರ್ ನಗರದಲ್ಲಿ ಪ್ರಾಥಮಿಕ ಶಿಕ್ಷಣ, ಮೈಸೂರಿನಲ್ಲಿ ಮಾಧ್ಯಮಿಕ ಶಿಕ್ಷಣ ಹಾಗೂ ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಭೂಗೋಳಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದ ಅವರು, ಓದಿನ ಜೊತೆಗೆ ಓಟವನ್ನೂ ಜೀವನದ ಉಸಿರಾಗಿ ಮಾಡಿಕೊಂಡರು.

ಓಟದ ಮೈದಾನದಲ್ಲಿ ಬರೆದ ದಾಖಲೆಗಳು
ಪ್ರಭಾಕರ್ ಜಿ.ಆರ್ ಅವರ ವೈಯಕ್ತಿಕ ಸಾಧನೆಗಳು ಇಂದಿಗೂ ಕ್ರೀಡಾ ವಲಯದಲ್ಲಿ ಗೌರವದಿಂದ ಉಲ್ಲೇಖವಾಗುತ್ತವೆ.1981-82 ರಲ್ಲಿ ಮೈಸೂರು ವಿಶ್ವವಿದ್ಯಾಲಯದ 5000 ಮೀಟರ್ ಓಟದ ದಾಖಲೆಯನ್ನು ಸ್ಥಾಪಿಸಿದ್ದು, ಇಂದಿಗೂ ಆ ದಾಖಲೆಯನ್ನು ಯಾರೂ ಮುರಿದಿಲ್ಲ. 1981-82 ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಲ್ಲಿ (NIS) ಡಿಪ್ಲೊಮಾ ಪಡೆದು, ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡುದು ಅವರ ಬದುಕಿನ ಮಹತ್ವದ ತಿರುವು.ಪುಣೆಯಲ್ಲಿ ನಡೆದ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ೧೫೦೦ ಮೀಟರ್ ಓಟ ಸ್ಪರ್ಧೆಯಲ್ಲಿ ಪದಕವನ್ನು ಗಳಿಸಿದ್ದಾರೆ. ೧೯೮೭-೮೮ರಲ್ಲಿ ಎನ್‌ಐಎಸ್ (NIS ) ಡಿಪ್ಲೊಮಾ ಪೂರ್ಣಗೊಳಿಸಿದ್ದಾರೆ.

1979 ರಿಂದ 1986 ರ ವರೆಗೆ 14 ಬಾರಿ ಕರ್ನಾಟಕ ರಾಜ್ಯವನ್ನು ರಾಷ್ಟ್ರೀಯ ಹಾಗೂ ಅಂತರರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಗೌರವ ಅವರಿಗೆ ಸಲ್ಲುತ್ತದೆ.೧೯೮೩ರಲ್ಲಿ ಮಂಗಳೂರಿನಲ್ಲಿ 1500 ಮೀಟರ್ ಓಟವನ್ನು 3: 55,10 ನಿಮಿಷಗಳಲ್ಲಿ ಪೂರ್ಣಗೊಳಿಸಿ ರಾಜ್ಯ ದಾಖಲೆ ಸ್ಥಾಪಿಸಿದರು. ಈ ದಾಖಲೆ 25 ವರ್ಷಗಳಿಗೂ ಹೆಚ್ಚು ಕಾಲ ಮುರಿಯದೇ ಉಳಿದಿದ್ದು, ಅವರ ಸಾಮರ್ಥ್ಯದ ಜೀವಂತ ಸಾಕ್ಷಿ.ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ, ದಸರಾ ಕ್ರೀಡಾಕೂಟದ ಸಾಧನೆಗಳು, 5000 ಮೀ ಓಟದ ವಿಶ್ವವಿದ್ಯಾಲಯ ದಾಖಲೆಗಳು -ಎಲ್ಲವೂ ಅವರ ಕ್ರೀಡಾ ಬದುಕಿನ ಚಿನ್ನದ ಅಧ್ಯಾಯಗಳು.

ಗುರು ಎಂಬ ಹೊಸ ಪಾತ್ರ
ಓಟಗಾರನಾಗಿ ಮಾತ್ರವಲ್ಲ, ಗುರುವಾಗಿ ಪ್ರಭಾಕರ್ ಜಿ.ಆರ್ ಇನ್ನಷ್ಟು ಎತ್ತರಕ್ಕೇರಿದರು.
ಏಕಲವ್ಯ ಸ್ಪೋರ್ಟ್ಸ್ ಕ್ಲಬ್‌ನಿಂದ ಆರಂಭಿಸಿದ ತರಬೇತಿ ಪಯಣ, ಎಸ್‌ಎಐ ಕೇಂದ್ರಗಳು, ಅರುಣಾಚಲ ಪ್ರದೇಶ, ಮೈಲಾಡುತುರೈ, ಮೈಸೂರು ವಿಶ್ವವಿದ್ಯಾನಿಲಯವರೆಗೆ ವಿಸ್ತರಿಸಿತು. 2018 ರಲ್ಲಿ ಅಧಿಕೃತ ನಿವೃತ್ತಿ ಪಡೆದರೂ, ಕ್ರೀಡೆಯಿಂದ ಅವರು ಎಂದಿಗೂ ನಿವೃತ್ತರಾಗಿಲ್ಲ. ಇಂದಿಗೂ ಮೈಸೂರಿನ ಓವಲ್ ಮೈದಾನದಲ್ಲಿ ಯಾವುದೇ ಶುಲ್ಕವಿಲ್ಲದೆ ಯುವ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವುದು ಅವರ ಸೇವಾ ಮನೋಭಾವದ ಪ್ರತಿಬಿಂಬ.
ಶಿಷ್ಯರ ಪದಕಗಳಲ್ಲಿ ಗುರುನ ಶ್ರಮ

ಒಲಿಂಪಿಯನ್ ಪ್ರಮೀಳಾ, ಜೂನಿಯರ್ ಅಂತರರಾಷ್ಟ್ರೀಯ ಆರ್ಯನ್ ಕಶ್ಯಪ್, ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳು ಇವರ ಮಾರ್ಗದರ್ಶನದಲ್ಲಿ ಬೆಳೆದವರ ಪಟ್ಟಿ ಬಹಳ ದೊಡ್ಡದು.ರಾಷ್ಟ್ರೀಯ, ಜೂನಿಯರ್, ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಗಳಿಸಿದ ಅನೇಕ ಚಿನ್ನ, ಬೆಳ್ಳಿ, ಕಂಚಿನ ಪದಕಗಳು ಒಬ್ಬ ಗುರುವಿನ ನಿಜವಾದ ಗೆಲುವು. ಇಲ್ಲಿ ಉಲ್ಲೇಖವಾದವರು ಕೇವಲ ಕೆಲವು ಹೆಸರುಗಳು ಮಾತ್ರ; ಹೇಳದೆ ಉಳಿದ ನೂರಾರು ಗೆಲುವುಗಳು ಇನ್ನೂ ಉಳಿದಿವೆ.
ಕ್ರೀಡೆಯೇ ಜೀವನ, ಜೀವನವೇ ಕ್ರೀಡೆ
ಪ್ರಭಾಕರ್ ಜಿ.ಆರ್ ಅವರ ಬದುಕು ಒಂದು ಪಾಠ.
ಪದಕಗಳಿಗಿಂತ ಮೌಲ್ಯಗಳು ದೊಡ್ಡವು, ದಾಖಲೆಗಳಿಗಿಂತ ಶಿಷ್ಯರ ಸಾಧನೆ ಶ್ರೇಷ್ಠ ಎಂಬುದನ್ನು ಅವರು ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ.
