ಯೋಗವೆಂದರೆ ಕೇವಲ ದೇಹವನ್ನು ಬಗ್ಗಿಸುವ ಕಸರತ್ತು ಅಲ್ಲ; ಅದು ಜೀವನವನ್ನು ಶಿಸ್ತಿನ ದಾರಿಯಲ್ಲಿ ನಡೆಸುವ ವಿಜ್ಞಾನ. ಈ ಸತ್ಯವನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸುತ್ತಿರುವ ಅಪರೂಪದ ಯೋಗ ಸಾಧಕರಲ್ಲಿ ಮೈಸೂರಿನ ತಿರುಮಲೆ ಯೋಗಾಚಾರ್ಯ ಪ್ರಕಾಶ್ ಅವರು ಪ್ರಮುಖ ಸ್ಥಾನ ಪಡೆದಿದ್ದಾರೆ.
ಯೋಗನಗರಿ ಎಂದು ಖ್ಯಾತಿ ಪಡೆದ ಮೈಸೂರಿನಲ್ಲಿ ಅನೇಕ ಯೋಗ ಕೇಂದ್ರಗಳಿದ್ದರೂ, ರಾಮಾನುಜ ರಸ್ತೆಯ ಸರಳ ಆರಂಭದಿಂದ ಇಂದು ನೂರಾರು ಯೋಗಾಸಕ್ತರ ಬದುಕಿಗೆ ಬೆಳಕಾಗಿರುವ ಯೋಗಯಾತ್ರೆ ಯೋಗಾಚಾರ್ಯ ಪ್ರಕಾಶ್ ಅವರದು. ಯೋಗವನ್ನು ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತಗೊಳಿಸದೆ, ಮಾನಸಿಕ ಸ್ಥೈರ್ಯ, ಶಿಸ್ತು ಹಾಗೂ ಆತ್ಮಶಕ್ತಿಯ ಸಾಧನೆಯ ಮಾರ್ಗವಾಗಿ ಅವರು ರೂಪಿಸಿದ್ದಾರೆ.
ಅವರ ಬೋಧನಾ ಶೈಲಿ ಸರಳವೂ ಪರಿಣಾಮಕಾರಿಯೂ ಆಗಿದ್ದು, ಯೋಗಾಭ್ಯಾಸಕ್ಕೆ ವಯಸ್ಸು ಅಡ್ಡಿಯಾಗಬಾರದು ಎಂಬ ನಂಬಿಕೆಯಿಂದ ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಯೋಗವನ್ನು ಹತ್ತಿರವಾಗಿಸಿದ್ದಾರೆ. ವರ್ಷಗಳ ಕಾಲ ಅನೇಕ ಯೋಗ ಪಟುಗಳನ್ನು ರೂಪಿಸಿ, ಇಂದು ಅವರು ಶಿಕ್ಷಕರಾಗಿ ಮತ್ತು ತರಬೇತುದಾರರಾಗಿ ಸಮಾಜಸೇವೆಯಲ್ಲಿ ತೊಡಗಿರುವುದು ಅವರ ಶ್ರಮಕ್ಕೆ ಸಾಕ್ಷಿಯಾಗಿದೆ.
64 ವರ್ಷದ ಯೋಗ ಪ್ರಕಾಶ್ ಅವರು ಇಂದಿಗೂ ಮನಮೋಹಕವಾಗಿಯೂ ಕಠಿಣವಾಗಿಯೂ ಯೋಗ ಭಂಗಿಗಳನ್ನು ಅತ್ಯಂತ ನಿಖರವಾಗಿ ನಿರ್ವಹಿಸುತ್ತಿದ್ದಾರೆ. ಅವರ ಯೋಗ ಸಾಧನೆಯನ್ನು ನೋಡಿದರೆ, ಇಂದಿನ ಯುವಕ–ಯುವತಿಯರೇ ನಾಚಿಕೆಪಡುವಂತಹ ಮಟ್ಟದ ಶಕ್ತಿ, ಶಿಸ್ತು ಹಾಗೂ ಸಮರ್ಪಣೆ ಅಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ವಯಸ್ಸು ಕೇವಲ ಸಂಖ್ಯೆಯಷ್ಟೆ ಎಂಬುದನ್ನು ತಮ್ಮ ದೇಹಸಾಮರ್ಥ್ಯ ಮತ್ತು ಸಾಧನೆಯ ಮೂಲಕ ಅವರು ನಿರಂತರವಾಗಿ ಸಾಬೀತುಪಡಿಸುತ್ತಿದ್ದಾರೆ.

ಯೋಗ ಪ್ರಕಾಶ್ ಅವರ ಮತ್ತೊಂದು ಗಮನಾರ್ಹ ಸಾಧನೆ ಎಂದರೆ, ಇತ್ತೀಚೆಗೆ ಅವರು ತಮ್ಮದೇ ಆದ ‘ಮೈಸೂರು ಯೋಗಿಸ್’ ಸಂಸ್ಥೆಯನ್ನು ಸ್ಥಾಪಿಸಿರುವುದು. ಈ ಸಂಸ್ಥೆಯ ಮೂಲಕ ಸಾರ್ವಜನಿಕರಿಗಾಗಿ ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಪ್ರತಿಮಾಸವೂ ನಿರಂತರವಾಗಿ ಆಯೋಜಿಸುತ್ತಿದ್ದಾರೆ. ವಿಶೇಷವೆಂದರೆ, ಈ ಎಲ್ಲಾ ಕಾರ್ಯಕ್ರಮಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವುದೇ ವ್ಯಕ್ತಿಯಿಂದಲೂ ಅಥವಾ ಸಂಸ್ಥೆಯಿಂದಲೂ ಹಣಕಾಸಿನ ಸಹಾಯವನ್ನು ಪಡೆಯದೆ, ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜಸೇವೆ ನಡೆಸುತ್ತಿರುವುದು.
ಯೋಗವನ್ನು ಕೇವಲ ದೈಹಿಕ ವ್ಯಾಯಾಮವಾಗಿ ಅಲ್ಲ, ಜೀವನಶೈಲಿಯಾಗಿ ಸಮಾಜಕ್ಕೆ ಪರಿಚಯಿಸುವ ಯೋಗ ಪ್ರಕಾಶ್ ಅವರು, ತಮ್ಮ ಸೇವೆ ಮತ್ತು ಶಿಸ್ತಿನ ಬದುಕಿನ ಮೂಲಕ ಎಲ್ಲರಿಗೂ ಮಾರ್ಗದರ್ಶಕರಾಗಿ, ಸ್ಪೂರ್ತಿದಾಯಕ ವ್ಯಕ್ತಿತ್ವವಾಗಿ ಇಂದು ಸಮಾಜಕ್ಕೆ ಮಾದರಿಯಾಗಿದ್ದಾರೆ

ಯೋಗದಲ್ಲಿ ದಾಖಲೆಯ ಸಾಧನೆ*
2005ರಿಂದ 2025ರವರೆಗೆ ಸುಮಾರು 21 ವರ್ಷಗಳ ಅವಧಿಯಲ್ಲಿ, ಯೋಗಾಚಾರ್ಯ ಪ್ರಕಾಶ್ ಅವರು 351ಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಠಿಣ ಯೋಗಾಸನಗಳ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಇಷ್ಟು ಹೆಚ್ಚಿನ ವೇದಿಕೆಗಳಲ್ಲಿ ಯೋಗ ಪ್ರದರ್ಶನ ನೀಡಿರುವುದು ಅಪರೂಪದ ದಾಖಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂತರರಾಷ್ಟ್ರೀಯ ಗುರುತಿನ ಸಾಧನೆ
2008ರಲ್ಲಿ ಅಮೆರಿಕಾದಲ್ಲಿ ವಕೀಲರೂ ಹಾಗೂ ಯೋಗ ಬೋಧಕರೂ ಆಗಿರುವ ಡಾ. ರಮಾಕಾಂತ್ ದವರ್ ಅವರು ರಚಿಸಿದ “Yoga With Dr. Rama Kant” ಗ್ರಂಥದಲ್ಲಿ, ಯೋಗಾಚಾರ್ಯ ಪ್ರಕಾಶ್ ಅವರು ಕೆಲವು ಸರಳ ಆಸನಗಳಿಗೆ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೈಸೂರಿನ ಯೋಗ ಪರಂಪರೆ ಅಮೆರಿಕಾದ ಯೋಗಾಸಕ್ತರ ಮನಗಳಿಗೂ ತಲುಪಿರುವುದು ವಿಶೇಷ ಗೌರವವಾಗಿದೆ.
ಪರಂಪರೆ, ಸೇವೆ ಮತ್ತು ಪರಿಸರ ಪ್ರೀತಿ
ಯೋಗಾಚಾರ್ಯ ಪ್ರಕಾಶ್ ಅವರು ಸ್ವಾತಂತ್ರ್ಯ ಯೋಧರಾದ ತಿರುಮಲೆ ಅನಂತ ರಂಗಾಚಾರ್ಯ ಅವರ ಪುತ್ರರು. 25-12-1961ರಂದು ಮಾಗಡಿ ತಾಲ್ಲೂಕಿನ ಸಮೀಪದ ತಿರುಮಲೆ ಗ್ರಾಮದಲ್ಲಿ ಜನಿಸಿದ ಅವರು, ಡಿಪ್ಲೊಮಾ ಇನ್ ಪ್ರಿಂಟಿಂಗ್ ವೃತ್ತಿಪರ ಶಿಕ್ಷಣ ಪಡೆದಿದ್ದಾರೆ.
1985ರಲ್ಲಿ NIE ಸಂಸ್ಥೆಯಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಸೇವೆ ಆರಂಭಿಸಿ, ರಾಂಚಿಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆಯ ಫಲವಾಗಿ ಮೇಲ್ವಿಚಾರಕ ಹುದ್ದೆ ಪಡೆದರು. 2016ರಲ್ಲಿ ಸ್ವಯಂ ನಿವೃತ್ತಿ ಪಡೆದ ಬಳಿಕವೂ ಯೋಗ, ಕೃಷಿ ಮತ್ತು ಸಮಾಜಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡಿದ್ದಾರೆ.
ಕೆಂಬಾಲು ಗ್ರಾಮದ ತೋಟದಲ್ಲಿ ಕೃಷಿ ಮಾಡುವುದು, ಮುಳ್ಳೂರು ಪ್ರದೇಶದಲ್ಲಿ 200ಕ್ಕೂ ಹೆಚ್ಚು ಮರಗಳನ್ನು ನೆಟ್ಟು ಅರಣ್ಯ ಕೃಷಿ ಮಾದರಿಯಲ್ಲಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿರುವುದು ಅವರ ಸಾಮಾಜಿಕ ಜವಾಬ್ದಾರಿಯ ಪ್ರತಿಬಿಂಬವಾಗಿದೆ.
ಮೈಸೂರು ಯೋಗಿಸ್ ಮತ್ತು ಯೋಗ ದಾಖಲೀಕರಣ
‘ಮೈಸೂರು ಯೋಗಿಸ್’ ಸಂಸ್ಥೆಯ ಮೂಲಕ 150ಕ್ಕೂ ಹೆಚ್ಚು ಸದಸ್ಯರನ್ನು ಒಗ್ಗೂಡಿಸಿ, ಹಿರಿಯ ನಾಗರಿಕರಿಗೆ ಯೋಗ ತರಬೇತಿ, ಮಕ್ಕಳಿಗೆ ‘ಕಿಡ್ಸ್ ಯೋಗ’ ತರಗತಿಗಳು ಹಾಗೂ ಯೋಗ ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸುತ್ತಿದ್ದಾರೆ. ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರ ನೀಡುವ ಮೂಲಕ ಯೋಗವನ್ನು ವೃತ್ತಿಪರವಾಗಿ ಮತ್ತು ಶಿಸ್ತಿನಿಂದ ಕಲಿಸುವ ಕಾರ್ಯದಲ್ಲಿ ಸಂಸ್ಥೆ ತನ್ನದೇ ಆದ ಗುರುತನ್ನು ಗಳಿಸಿದೆ.
ಮೈಸೂರಿನ ಹಿರಿಯ ಯೋಗ ಸಾಧಕರ ಜೀವನ, ಸಾಧನೆ ಮತ್ತು ಪರಂಪರೆಯನ್ನು ದಾಖಲಿಸುವ ಉದ್ದೇಶದಿಂದ ವ್ಯಕ್ತಿಪರಿಚಯ, ದಾಖಲೆ ಸಂಗ್ರಹ ಹಾಗೂ ಛಾಯಾಚಿತ್ರಗಳೊಂದಿಗೆ ಯೋಗ ವಸ್ತು ಸಂಗ್ರಹಾಲಯ ಸ್ಥಾಪಿಸುವ ಕನಸನ್ನೂ ಅವರು ಹೊಂದಿದ್ದಾರೆ. ಈ ಕುರಿತು ಶೀಘ್ರದಲ್ಲೇ ಸಾರ್ವಜನಿಕರಿಗೆ ಮಾಹಿತಿ ನೀಡುವ ಯೋಜನೆ ಇದೆ.
ಶಿಕ್ಷಣ ಮತ್ತು ಭವಿಷ್ಯದ ದೃಷ್ಟಿ
ಪ್ರಸ್ತುತ ಯೋಗ ವಿದ್ಯೆ ಅಧಿಕೃತವಾಗಿ ಶಿಕ್ಷಣ ವ್ಯವಸ್ಥೆಗೆ ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ, ಮಾನ್ಯತೆ ಪಡೆದ ಅಂಗಿಕೃತ ಯೋಗ ಶಿಕ್ಷಕರನ್ನು ರೂಪಿಸಿ, ಮೈಸೂರಿನ ಕಲಿಕಾರ್ಥಿಗಳಿಗೆ ಕ್ರಮಬದ್ಧ ಶಿಕ್ಷಣ ನೀಡುವ ಮೂಲಕ ಯೋಗ ಲೋಕವನ್ನು ಶ್ರೀಮಂತಗೊಳಿಸುವ ಯೋಜನೆಗೆ ಒತ್ತು ಕೊಡುವ ಕಾಯಕದಲ್ಲಿ ಯೋಗಾಚಾರ್ಯ ಪ್ರಕಾಶ್ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.
