ರೈಲು ಸಂಚಾರದಲ್ಲಿ ಬೆಂಕಿ ಅನಾಹುತಗಳು ಪ್ರಾಣ ಹಾನಿ ಹಾಗೂ ಆಸ್ತಿ ಹಾನಿಗೆ ಕಾರಣವಾಗುವ ಅತ್ಯಂತ ವಿನಾಶಕಾರಿ ಘಟನೆಗಳಲ್ಲಿ ಪ್ರಮುಖವಾದವು. ಆದ್ದರಿಂದ ಅವುಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮಗಳು ಅತ್ಯಂತ ಮಹತ್ವವಾದ ವಿಷಯವಾಗಿದ್ದು ಇದಕ್ಕೆ ರೈಲು ಗ್ರಾಹಕರ ಬೆಂಬಲದ ಅಗತ್ಯವಿರುತ್ತದೆ.

ರೈಲಿನಲ್ಲಿ ಅಗ್ನಿ ಪ್ರಾರಂಭವಾಗುವ ಬಗೆ ಮತ್ತು ಅದು ಹೇಗೆ ಹಬ್ಬುತ್ತದೆ, ಅದನ್ನು ನಂದಿಸಲು ಹೋರಾಡುವ ಬಗೆ, ಅದರಿಂದ ಆಗುವ ನಷ್ಟ ಇವೆಲ್ಲ ವಿಷಯಗಳಲ್ಲೂ ರೈಲಿನ ಅಗ್ನಿ ಅನಾಹುತವು ಇತರ ಸ್ಥಳಗಳಲ್ಲಿ ಉಂಟಾಗುವ ಅಗ್ನಿ ಅನಾಹುತಗಳಿಗಿಂತ ಭಿನ್ನವಾದದ್ದು.

ಸ್ಥಿರವಾದ ಸ್ಥಳದಲ್ಲಿ ಹೊತ್ತಿಕೊಳ್ಳುವ ಬೆಂಕಿಗಿಂತ ಚಾಲನೆಯಲ್ಲಿರುವ ರೈಲಿನಲ್ಲಿ ಹೊತ್ತಿಕೊಳ್ಳುವ ಬೆಂಕಿಯು ಹೆಚ್ಚು ಅಪಾಯಕಾರಿಯಾದದ್ದು. ಏಕೆಂದರೆ ರೈಲಿನ ವೇಗದ ಸಂಚಾರದಿಂದ ಬೀಸುವ ಗಾಳಿಯ ಪರಿಣಾಮದಿಂದಾಗಿ ಬೆಂಕಿಯು ಇತರ ಬೋಗಿಗಳಿಗೆ ಸಾಕಷ್ಟು ಕ್ಷಿಪ್ರವಾಗಿ ಹರಡಲು ಅನುವು ಮಾಡಿಕೊಡುವುದು. ಜೊತೆಗೆ ಗಾಬರಿಯಿಂದ ಪ್ರಯಾಣಿಕರು ಹಿಂದಿನ ರೈಲು ಅಪಘಾತಗಳಲ್ಲಿ ಸಂಭವಿಸಿದಂತೆ ಚಾಲನೆಯಲ್ಲಿರುವ ರೈಲಿನಿಂದ ಜಿಗಿಯಬಹುದು. ಬೆಂಕಿಯು, ವಿಶೇಷವಾಗಿ ನಿಯಂತ್ರಿಸಲಾಗದ ಸ್ಥಿತಿಯಲ್ಲಿ ಅತ್ಯಂತ ತೀವ್ರಗತಿಯ ವಿನಾಶದ ಕಾರಣವಾಗಿದ್ದು, ಅದರಲ್ಲೂ ಮಾನವ ಜೀವಹಾನಿಯನ್ನು ಒಳಗೊಂಡಿರುವಾಗ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಆದಕಾರಣ ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಯಲು ಹಾಗೂ ಒಂದು ವೇಳೆ ಹೊತ್ತಿಕೊಂಡಲ್ಲಿ ಅದು ಹರಡುವುದನ್ನು ತಡೆದು ಅದರಿಂದ ಹೆಚ್ಚಿನ ಹಾನಿಯಾಗದಂತೆ ತಡೆಯಲು ಸಾಧ್ಯವಾಗುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ವಿಶೇಷ ಮಹತ್ವವನ್ನು ನೀಡಲಾಗುತ್ತಿದೆ.

ನೈಋತ್ಯ ರೈಲ್ವೆಯ  ಮೈಸೂರು ವಿಭಾಗದಲ್ಲಿ ವಿಶೇಷ ಸುರಕ್ಷತಾ ಆಂದೋಲನವನ್ನು ಆಯೋಜಿಸಲಾಗಿದ್ದು  ದಿನಾಂಕ 10. 12 2021 ರಂದು ಮೈಸೂರು – ಮಂಡ್ಯ ಭಾಗದ  ಎರಡು ಎಕ್ಸ್ಪ್ರೆಸ್ ರೈಲುಗಳಲ್ಲಿ ವಿಭಾಗದ ಸುರಕ್ಷತಾ, ಭದ್ರತಾ, ಯಾಂತ್ರಿಕ ಹಾಗೂ ವಾಣಿಜ್ಯ ಶಾಖೆಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಬಹು ಇಲಾಖಾ ತಂಡವು  ಸುರಕ್ಷತಾ ಪರಿಶೀಲನೆಯನ್ನು ನಡೆಸಿತು.

ರೈಲುಗಳಲ್ಲಿ ಅಗ್ನಿ ಅನಾಹುತಗಳನ್ನು ನಿವಾರಿಸುವಲ್ಲಿ ಅದನ್ನು ಕುರಿತ ಜಾಗೃತಿ ಅತಿ ಮುಖ್ಯ ಎಂಬ ಅಂಶವನ್ನು ಸಾರಿಹೇಳುವ ನಿಟ್ಟಿನಲ್ಲಿ ತಂಡವು ಪ್ರಯಾಣಿಕರ ಸಾಗಣೆಯ ರೈಲುಗಳಲ್ಲಿ ತುರ್ತು ನಿರ್ಗಮನದ ಕಿಟಕಿಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡಲು 15 ಸ್ಥಳಗಳಲ್ಲಿ ನಿದರ್ಶನಾ ಸಭೆಗಳನ್ನು ನಡೆಸಿತು.

ಬೋಗಿಗಳಲ್ಲಿ ಪ್ರದರ್ಶಿಸಲಾದ ಭಿತ್ತಿಚಿತ್ರಗಳಲ್ಲಿರುವಂತೆ ತುರ್ತು ನಿರ್ಗಮನದ ಕಿಟಕಿಯು ಯಾವ ರೀತಿಯಲ್ಲಿ ಅನುಕ್ರಮವಾಗಿ ತೆರೆದುಕೊಳ್ಳುವುದು ಎನ್ನುವುದನ್ನು ವಿವಿಧ ಬೋಗಿಗಳಲ್ಲಿನ  ಸರಿ ಸುಮಾರು ಒಂದು ಸಾವಿರ  ಪ್ರಯಾಣಿಕರಿಗೆ ವಿವರಿಸಲಾಯಿತು.

ಸೂಕ್ಷ್ಮವಾಗಿ ಗಮನಿಸಿದಾಗ, ಬಹಳಷ್ಟು ಪ್ರಯಾಣಿಕರಿಗೆ ತುರ್ತು ತುರ್ತು ನಿರ್ಗಮನದ ಕಿಟಕಿಯು ತೆರೆಯುವ ವಿಧಾನದ ಅರಿವಿರಲಿಲ್ಲ ಅಥವಾ ಅದನ್ನು ಅರ್ಥಮಾಡಿಕೊಳ್ಳಲಾಗಿಲ್ಲ ಎನ್ನುವ ವಿಷಯ ತಿಳಿದು ಬಂದಿತು. ಆದಕಾರಣ ತಪಾಸಣಾ ಅಧಿಕಾರಿಗಳು ಈ ವಿಷಯವನ್ನು ಕುರಿತಂತೆ ರೈಲಿನ ಸಿಬ್ಬಂದಿಗಳನ್ನು ತೊಡಗಿಸಿ ಮುಂಜಾಗ್ರತಾ ಕ್ರಮಗಳ ಕಡೆ ಹೆಚ್ಚಿನ ಗಮನ ಹರಿಸುವ ಅಗತ್ಯತೆಯನ್ನು ಕಂಡರು.

ಎರಡು ಬೋಗಿಗಳ ನಡುವೆ ಇರುವ ಪ್ರವೇಶದ ಹಾದಿಯ ಎರಡು ತುದಿಗಳಲ್ಲಿ ಇರಿಸಲಾಗಿರುವ ಅಗ್ನಿಶಾಮಕಗಳ ಬಳಕೆಯನ್ನು ಕುರಿತು ಪ್ರಯಾಣಿಕರಿಗೆ ದೃಶ್ಯ ಪ್ರದರ್ಶನವನ್ನು ನೀಡಲಾಯಿತು.

ತುರ್ತು ಸಂದರ್ಭಗಳಲ್ಲಿ ಅಗ್ನಿಶಾಮಕಗಳನ್ನು ಬಳಸುವ ಈ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಹಿರಿಯ ನಾಗರಿಕರನ್ನು ಒಳಗೊಂಡ ಸುಮಾರು 20 ಪ್ರಯಾಣಿಕರು ಸಕ್ರಿಯವಾಗಿ ಭಾಗವಹಿಸಿದರು. ತಪಾಸಣಾ ಅಧಿಕಾರಿಗಳ ತಂಡ ಈ ಜಾಗೃತಿಯನ್ನು ಪಡೆಯುವ ಕಾರ್ಯದಲ್ಲಿ ಪ್ರಯಾಣಿಕರ ಕಲಿಕಾ ಉತ್ಸಾಹವನ್ನು ಪ್ರಶಂಸಿಸಿತು.

ರೈಲುಗಳಲ್ಲಿ ಅಗ್ನಿ ಅನಾಹುತಗಳನ್ನು ತಡೆಗಟ್ಟಲು ರೈಲ್ವೆಯೊಂದಿಗೆ ಸಹಕರಿಸುವಂತೆ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರವಾಲ್ ಅವರು ಕರೆ ನೀಡಿದ್ದಾರೆ.

ಜೊತೆಗೆ ಅತಿ ಸುಲಭವಾಗಿ ಹತ್ತಿಕೊಳ್ಳುವ/ಅಪಾಯಕಾರಿ ವಸ್ತುಗಳನ್ನು ರೈಲಿನಲ್ಲಿ ಸಾಧಿಸುವುದು, ಬೋಗಿಗಳ ಒಳಗೆ ಧೂಮಪಾನ ಮಾಡುವುದು ಮತ್ತು ಇನ್ನಿತರ ಅಸುರಕ್ಷಿತ ಅಭ್ಯಾಸಗಳು ಕಾನೂನು ಬಾಹಿರವಾಗಿದ್ದು. ಅದನ್ನು ಉಲ್ಲಂಘಿಸುವವರು ಕಾನೂನು ರೀತ್ಯಾ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ  ನೀಡಿದರು.