ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ಮತ್ತು ವ್ಯಾಸ್ಕ್ಯುಲರ್ ತಜ್ಞರ ತಂಡವು ಕಳೆದ ೩೬ ತಿಂಗಳುಗಳಲ್ಲಿ ೧೨ ಅರ್ಯೋಟಿಕ್ ಸರ್ಜರಿಗಳನ್ನು ಯಶಸ್ವಿಯಾಗಿ ನಡೆಸಿದೆ. ೨೫ ವರ್ಷಗಳಿಗೂ ಅನುಭವವುಳ್ಳ ಇಡೀ ತಂಡದ ಪ್ರಯತ್ನದಿಂದ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ.
ಅರ್ಯೋಟಾ ಎಂದರೆ ಮನುಷ್ಯನ ದೇಹದ ಅತಿದೊಡ್ಡ ರಕ್ತನಾಳ. ಹೃದಯದಿಂದ ಬೇರೆಲ್ಲಾ ಅಂಗಗಳಿಗೂ ರಕ್ತ ಸರಬರಾಜು ಮಾಡುವ ಅತಿ ಮುಖ್ಯ ರಕ್ತನಾಳ ಇದು. ಈ ರಕ್ತನಾಳದ ಮೂಲಕ ಮೆದುಳು, ಹೃದಯ, ಕರುಳು, ಜೀರ್ಣಾಂಗ, ಕೈಕಾಲುಗಳಿಗೆ ರಕ್ತ ಸರಬರಾಜಾಗುತ್ತದೆ. ಅಧ್ಯಯನಗಳ ಪ್ರಕಾರ ಅರ್ಯೋಟಿಕ್ ಸಂಬಂಧಿ ಸಮಸ್ಯೆಯಿಂದ ಬೇರೆ ಅಂಗಗಳ ರಕ್ತನಾಳಗಳಿಗೆ ಅಡೆಚಣೆಯಾದರೆ ಶೇ.೪೦-೫೦ ರೋಗಿಗಳ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಅರ್ಯೋಟಿಕ್ ಸರ್ಜರಿಯನ್ನು ಯಶಸ್ವಿಯಾಗಿ ನಿರ್ವಹಿಸಲು ನುರಿತ ತಂಡ ಬೇಕು. ಇದು ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯಾದ ಕಾರಣ ಅರ್ಯೋಟಿಕ್ ಸರ್ಜರಿ ಮಾಡಿಸಿಕೊಳ್ಳುವಾಗ ಸಾಕಷ್ಟು ಮಂದಿ ಅಸುನೀಗಿದ್ದಾರೆ. ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲು ಉತ್ತಮ ಸಂಯೋಜನೆ ಹೊಂದಿದ ಅನುಭವಿ ತಂಡದ ಅವಶ್ಯಕತೆ ಇದೆ. ಮಣಿಪಾಲ್ ಆಸ್ಪತ್ರೆಯಲ್ಲಿ ೩೮ರಿಂದ ೭೭ ವರ್ಷದವರೆಗಿನ ವಿವಿಧ ವಯೋಮಾನದವರಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದ್ದು, ಅದರಲ್ಲಿನ ಎರಡು ಚಿಕಿತ್ಸೆಯ ವಿವರಗಳು ಇಂತಿವೆ.
ಪ್ರಾತ್ಯಕ್ಷಿಕ ರೋಗಿಗಳ ವರ್ಣನೆ:
೧. ೩೮ ವರ್ಷದ ಗೃಹಿಣಿಯೊಬ್ಬರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡು ಮನೆಯಲ್ಲಿ ಕುಸಿದು ಬಿದ್ದರು. ತಕ್ಷಣ ಆಕೆಗೆ ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ನೀಡಲಾಯಿತು. ನಂತರ ಇತರ ಪರೀಕ್ಷೆಗಳನ್ನು ಮಾಡಿದಾಗ ಅರ್ಯೋಟಾ ಒಡೆದಿರುವುದು ಕಂಡುಬಂತು. ಇದರಿಂದಾಗಿ ಅರ್ಯೋಟಿಕ್ ವಾಲ್ವ್ ಸೋರಿಕೆಯಾಗಿ ಹೃದಯದ ಸುತ್ತಲೂ ರಕ್ತಸ್ರಾವವಾಗಿತ್ತು. ತಕ್ಷಣ ಚಿಕಿತ್ಸೆ ಕೊಡಿಸದಿದ್ದರೆ ರೋಗಿಯ ಜೀವಕ್ಕೆ ಅಪಾಯವಾಗುತ್ತಿತ್ತು. ರಕ್ತದೊತ್ತಡ ಕಡಿಮೆಯಾಗಿ, ಪದೇ ಪದೇ ಹೃದಯ ಸ್ತಂಭನವಾಗಿ ಆಕೆಯ ಪರಿಸ್ಥಿತಿ ಗಂಭೀರವಾದಾಗ ಆಕೆಯನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಡಾ.ಉಪೇಂದ್ರ ಶಣೈ ಅವರ ನೇತೃತ್ವದ ಮಣಿಪಾಲ್ ಆಸ್ಪತ್ರೆಯ ಕಾರ್ಡಿಯೋವ್ಯಾಸ್ಕ್ಯುಲರ್ ತಜ್ಞರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಅರ್ಯೋಟಿಕ್ ನಾಳ ಹಾಗೂ ಅರ್ಯೋಟಿಕ್ ವಾಲ್ವ್ ಅನ್ನು ಮರುಜೋಡಣೆ ಮಾಡಲಾಯಿತು. ನಂತರ ರೋಗಿಯು ಸ್ವಲ್ಪ ದಿನಗಳಲ್ಲಿಯೇ ಚೇತರಿಸಿಕೊಂಡರು. ಈಗ ಹಿಂದಿನಂತೆ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.
೨. ೭೭ ವರ್ಷ ವಯಸ್ಸಿನ ರೈತರೊಬ್ಬರಿಗೆ ಇದ್ದಕ್ಕಿದ್ದಂತೆ ಕೈ-ಕಾಲು ಸೋತಂತಾಗಿ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಪರೀಕ್ಷಿಸಿದಾಗ ಅರ್ಯೋಟಾದಿಂದ ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳದಲ್ಲಿ ಸಮಸ್ಯೆಯಾಗಿರುವುದು ಕಂಡುಬಂತು. ನಂತರ ಆ ರೋಗಿಗೆ ಮೆದುಳಿಗೆ ರಕ್ತ ಸರಬರಾಜು ಮಾಡುವ ನಾಳಕ್ಕೆ ಬೈಪಾಸ್ ಸರ್ಜರಿ ಮಾಡಿ ಅರ್ಯೋಟಾಗೆ ಸ್ಟಂಟ್ ಅಳವಡಿಸಲಾಯಿತು. ಈ ರೀತಿ ಎರಡೂ ಶಸ್ತ್ರಚಿಕಿತ್ಸೆಗಳನ್ನು ಒಟ್ಟಿಗೆ ಮಾಡಿದ್ದು ಮೈಸೂರಿನಲ್ಲಿ ಇದೇ ಮೊದಲು. ನಂತರ ರೋಗಿಯು ಚೇತರಿಸಿಕೊಂಡಿದ್ದಾರಲ್ಲದೆ ಯಾವ ಸಮಸ್ಯೆ, ದೌರ್ಬಲ್ಯವೂ ಇಲ್ಲದೆ ಆರೋಗ್ಯವಾಗಿದ್ದಾರೆ.
ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ.ಸಿ.ಬಿ.ಕೇಶವಮೂರ್ತಿ ಹಾಗೂ ಕಾರ್ಡಿಯೋಥೊರಾಸಿಕ್ ವ್ಯಾಸ್ಕ್ಯುಲರ್ ಸರ್ಜನ್ ಡಾ.ಉಪೇಂದ್ರ ಶಣೈ ಮಾತನಾಡಿ, ಅರ್ಯೋಟಿಕ್ ಸರ್ಜರಿಯಲ್ಲಿ ಯಾವೆಲ್ಲಾ ಕ್ಲಿಷ್ಟಕರ ಅಂಶಗಳಿರುತ್ತವೆ, ಅದನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಎಷ್ಟು ಯಶಸ್ವಿಯಾಗಿ ನಿರ್ವಹಿಸಲಾಗುತ್ತದೆ, ಮಣಿಪಾಲ್ ಆಸ್ಪತ್ರೆಯಲ್ಲಿ ಈ ಚಿಕಿತ್ಸೆಗೆ ಯಾವೆಲ್ಲಾ ಅತ್ಯಾಧುನಿಕ ಹಾಗೂ ಸುರಕ್ಷಿತ ಸೌಲಭ್ಯಗಳಿವೆ ಎಂದು ತಿಳಿಸಿದರು.