ಮೈಸೂರು,ಆ.೬:- ವಿಶ್ವ ವಿಖ್ಯಾತ ದಸರಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಸಿದ್ಧತೆಗಳು ಆರಂಭವಾಗಿವೆ. ಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಒಟ್ಟು ೧೭ಆನೆಗಳು ಅರ್ಹತೆ ಪಡೆದಿದ್ದು, ಸರ್ಕಾರ ಕೂಡ ಅನುಮೋದಿಸಿದೆ. ಜಂಬೂಸವಾರಿಯಲ್ಲಿ ಮಾತ್ರ ೧೪ಆನೆಗಳು ಭಾಗವಹಿಸಲಿವೆ. ನಾಳೆ ಬೆಳಿಗ್ಗೆ ದಸರಾ ಮಹೋತ್ಸವದ ಮುನ್ನುಡಿಯಾಗಿ ಗಜಪಯಣ ಆರಂಭವಾಗಲಿದೆ.ಕಳೆದೆರಡು ವರ್ಷಗಳಿಂದ ಕೊರೋನಾ ಸಾಂಕ್ರಾಮಿಕ ಹಿನ್ನಲೆ ಸಾಂಪ್ರದಾಯಿಕ ಆಚರಣೆಗಷ್ಟೇ ಸೀಮಿತವಾಗಿದ್ದ ವಿಶ್ವವಿಖ್ಯಾತ ದಸರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಈ ಬಾರಿ ೧೪ಆನೆಗಳನ್ನು ಜಂಬೂಸವಾರಿಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಲಾಗಿದ್ದು ಒಟ್ಟು ಹದಿನೇಳು ಆನೆಗಳಿಗೆ ಅನುಮತಿ ನೀಡುವಂತೆ ಕೋರಿ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ವಿ.ಕರಿಕಾಳನ್ ಅರಣ್ಯ ಇಲಾಖೆಗೆ ಪಿಸಿಸಿಎಫ್ ಕಛೇರಿಗೆ ಪತ್ರ ಬರೆದಿದ್ದರು. ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಅನುಮತಿ ನೀಡಿದ್ದು ಅದರಲ್ಲಿ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ೧೪ಆನೆ ಹಾಗೂ ಮೂರು ಆನೆ ಸ್ಟ್ಯಾಂಡ್ ಬೈ ಆಗಿ ಅನುಮತಿ ನೀಡಿ ಆನೆಗಳಿರುವ ಕ್ಯಾಂಪ್ ಗಳ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಹದಿನೇಳು ಆನೆಗಳಿಗೆ ಅನುಮತಿ ದೊರೆತಿದ್ದರೂ ದಸರಾ ಮಹೋತ್ಸವದಲ್ಲಿ ೧೪ಆನೆಗಳನ್ನು ಮಾತ್ರ ಕರೆತರಲಾಗುತ್ತಿದೆ. ಅಂತಿಮ ಪಟ್ಟಿಯನ್ನು ನಿನ್ನೆ ಸಂಜೆ ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ನಾಳೆ ಮೊದಲ ಹಂತದಲ್ಲಿ ಅಂಬಾರಿ ಆನೆ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ವಿಕ್ರಮ, ಧನಂಜಯ, ಕಾವೇರಿ, ಚೈತ್ರ, ಲಕ್ಷ್ಮಿ ಯನ್ನು ಕರೆತರಲಾಗುತ್ತಿದೆ. ಎರಡನೇ ಹಂತದಲ್ಲಿ ಗೋಪಾಲಸ್ವಾಮಿ, ಗೋಪಿ, ಶ್ರೀರಾಮ, ವಿಜಯ, ಪಾರ್ಥಸಾರಥಿ, ಆಗಮಿಸಲಿವೆ.
ಸುಗ್ರೀವ, ಕುಂತಿ, ಗಣೇಶ ಕಾಯ್ದಿರಿಸಿದ ಆನೆಗಳಾಗಿವೆ. ಮೈಸೂರು ಅರಮನೆ ಆವರಣದಲ್ಲಿ ಬೀಡುಬಿಡುವ ಆನೆಗಳಲ್ಲಿ ಏನಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಬದಲಿಯಾಗಿ ಈ ಮೂರು ಆನೆಗಳನ್ನು ಕರೆತರಲು ಇಲಾಖೆ ನಿರ್ಧರಿಸಿದೆ. ನಾಳೆ ಬೆಳಿಗ್ಗೆ ೯.೦೧ರಿಂದ ೯.೩೫ರೊಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಹುಣಸೂರು ತಾಲೂಕು ವಿರನಹೊಸಳ್ಳಿಯಲ್ಲಿ ಗಜಪಯಣಕ್ಕೆ ಜಿಲ್ಲಾಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಲಿದ್ದು, ಮಧ್ಯಾಹ್ನದೊಳಗೆ ಮೈಸೂರು ಅಶೋಕಪುರಂನಲ್ಲಿರುವ ಅರಣ್ಯ ಭವನ ತಲುಪಲಿದೆ. ಆ.೧೦ರಂದು ಅರಣ್ಯ ಭವನದಿಂದ ಹೊರಟ ಗಜಪಡೆ ಮೈಸೂರು ಅರಮನೆ ಆವರಣವನ್ನು ಜಯಮಾರ್ತಾಂಡ ದ್ವಾರದ ಬಳಿ ಬೆಳಿಗ್ಗೆ ೯.೨೦ರಿಂದ ೧೦ಗಂಟೆಯೊಳಗೆ ಸಲ್ಲುವ ಕನ್ಯಾಲಗ್ನದಲ್ಲಿ ಪ್ರವೇಶಿಸಲಿದೆ. ಅಕ್ಟೋಬರ್ ೫ರಂದು ಜಂಬೂಸವಾರಿ ಮೆರವಣಿಗೆಯ ಬಳಿಕ ಅ.೭ರಂದು ಬೆಳಿಗ್ಗೆ ಗಜಪಡೆಗಳು ನಾಡಿನಿಂದ ಕಾಡಿನತ್ತ ಪಯಣ ಬೆಳೆಸಲಿವೆ.