ಮೈಸೂರು: ಮೈಸೂರಿನ ವಿಶ್ವವಿಖ್ಯಾತ ಅಂಬವಿಲಾಸ ಅರಮನೆ ಪ್ರವೇಶಕ್ಕೆ ಹೇರಿದ್ದ ನಿರ್ಬಂಧ ವನ್ನು ತೆಗೆಯಲಾಗಿದ್ದು, ಅರಮನೆ ವೀಕ್ಷಣೆಗೆ ಪ್ರವಾಸಿಗರಿಗೆ ಆಗಮಿಸಬಹುದಾಗಿದೆ.

ಜುಲೈ 5ರಿಂದಲೇ ಪ್ರವಾಸಿಗರು ಅರಮನೆ ವೀಕ್ಷಣೆ ಮಾಡಬಹುದಾಗಿದೆ. ಮೈಸೂರಿನ ಪ್ರಮುಖ ಆಕರ್ಷಣೆಯೇ ಮೈಸೂರು ಅರಮನೆಯಾಗಿದ್ದು, ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುವ ಮುನ್ನವೇ ಅಂದರೆ ಏ.24ರಿಂದಲೇ ಅರಮನೆ ಪ್ರವೇಶಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ನಿರ್ಬಂಧ ತೆಗೆದು ಕೋವಿಡ್ ನಿಯಮ ಪಾಲನೆಯೊಂದಿಗೆ ಬೆಳಿಗ್ಗೆ 10ಗಂಟೆಯಿಂದ ಸಂಜೆ 5.30ರವರೆಗೆ ಸಾರ್ವಜನಿಕರು ಅರಮನೆಗೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.

ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರು ಅರಮನೆ ಪ್ರವೇಶಕ್ಕೆ ಬೇಕಾದ ಟಿಕೆಟ್ ನ್ನು ಅರಮನೆಯ ಟಿಕೆಟ್ ಕೌಂಟರ್ ನಲ್ಲಿ ಪಡೆಯಬಹುದಾಗಿದೆ. ಅಥವಾ ಆನ್ ಲೈನ್ ನಲ್ಲಿ ಅರಮನೆ ವೆಬ್ ಸೈಟ್ (www.mysorepalace.gov.in) ನಲ್ಲಿ ಟಿಕೆಟ್ ಪಡೆಯಲು ಅವಕಾಶವಿದೆ. ಪ್ರವಾಸಿಗರಿಗೆ ಅರಮನೆಯ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್ ಪಡೆಯುವ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಟಿಕೆಟ್ ಕೌಂಟರ್ ನಲ್ಲಿ ಚೌಕಾಕಾರದ ಗುರುತುಗಳನ್ನು ಹಾಕಲಾಗಿದ್ದು, ಸರತಿ ಸಾಲಿನಲ್ಲಿ ನಿಂತು ಟಿಕೆಟ್ ಪಡೆಯಬೇಕಾಗುತ್ತದೆ.

ಈಗಾಗಲೇ ಅರಮನೆಯಲ್ಲಿ ಪ್ರವಾಸಿಗರು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು, ಮಾಸ್ಕ್ ತಪ್ಪದೇ ಧರಿಸಬೇಕೆಂಬ ಅರಿವು ಮೂಡಿಸುವ ಸೂಚನಾ ಫಲಕ ಹಾಕಲಾಗಿದ್ದು,  ಸಿಸಿಟಿವಿ ಕಾವಲು ಮೂಲಕ ಪ್ರವಾಸಿಗರ ಮೇಲೆ ನಿಗಾವಹಿಸಲಾಗುತ್ತಿದೆ ಎಂದು ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ ಎಸ್ ಸುಬ್ರಹ್ಮಣ್ಯ ಮಾಹಿತಿ ನೀಡಿದ್ದಾರೆ.

ಮೈಸೂರು ಅರಮನೆ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಸುತ್ತಮುತ್ತ ವ್ಯಾಪಾರ ನಡೆಸುವ, ಟಾಂಗಾ ಓಡಿಸುವ ಟಾಂಗಾವಾಲ ಮತ್ತು ಆಟೋ ಚಾಲಕರ ಮೊಗದಲ್ಲಿ ಮಂದಹಾಸ ಮೂಡಿದೆ. ಪ್ರವಾಸಿಗರನ್ನೇ ನಂಬಿ ಜೀವನ ನಡೆಸುತ್ತಿದ್ದವರ ಬದುಕು ಮೂರಾಬಟ್ಟೆಯಾಗಿತ್ತು. ಆದರೆ ಈಗ ಅವರೆಲ್ಲರೂ ಸಂತಸ ಪಡುತ್ತಿದ್ದಾರೆ. ಕಾರಣ ಪ್ರವಾಸಿಗರು ಬಂದರೆ ಅವರಿಗೂ ಒಂದಷ್ಟು ಅನುಕೂಲವಾಗಲಿದೆ.

By admin