ಮೈಸೂರು: ಲಾಕ್ ಡೌನ್ ಹಿನ್ನಲೆಯಲ್ಲಿ ಸ್ಥಗಿತಗೊಂಡಿದ್ದ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೋಮವಾರ(ಜೂ.28)ದಿಂದ ಮೈಸೂರಿನಲ್ಲಿ ಆರಂಭಗೊಂಡಿದೆ. ಹೀಗಾಗಿ ಮೊದಲ ದಿನದ ಪ್ರಯಾಣಕ್ಕಾಗಿ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುಲಾಬಿ ಹೂ ನೀಡಿ ಸ್ವಾಗತಿಸಿ ಕೊರೊನಾ ಜಾಗೃತಿ ಮೂಡಿಸಲಾಯಿತು.
ಮೊದಲ ದಿನವಾದ್ದರಿಂದ ಹೆಚ್ಚಿನ ಪ್ರಯಾಣಿಕರು ಇರಲಿಲ್ಲವಾದರೂ ಬಹುಶಃ ನಾಳೆಯಿಂದ ಪ್ರಯಾಣಿಕರು ಆಗಮಿಸುವ ಸಾಧ್ಯತೆಯಿದೆ. ಬಸ್ ಆರಂಭದ ಮೊದಲ ದಿನ ಬಸ್ ನಿಲ್ದಾಣದಲ್ಲಿ ಕೊರೊನಾ ನಿಯಮ ಪಾಲನೆ ಮಾಡುವಂತೆ ಜನರಿಗೆ ತಿಳಿ ಹೇಳಿ ಅವರಿಗೆ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಮತ್ತು ಲಸಿಕೆ ಪಡೆಯುವಂತೆ ತಿಳಿಸಿ ಗುಲಾಬಿ ಹೂ ಹಾಗೂ ಮಾಸ್ಕ್ ಗಳನ್ನು ವಿತರಿಸಲಾಯಿತು.
ಈ ವೇಳೆ ಬಸ್ ನಿಲ್ದಾಣ ಮತ್ತು ಬಸ್ ನೊಳಕ್ಕೆ ತೆರಳಿದ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಲಾಕ್ ಡೌನ್ ನಿರ್ಬಂಧವನ್ನು ಸಡಿಲಿಸಿದ್ದರಿಂದಾಗಿ ಬಸ್ ಸಂಚಾರ ಆರಂಭಗೊಂಡಿದೆ. ಕೊರೊನಾ ಇನ್ನೂ ಕಡಿಮೆ ಆಗಿಲ್ಲ. ಆದುದರಿಂದ ಆರೋಗ್ಯದ ದೃಷ್ಠಿಯಿಂದ ಕೊರೊನಾದಿಂದ ದೂರವಿರಿ, ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಸಂಚರಿಸಿ, ಸ್ವಚ್ಛತೆ ಕಾಪಾಡಿಕೊಳ್ಳಿ ಪ್ರತಿಯೊಬ್ಬರೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಮತ್ತು ಲಸಿಕೆಯನ್ನು ಪಡೆದುಕೊಳ್ಳುವಂತೆ ಪ್ರಯಾಣಿಕರಿಗೆ ತಿಳಿಸಿದರು. ಇದೇ ವೇಳೆ ಪ್ರಯಾಣಿಕರಿಗೆ ಉಚಿತವಾಗಿ ಒಂದು ಸಾವಿರ ಮಾಸ್ಕ್ ಮತ್ತು ಗುಲಾಬಿ ಹೂಗಳನ್ನು ನೀಡಲಾಯಿತು.
ಇದೇ ಸಂದರ್ಭದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಬಿಜೆಪಿ ನಗರ ಯುವ ಮೋರ್ಚಾ ಉಪಾಧ್ಯಕ್ಷ ಕಾರ್ತಿಕ್ ಮರಿಯಪ್ಪ, ದುರ್ಗಾಪ್ರಸಾದ್, ಎಸ್ ಎನ್ ರಾಜೇಶ್, ಜಿ ರಾಘವೇಂದ್ರ ಹಾಗೂ ಇನ್ನಿತರರು ಇದ್ದರು.