ತುಮಕೂರು: ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ (KABA) ಆಯೋಜಿಸಿದ್ದ ಕರ್ನಾಟಕ ರಾಜ್ಯ ಕ್ರೀಡಾಕೂಟದ ಬಾಕ್ಸಿಂಗ್ (ಪುರುಷ ಮತ್ತು ಮಹಿಳಾ) ಚಾಂಪಿಯನ್‌ಶಿಪ್–2026ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಬಾಕ್ಸರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 16 ಪದಕಗಳನ್ನು ಗೆದ್ದಿದ್ದಾರೆ.
ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ (KOA) ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ಸಹಯೋಗದಲ್ಲಿ ಈ ಚಾಂಪಿಯನ್‌ಶಿಪ್‌ನ್ನು ಜನವರಿ 18ರಿಂದ 20ರವರೆಗೆ ತುಮಕೂರು ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು. ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಪಟುಗಳು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡು ತಂಡದ ಸಾಧನೆಯನ್ನು ಮೆರೆಯಿಸಿದರು.
ಪದಕ ವಿಜೇತರಿಗೆ ಮೈಸೂರು ವಿಶ್ವವಿದ್ಯಾಲಯದ ಕೋಚ್ ಜಸ್ವಂತ್ ಎಸ್ ಹಾಗೂ ತಂಡದ ಕೋಚ್ ಗುರುಪ್ರಸಾದ್ ಕೆ ಅಭಿನಂದನೆ ಸಲ್ಲಿಸಿದ್ದು, ಈ ಸಾಧನೆ ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
