ಮೈಸೂರು: ಎಲ್ಲರೂ ತಮಗೋಸ್ಕರ ಕೆಲಸ ಮಾಡುವುದು ಸಾಮಾನ್ಯ ಆದರೆ ತಮಗೆ ಮಾತ್ರವಲ್ಲದೆ ಸಮಾಜಕ್ಕೂ ಏನಾದರೊಂದು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಕೆಲಸ ಮಾಡುವವರು ಕೆಲವರು ಮಾತ್ರ ಅಂಥವರಲ್ಲಿ ಮೈಸೂರಿನ ಡಾ. ಬಿ.ಕೆ. ಅಜಯ್ ಕುಮಾರ್ ಜೈನ್ ಕೂಡ ಒಬ್ಬರಾಗಿದ್ದಾರೆ.
ಇವರು ಪ್ರಗತಿ ಪ್ರತಿಷ್ಠಾನ ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಸಮಾಜದ ಜನರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ದುಡಿಯುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ಮೊದಲಿನಿಂದಲೂ ಸಮಾಜಕ್ಕೆ ಏನಾದರೊಂದು ಸೇವೆಯನ್ನು ಮಾಡಬೇಕೆಂಬ ಹಂಬಲ ಹೊಂದಿದ್ದ ಅವರು 2013ರ ಮೇ 17ರಂದು ಪ್ರಗತಿ ಪ್ರತಿಷ್ಠಾನವನ್ನು ಸ್ಥಾಪಿಸಿದರು. ಅಲ್ಲಿಂದ ಇಲ್ಲಿ ತನಕ ಅವರು ಒಂದಲ್ಲ ಒಂದು ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇವರ ಕಾರ್ಯ ಚಟುವಟಿಕೆಯು ಜಾತಿ, ಮತ, ಧರ್ಮ, ಭಾಷೆ ಮತ್ತು ಯಾವುದೇ ಲಿಂಗ ಭೇದ- ಭಾವವಿಲದ ಗ್ರಾಮೀಣ ಹಾಗೂ ನಗರ ಪ್ರದೇಶವನ್ನು ಮೀರಿದ್ದಾಗಿದೆ.
ಇವರ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳಲ್ಲಿ ದೇಶದ ಅಭಿವೃದ್ಧಿಗೆ ಪೂರಕವಾಗಿದೆಯಲ್ಲದೆ, ಪರಿಸರ, ಪ್ರಾಣಿ, ಪಕ್ಷಿಗಳ ಕಾಳಜಿ ಇರುವುದನ್ನು ನಾವು ಕಾಣಬಹುದಾಗಿದೆ. ದೇಶವನ್ನು ಹಸಿರು ರಾಷ್ಟ್ರವನ್ನಾಗಿ ಮಾಡುವ ಸಲುವಾಗಿ 2017ರ ಜೂನ್ ನಿಂದ ಒಂದು ಕೋಟಿ ಮರವಾಗುವ ಬೀಜಗಳನ್ನು ಬಿತ್ತುವ ಕಾರ್ಯವನ್ನು ಕೈಗೊಂಡಿದ್ದು ಪ್ರತಿ ವರ್ಷವೂ ಇದು ನಡೆಯುತ್ತಲೇ ಇದೆ. ಜತೆಗೆ ಪರಿಸರ ರಕ್ಷಣೆ ದೃಷ್ಟಿಯಿಂದ ಮನೆಗೊಂದು ಸಸಿ ಎಂಬ ಕಾರ್ಯಕ್ರಮದಡಿಯಲ್ಲಿ ಮೈಸೂರು ನಗರ ಪ್ರದೇಶದಲ್ಲಿ ಒಂದು ಲಕ್ಷ ಸಸಿಗಳನ್ನು ನೆಡುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಇನ್ನು ಪ್ರಗತಿ ಫುಡ್ ಪ್ರಾಡೆಕ್ಟ್ಸ್ ಆರಂಭಿಸಿ ಉತ್ತಮ ಗುಣಮಟ್ಟ, ನೈಸರ್ಗಿಕ, ಸಂರಕ್ಷಕ ರಹಿತ, ದೇಸಿ, ಶುದ್ಧ ಸಸ್ಯಹಾರಿ ಪದಾರ್ಥಗಳನ್ನು ಮಹಿಳೆಯರಿಂದಲೇ ಮಾಡಿಸಿ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರ ಮಾರುಕಟ್ಟೆ ಕಲ್ಪಿಸಿದ್ದು, ಇದರಿಂದ ಒಂದಷ್ಟು ಮಹಿಳೆಯರಿಗೆ ಉದ್ಯೋಗ ದೊರೆತಿದ್ದು ಅವರ ಬದುಕು ಹಸನಾಗಿದೆ.
ಮೈಸೂರು ಸುತ್ತಮುತ್ತ ಪ್ರೇಕ್ಷಣೀಯ ತಾಣಗಳಿದ್ದು ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಮತ್ತು ಸ್ವಚ್ಛತೆ ಕಾಪಾಡುವ ಸಲುವಾಗಿ ಚಾಮುಂಡಿ ಬೆಟ್ಟ, ಕುಕ್ಕರಹಳ್ಳಿ ಕೆರೆ ಸೇರಿದಂತೆ ಹಲವೆಡೆ ಸೌಟ್ಸ್ ಮತ್ತು ಗೈಡ್ಸ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಎನ್.ಎಸ್.ಎಸ್ ಹಾಗೂ ಇತರ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ತಿಂಗಳಿಗೊಮ್ಮೆ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
2013ರಿಂದ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಅತಿಥಿದೇವೋಭವ ಎಂಬ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದ್ದು, ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮೈಸೂರಿನ ಕೆ.ಆರ್.ವೃತ್ತದಲ್ಲಿ ಮಾಡಿ ಲಕ್ಷಾಂತರ ಜನರ ಬಾಯಾರಿಕೆಯನ್ನು ನಿವಾರಿಸಿದ್ದಾರೆ. ಇದಲ್ಲದೆ, ವಿದ್ಯಾದಾನ ಕಾರ್ಯಕ್ರಮದಡಿ ಬಡ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಲೇಖನಿ ಸಾಮಾಗ್ರಿ, ಸಮವಸ್ತ್ರ ವಿತರಣೆ ಮಾಡಿದ್ದಲ್ಲದೆ, ಕ್ರೀಡಾಕೂಟ ಆಯೋಜಿಸಿ ಹಾಗೂ ಉಪಯುಕ್ತ ಕ್ರೀಡಾಪಟುಗಳಿಗೆ ಕ್ರೀಡಾ ಸಾಮಾಗ್ರಿ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದ್ದಾರೆ.
ಇನ್ನೊಂದೆಡೆ ಮೈಸೂರಿನಲ್ಲಿ ಪ್ರಪ್ರಥಮ ಬಾರಿಗೆ ಪಕ್ಷಿಗಳ ಸಂಶೋಧನೆ ಮತ್ತು ಸಂರಕ್ಷಣೆಗಾಗಿ 24 ಗಂಟೆಯೂ ಸೇವೆ ಸಲ್ಲಿಸುವ ಅಂಬುಲೆನ್ಸ್ ಮತ್ತು ತುರ್ತು ಚಿಕಿತ್ಸಾ ಘಟಕವುಳ್ಳ ಪ್ರಗತಿ ಬರ್ಡ್ ಚಾರಿಟೆಬಲ್ ಹಾಸ್ಪೆಟಲ್ ಅಂಡ್ ರಿಸರ್ಚ್ ಸೆಂಟರ್ ಎಂಬ ವಿಶೇಷ ಆಸ್ಪತ್ರೆಯನ್ನು ಆರಂಭಿಸಿ ಇದುವರೆಗೆ ಸುಮಾರು 2000ಕ್ಕೂ ಹೆಚ್ಚು ಪಕ್ಷಿಗಳನ್ನು ರಕ್ಷಿಸಿ – ಚಿಕಿತ್ಸೆ ನೀಡಿ ಹಾರುವಂತೆ ಮಾಡಿದ್ದಾರೆ.
ಇಷ್ಟೇ ಅಲ್ಲದೆ ಮಹಿಳೆಯರ ಸ್ವಯಂ ರಕ್ಷಣೆಗೆ ತರಬೇತಿ, ಅನಾಥರು, ವೃದ್ಧರು, ಅಂಗವಿಕಲ ಮಕ್ಕಳಿಗೆ ಹಲವಾರು ರೀತಿಯ ಮನರಂಜನಾ ಕಾರ್ಯಕ್ರಮ, ಮಕ್ಕಳಿಗೆ ಬೇಸಿಗೆ ಶಿಬಿರಗಳನ್ನು ಚಿತ್ರಕಲೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹಿಸುತ್ತಾ ಬರುತ್ತಿದ್ದಾರೆ.

By admin