ಮೈಸೂರು: ನಗರದ ವಿವಿಧ ಕಂಪನಿ, ಕಚೇರಿಗಳ ಮಾನವ ಸಂಪನ್ಮೂಲ ಅಧಿಕಾರಿ,ಸಿಬ್ಬಂದಿಯ ಆರೋಗ್ಯ ಕಾಳಜಿ ಉದ್ದೇಶದಿಂದ ನಗರದ ಎಚ್.ಆರ್.ಫೋರಂ ಹಾಗೂ ಮಣಿಪಾಲ್ ಆಸ್ಪತ್ರೆ ನಡುವೆ ಒಡಂಬಡಿಕೆಗೆ ಸಹಿ ಮಾಡಲಾಯಿತು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಒಡಂಬಡಿಕೆಗೆ ಸಹಿ ಮಾಡಿದ ಬಳಿಕ ಮಾತನಾಡಿದ ಫೋರಂ ಅಧ್ಯಕ್ಷ ಬಿ.ಎಂ.ಗೌತಮ್, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಚ್‌ಆರ್‌ಗಳು ಅತಿ ಒತ್ತಡದ ನಡುವೆ ಕೆಲಸ ನಿರ್ವಹಿಸುತ್ತಾರೆ. ಹೀಗಾಗಿ ಇವರಿಗೆ ಹೃದಯ ಸಂಬಂಧಿ ಹಾಗೂ ಮಾನಸಿಕ ಒತ್ತಡ ಸಂಬಂಧಿ ಸಮಸ್ಯೆಗಳು ಸಾಮಾನ್ಯವಾಗಿ ಕಾಡುತ್ತವೆ. ಈ ಒಪ್ಪಂದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು. ಕಂಪನಿ ಅಥವಾ ಕಚೇರಿಯ ವೈದ್ಯಕೀಯ ಸೌಲಭ್ಯ ಪಡೆಯಲು ಕಡ್ಡಾಯವಾಗಿ ೨೪ ಗಂಟೆ ಅವಧಿ ಒಳರೋಗಿಯಾಗಿ ದಾಖಲಾಗಬೇಕು. ಆದರೆ ಈ ನೂತನ ಸೌಲಭ್ಯದ ಕಾರಣ ಹೊರ ರೋಗಿಗಳಾಗಿದ್ದಾಗಲೂ ಆಸ್ಪತ್ರೆ ವಿವಿಧ ಶುಲ್ಕ ರಿಯಾಯಿತಿ ನೀಡುತ್ತದೆ. ನೋಂದಣಿ ಸಂಪೂರ್ಣ ಉಚಿತವಾಗಿದ್ದು, ವೇದಿಕೆಯ ಎಲ್ಲ ಸದಸ್ಯರಿಗೆ ಸೌಲಭ್ಯ ದೊರೆಯುತ್ತದೆ ಎಂದು ಹೇಳಿದರು. ಆರೋಗ್ಯ ಕಾರ್ಡ್ ಬಿಡುಗಡೆಗೊಳಿಸಿದ ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ದೊಡ್ಡ ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಆಸ್ಪತ್ರೆ ಈ ರೀತಿ ಒಡಂಬಡಿಕೆ ಮಾಡಿಕೊಂಡಿದೆ. ಇದರಿಂದ ನಮ್ಮ ಆಸ್ಪತ್ರೆಯಲ್ಲಿ ದೊರೆಯುವ ವೈದ್ಯಕೀಯ ಸೇವೆಗಳಲ್ಲಿ ವಿಶೇಷ ರಿಯಾಯಿತಿ ಲಭ್ಯವಿರಲಿದೆ ಎಂದು ವಿವರಿಸಿದರು. ಮಣಿಪಾಲ್ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಸಹಾಯಕ ವ್ಯವಸ್ಥಾಪಕ ಫರಾಜ್, ಮೈಸೂರು ಎಚ್.ಆರ್. ಫೋರಂನ ಉಪಾಧ್ಯಕ್ಷ ಎ.ಡಬ್ಲ್ಯೂ ಹ್ಯಾರಿಸ್, ಖಜಾಂಚಿ ಎಂ.ಫಣೀಶ್, ಕಾರ್ಯಕಾರಿಣಿ ಸದಸ್ಯೆ ಪಾವನಾ ಜಗದೀಶ್ ಇದ್ದರು