ರೈಲ್ವೆ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಿಭಾಗವು ಸರಕು ಸಾಗಣೆಯ ಸ್ತರವನ್ನು ವಿಸ್ತರಿಸಲು ವ್ಯಾಪಾರ ಅಭಿವೃದ್ಧಿ ಘಟಕವನ್ನು (ಬಿ.ಡಿ.ಯು.) ರಚಿಸಿತು. ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ನೀಡಿದ್ದು, ಎರಡು ವರ್ಷಗಳ ನಂತರ ಸಂಚಾರಿ ವಾಹನಗಳ ರೈಲ್ವೆ ಸಾಗಾಣಿಕೆಯು ಮತ್ತೆ ಮೈಸೂರು ವಿಭಾಗಕ್ಕೆ ದೊರಕಿದೆ.
ಮೈಸೂರು ವಿಭಾಗವು ಕಳೆದ ಒಂದು ತಿಂಗಳಿನಲ್ಲಿ ದ್ವಿಚಕ್ರ ವಾಹನಗಳ 5 ನವೀನ ಮಾರ್ಪಡಿಸಿದ ಸರಕು ಸಾಗಾಣೆ (ಎನ್.ಎಂ.ಜಿ.) ರೈಲುಗಳನ್ನು ಕಡಕೊಳದಿಂದ ಲೋಡ್ ಮಾಡಿದೆ. ಎನ್.ಎಂ.ಜಿ. ರೇಕ್‌ಗಳು ವಾಹನಗಳನ್ನು ಸಾಗಿಸಲು 25 ಬೋಗಿಗಳ ಸಂಯೋಜನೆಯನ್ನು ಹೊಂದಿವೆ. ಪ್ರತಿ ರೇಕ್ ನಲ್ಲಿ ಸರಾಸರಿ 1000 ದ್ವಿಚಕ್ರ ವಾಹನಗಳನ್ನು ಸಾಗಿಸಲಾಗುತ್ತಿದೆ.
ಮೈಸೂರು ವಿಭಾಗವು ಉತ್ತರ ಗಡಿನಾಡಿನ ರೈಲ್ವೆಯ ಚಂಗ್ಸಾರಿ, ಪಶ್ಚಿಮ ಬಂಗಾಳದ ಆಗ್ನೇಯ ರೈಲ್ವೆಯ ಸಂಕ್ರೈಲ್ ಗೂಡ್ಸ್ ಟರ್ಮಿನಲ್, ಉತ್ತರ ಪ್ರದೇಶದ ಈಶಾನ್ಯ ರೈಲ್ವೆಯ ನೌತರ್ವಾ ಮತ್ತು ಬಿಹಾರದ ಪೂರ್ವ ಮಧ್ಯ ರೈಲ್ವೆಯ ಸಾರೈ ಮುಂತಾದ ವಿವಿಧ ಗಮ್ಯಗಳಿಗೆ ದ್ವಿಚಕ್ರ ವಾಹನಗಳನ್ನು ಸಾಗಿಸಿತು. ಒಟ್ಟಾರೆಯಾಗಿ ಈ ಐದು ಎನ್.ಎಂ.ಜಿ. ರೇಕ್‌ಗಳು ಸುಮಾರು 5500 ದ್ವಿಚಕ್ರ ವಾಹನಗಳನ್ನು ಸಾಗಿಸಿ ಮೈಸೂರು ವಿಭಾಗಕ್ಕೆ ಒಂದು ಕೋಟಿ ಆದಾಯವನ್ನು ತಂದುಕೊಟ್ಟವು.
ಇದರ ಜೊತೆಗೆ ವಿಭಾಗವು ಶುಂಠಿ, ಅಡಿಕೆ ಕಾಯಿ, ಮೆಣಸು ಮತ್ತು ಇತರೆ ಕೃಷಿ ಸರಕುಗಳನ್ನು ಲೋಡ್ ಮಾಡಿ ರೈತರಿಗೆ ತಮ್ಮ ಉತ್ಪನ್ನಗಳನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದೆ. ವಿಭಾಗದಿಂದ ಗೋವಾ ಮತ್ತು ರೋಹಾದಂತಹ ಸ್ಥಳಗಳಿಗೆ ಮೊದಲ ಬಾರಿಗೆ ಕಬ್ಬಿಣದ ಅದಿರನ್ನು ಲೋಡ್ ಮಾಡಲಾಯಿತು.
ಮೈಸೂರು ವಿಭಾಗದ ಸರಕು ಸಾಗಣೆಯ ವಸ್ತುಗಳ ಪರಿಧಿಯನ್ನು ವಿಸ್ತರಿಸುವ ದೃಷ್ಟಿಯಿಂದ, ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ವಾಣಿಜ್ಯಿಕವಾಗಿ ಪ್ರಮುಖ ಸ್ಥಳಗಳಾದ ಹಾಸನ, ಅರಸಿಕೆರೆ, ದಾವಣಗೆರೆ, ಸುಬ್ರಮಣ್ಯ ರೋಡ್ ಮತ್ತು ಶಿವಮೊಗ್ಗಗಳಿಗಾಗಿ ಬಿ.ಡಿ.ಯು. (ವ್ಯಾಪಾರ ಅಭುವೃದ್ಧಿ ಘಟಕ)ದ ಐದು ಉಪ ವಿಭಾಗೀಯ ಘಟಕಗಳನ್ನು ರಚಿಸಿದ್ದಾರೆ. ಇದು ರೈಲ್ವೆಗೆ ಸ್ಥಳೀಯ ಮಾರುಕಟ್ಟೆಗಳನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ರೈತರು ಪರಿಣಾಮಕಾರಿಯಾಗಿ ವ್ಯಾಪಾರ ಮಾಡಲು ಇರುವ ಅನುಕೂಲಗಳನ್ನು ಹೆಚ್ಚಿಸುತ್ತದೆ.
ಹಾಗೆಯೆ ಒಂದು ಡಿಜಿಟಲ್ ಉಪಕ್ರಮದಲ್ಲಿ, ವಿಭಾಗವು ಸ್ವಿಫ್ಟ್ (SWIFT – ಸರಕು ಸಾಗಣೆಗೆ ಏಕ ಗವಾಕ್ಷಿ ಕೇಂದ್ರ) ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ, ಇದು ಸರಕು ಮತ್ತು ಪಾರ್ಸೆಲ್ ಗಳ ಬುಕಿಂಗ್‌ಗೆ ಒಂದೇ ಸ್ತರದ ತಾಣವಾಗಿ ಕಾರ್ಯನಿರ್ವಹಿಸುತ್ತದೆ.