ಬೆಂಗಳೂರು: ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸೋಂಕಿತರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ಸಮಿತಿ ಸಲ್ಲಿಸಿದ ವರದಿ ಬಹಿರಂಗವಾಗಿದ್ದು, ಘಟನೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ಯಾವುದೇ ರೀತಿಯ ಕರ್ತವ್ಯ ಲೋಪವಾಗಿಲ್ಲ ಎಂಬುದನ್ನು ಒತ್ತಿ ಹೇಳಿದೆ.

ಹೀಗಾಗಿ ಈ ಪ್ರಕರಣದಲ್ಲಿ ಮೈಸೂರು ಜಿಲ್ಲಾಧಿಕಾರಿಯ ಯಾವುದೇ ಪಾತ್ರವಿಲ್ಲ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೊಣೆಗಾರರಲ್ಲ. ಬದಲಿಗೆ ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಆಸ್ಪತ್ರೆಯ ಸರ್ಜ‍ ನ್  ಜವಬ್ದಾರರು ಎಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ.

ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರ ಮಧ್ಯರಾತ್ರಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದರು. ಈ ದುರ್ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಕಾನೂನು ಸೇವೆಗಳ ಪ್ರಾಧಿಕಾರದ ಸಮಿತಿ ತನಿಖೆ ಮಾಡಿ ಮೇ 2ರಂದು ರಾತ್ರಿ 10.30  ‌ಆಸ್ಪತ್ರೆಯಲ್ಲಿ ಆಮ್ಲಜನಕವೇ ಲಭ್ಯವಿರಲಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ವಿಶೇಷ ವಿಭಾಗದ ಪೀಠದ ಮುಂದೆ ಬುಧವಾರ ಸಲ್ಲಿಸಲಾಗಿದೆ.

‘ಮೈಸೂರಿನಲ್ಲಿನ ಆಮ್ಲಜನಕ ಸಿಲಿಂಡರ್ ಮರುಪೂರಣ ಘಟಕದಿಂದ ಆಸ್ಪತ್ರೆಗೆ ಆಮ್ಲಜನಕ ಸರಬರಾಜು ಮಾಡಿಕೊಳ್ಳುವುದು ಜಿಲ್ಲಾಡಳಿತ ಮತ್ತು ಆಸ್ಪತ್ರೆ ಅಧಿಕಾರಿಗಳ ಜವಾಬ್ದಾರಿ. ಆಸ್ಪತ್ರೆಯ ಆಡಳಿತ ಜಾಗರೂಕರಾಗಿದ್ದರೆ, ಪೂರೈಕೆದಾರರು ಸಮಯೋಚಿತವಾಗಿ ಮರುಪೂರಣಗೊಳಿಸಿದ್ದರೆ ಸಾಕಷ್ಟು ಆಮ್ಲಜನಕ ಸಂಗ್ರಹಿಸಬಹುದಿತ್ತು. ಅದನ್ನು ಮಾಡದೆ ಇರುವುದು ಅಮೂಲ್ಯ ಜೀವಗಳ ಹಾನಿಗೆ ಕಾರಣವಾಗಿದೆ’ ಜತೆಗೆ ಈ ವಿಷಯದಲ್ಲಿ ಚಾಮರಾಜನಗರ ಜಿಲ್ಲಾಧಿಕಾರಿ ವಿಫಲವಾಗಿದ್ದಾರೆ. ಚಾಮರಾಜನಗರಕ್ಕೆ ಆಮ್ಲಜನಕ ಸಾಗಿಸಲು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಡೆ ಒಡ್ಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ’ ಎಂದು  ವರದಿಯಲ್ಲಿ ವಿವರಿಸಿದೆ.

ಘಟನೆಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮೇಲೆ ಆರೋಪ ಮಾಡಿದ ಕೂಡಲೇ ಪ್ರತಿಕ್ರಿಯೆ ನೀಡಿ ಈ ಪ್ರಕರಣದಲ್ಲಿ ತನ್ನದೇನು ಲೋಪವಿಲ್ಲ. ಅನಗತ್ಯವಾಗಿ ಆರೋಪ ಮಾಡದಂತೆಯೇ ಮನವಿ ಮಾಡಿಕೊಂಡಿದ್ದರಲ್ಲದೆ, ಎಲ್ಲ ಮಾಹಿತಿಗಳನ್ನು ತನಿಖಾ ತಂಡದ ಮುಂದೆ ನೀಡುವುದಾಗಿಯೂ ತಿಳಿಸಿದ್ದರು. ಇದೀಗ ರೋಹಿಣಿ ಸಿಂಧೂರಿ ಅವರ ಪಾತ್ರವೇನು ಇಲ್ಲ ಎಂಬುದು ಸಾಬೀತಾಗಿದೆ.

By admin