ಮೈಸೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ನಡೆದ ದುರ್ಘಟನೆಗೆ ಮೈಸೂರು ಜಿಲ್ಲಾಧಿಕಾರಿಯನ್ನು ಹೊಣೆಯಾಗಿಸಿ ಆರೋಪ ಮಾಡುತ್ತಿರುವುದಕ್ಕೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಬಗ್ಗೆ ಕಾಳಜಿ ವಹಿಸಬೇಕಿತ್ತು. ಅವರು ತಮ್ಮ ವೈಫಲ್ಯವನ್ನಿಟ್ಟುಕೊಂಡು ಬೇರೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅವತ್ತು ಮೈಸೂರಿನ ಕೆ.ಆರ್.ಆಸ್ಪತ್ರೆಯಿಂದ ೪೦ ಆಕ್ಸಿಜನ್ ಸಿಲಿಂಡರ್‌ಗಳನ್ನು ಚಾಮರಾಜನಗರಕ್ಕೆ ಕಳುಹಿಸಲಾಗಿದೆ. ಮೈಸೂರಿಗೂ ಬಳ್ಳಾರಿಯಿಂದಲೇ ಆಕ್ಸಿಜನ್ ಬರಬೇಕು. ಒಂದು ವೇಳೆ ನಮ್ಮ ಜಿಲ್ಲೆಯಲ್ಲಿ ಇಂತಹದೊಂದು ಘಟನೆ ನಡೆದರೆ ಅದಕ್ಕೆ ಬಳ್ಳಾರಿ ಜಿಲ್ಲಾಧಿಕಾರಿಗಳನ್ನು ಹೊಣೆ ಮಾಡಲು ಸಾಧ್ಯವೆ? ಎಂದು ಪ್ರಶ್ನಿಸಿದ ಅವರು ಸಾವು ಎಲ್ಲಿಯೇ ಆದರೂ ಅದು ಸಾವೇ. ಆದರೆ ಸುಖಾಸುಮ್ಮನೆ ಒಬ್ಬರ ಮೇಲೆ ಆರೋಪ ಮಾಡುವುದು ಸರಿಯಲ್ಲ. ಈಗಾಗಲೇ ಈ ವಿಚಾರದಲ್ಲಿ ತನಿಖೆ ನಡೆಯುತ್ತಿದ್ದು ಸಮಗ್ರ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ. ನಮ್ಮ ಕಡೆಯಿಂದ ಯಾವುದೇ ರೀತಿಯಿಂದಲೂ ಲೋಪವಾಗಿಲ್ಲ. ಮಾಧ್ಯಮದವರು ನಿಜ ವಿಷಯ ಅರಿತು ವರದಿ ಮಾಡಿ ಎಂದು ಮನವಿ ಮಾಡಿದರು.
ಚಾಮರಾಜನಗರದಲ್ಲಿ ನಡೆದ ದುರ್ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. ಆದರೂ ಚಾಮರಾಜನಗರ ಜಿಲ್ಲಾಧಿಕಾರಿಗಳು ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ಮೈಸೂರು ಜಿಲ್ಲಾಧಿಕಾರಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಚಾಮರಾಜನಗರ ಅಥವಾ ಇನ್ನಾವುದೇ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್ ಸರಬರಾಜನ್ನು ನಿಯಂತ್ರಿಸಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಗೆ ಆಮ್ಲಜನಕದ ಪೂರೈಕೆಯು ಸಂಪೂರ್ಣವಾಗಿ ಪೂರೈಕೆದಾರ, ರೀ-ಫಿಲ್ಲರ್(ಮರು ಪೂರಣದಾರ) ನಡುವೆ ಇರುತ್ತದೆಯೇ ಹೊರತು ಇನ್ನೊಬ್ಬ ಜಿಲ್ಲಾಧಿಕಾರಿಗೆ ಇದರಲ್ಲಿ ಯಾವುದೇ ಪಾತ್ರ ಅಥವಾ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದರು.
ಆಕ್ಸಿಜನ್ ಸರಬರಾಜನ್ನು ನಿರ್ವಹಿಸುವುದು ಜಿಲ್ಲೆಯ ಜವಾಬ್ದಾರಿಯಾಗಿದೆ. ಯಾವುದೇ ಸರಬರಾಜುದಾರರು ಸರಬರಾಜು ಮಾಡದಿದ್ದರೆ ಅಥವಾ ಜಿಲ್ಲೆಯ ಅಗತ್ಯಗಳನ್ನು ಪೂರೈಸದಿದ್ದರೆ ಮೇಲ್ವಿಚಾರಣೆ ಮತ್ತು ತಿದ್ದುಪಡಿಯನ್ನು ರಾಜ್ಯ ಮಟ್ಟದ ಅಧಿಕಾರಿಗಳು ಮಾಡುತ್ತಾರೆ. ಚಾಮರಾಜನಗರ ಜಿಲ್ಲಾಧಿಕಾರಿಗಳು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅವರ ಸಾಮಗ್ರಿಗಳನ್ನು ಪಡೆಯಲು ವಿಫಲರಾಗಿದ್ದಾರೆ. ತುರ್ತು ಕೋರಿಕೆಯ ಮೇರೆಗೆ ಚಾಮರಾಜನಗರಕ್ಕೆ ಮೈಸೂರು ಜಿಲ್ಲೆಯು ತನ್ನ ಜಿಲ್ಲಾ ಆಸ್ಪತ್ರೆಯಿಂದ ೪೦ ಆಕ್ಸಿಜನ್ ಸಿಲಿಂಡರ್‌ಗಳನ್ನು ಮೇ.೧ರ ರಾತ್ರಿ ಕಳುಹಿಸಲಾಗಿದೆ ಈ ಸಂಬಂಧ ತನಿಖೆ ನಡೆಯುತ್ತಿದ್ದು ಅದರಲ್ಲಿ ನೈಜಾಂಶ ಹೊರಬರಲಿದೆ ಎಂದು ಅವರು ಹೇಳಿದರು.

By admin