ಮೈಸೂರು: ಅರಮನೆ ನಗರಿಗೆ ಅದೇನಾಗಿದೆಯೋ ಗೊತ್ತಿಲ್ಲ. ಇಲ್ಲಿವರೆಗೆ ಜನಪ್ರತಿನಿಧಿಗಳು ಮತ್ತು ಜಿಲ್ಲಾಧಿಕಾರಿ ನಡುವೆ ನಡೆಯುತ್ತಿದ್ದ ಶೀತಲ ಸಮರ ಮುಂದುವರೆದು ಜಿಲ್ಲಾಧಿಕಾರಿ ಮತ್ತು ಪಾಲಿಕೆ ಆಯುಕ್ತರ ಮಧ್ಯೆ ಬಂದು ನಿಂತಿದೆ.
ಸದ್ಯದ ಸ್ಥಿತಿಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಿರುಕುಳಕ್ಕೆ ಬೇಸತ್ತಿರುವ ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಈಗಾಗಲೇ ರಾಜೀನಾಮೆ ಬರೆದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಳುಹಿಸಿದ್ದಾರೆ.
ಯಾವಾಗ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರು ರಾಜೀನಾಮೆ ಸಲ್ಲಿಸುತ್ತಿರುವ ವಿಚಾರ ಗೊತ್ತಾಯಿತೋ ಪಾಲಿಕೆಯ 65 ವಾರ್ಡ್ ಗಳ ಸದಸ್ಯರು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾತ್ರ ನನ್ನ ಮೇಲಿನ ಆರೋಪ ನಿರಾಧಾರ ಎಂದು ಹೇಳುತ್ತಿದ್ದಾರೆ. ಪಾಲಿಕೆಗೆ ಮೈಸೂರು ನಗರ ವ್ಯಾಪ್ತಿಯೊಳಗೆ ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯುವುದು ಮತ್ತು ಜುಲೈ 1 ರೊಳಗೆ ಕೋವಿಡ್ ಸೋಂಕು ಮುಕ್ತವಾಗಿಸಲು ಪ್ರತಿ ದಿನ ವಾರ್ಡ್ ವಾರು ವರದಿಗಳನ್ನು ಸಿದ್ಧಪಡಿಸಿ ಒದಗಿಸುವಂತೆ . ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 18 ಕೋವಿಡ್ ಕೇರ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನಗರದಲ್ಲಿ ಎಂಟು ಸಾವಿರ ಸಕ್ರಿಯ ಪ್ರಕರಣಗಳಿವೆ. ಹೀಗಿರುವಾಗ ವಹಿಸಿದ ಕೆಲಸ ಮಾಡದೆ, ನನ್ನನು ಅವಮಾನಿಸಲು ಈ ರೀತಿ ಮಾಡಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಇದೆಲ್ಲದರ ನಡುವೆ ಈಗಾಗಲೇ ಪಾಲಿಕೆ ಸದಸ್ಯರು ಸಾಮೂಹಿಕವಾಗಿ ಸುದ್ದಿಗೋಷ್ಠಿ ಕರೆದು ಮೈಸೂರು ಪಾಲಿಕೆ ಟಾಸ್ಕ್ ಪೋರ್ಸ್ ಕಮಿಟಿಯೂ ಕೆಲಸ ಮಾಡುವುದಿಲ್ಲ ಎಂದಿದ್ದಾರೆ. ಜತೆಗೆ ಮೈಸೂರಿನ ಮಾಜಿ ಮೇಯರ್ ಅಯೂಬ್ ಖಾನ್, ಅವರು ಪೌರಕಾರ್ಮಿಕರು ಯಾರೂ ಕೆಲಸ ಮಾಡಲ್ಲ. ಕೋವಿಡ್ ಕರ್ತವ್ಯಕ್ಕೆ ಹಾಕಿದವರು ಸಹ ಕೆಲಸ ಮಾಡುವುದಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿಲ್ಲೆಗೆ ಬರುತ್ತಾರೆ. ಅವರು ಕೋವಿಡ್ ರಿವ್ಯೂಗೆ ಬಂದರೆ ನಮ್ಮ ತಕರಾರಿಲ್ಲ. ಆದರೆ, ಶಿಲ್ಪಾ ನಾಗ್ ಬಗ್ಗೆ ತನಿಖೆಗೆ ಬಂದ್ರೆ ಗೋಬ್ಯಾಕ್ ಪ್ರತಿಭಟನೆ ನಡೆಸಲಾಗುವುದು ಎಂದಿರುವ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಬೇಕು. ಜತೆಗೆ ಶಿಲ್ಪಾ ನಾಗ್ ಅವರು ಪಾಲಿಕೆ ಆಯುಕ್ತೆ ಸ್ಥಾನಕ್ಕೆ ರಾಜೀನಾಮೆ ಹಿಂಪಡೆಯುವವರೆಗೂ ನಾವೂ ಕೆಲಸ ಮಾಡಲ್ಲ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರು ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾನಾಗ್ ಅತ್ಯಂತ ದಕ್ಷತೆ, ಪ್ರಾಮಾಣಿಕತೆ ಮತ್ತು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರ ರಾಜಿನಾಮೆಯನ್ನು ಸರ್ಕಾರ ಯಾವ ಕಾರಣಕ್ಕೂ ಅಂಗೀಕಾರ ಮಾಡುವುದಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿ ಮಾತನಾಡುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಅವರು ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸದಂತೆ ಮನವಿ ಮಾಡಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಜನಪ್ರತಿನಿಧಿಗಳು ಪಾಲಿಕೆ ಆಯುಕ್ತರ ಬೆನ್ನಿಗೆ ನಿಂತು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಇದು ಎಲ್ಲಿಗೆ ಬಂದು ನಿಲ್ಲುತ್ತದೆ ಎಂಬುದೇ ಗೊತ್ತಾಗದಂತಾಗಿದೆ.