ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಪರಿಕಲ್ಪನೆಯ ಉಪಕ್ರಮವಾಗಿ ಜನರ ಸಹಭಾಗಿತ್ವದೊಂದಿಗೆ ಮೈಸೂರು ನಗರವನ್ನು 2030ರ ವೇಳೆಗೆ ಸ್ವಚ್ಛ, ಸುಂದರ, ಹಸಿರು ಹಾಗೂ ರಚನಾತ್ಮಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ದಿನಾಂಕ 22.08.2025 ರಂದು MyMysuru Ideathon ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು.

ಮಾನ್ಯ ಸಂಸದರ ಈ ಉಪಕ್ರಮದಲ್ಲಿ ಪರಿಸರ ಸಂರಕ್ಷಣೆ, ಸಂಚಾರ ದಟ್ಟಣೆ ನಿವಾರಣೆ, ಪರಂಪರೆ, ಆರೋಗ್ಯ, ಆಡಳಿತ, ಗ್ರಾಮೀಣ- ನಗರ ಏಕೀಕರಣ ಹಾಗೂ ಇತರೆ ಒಂಬತ್ತು ಅಂಶಗಳ ಕುರಿತು ತಮ್ಮ ಆಲೋಚನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸಂಬಂಧ ಮೈಸೂರು ನಗರ ಸೇರಿದಂತೆ ಇತರೆ ಹಲವು ನಗರಗಳ ನಾಗರಿಕರು, ವಿದ್ಯಾರ್ಥಿಗಳು ಹಾಗೂ ವೃತ್ತಿಪರದಿಂದ 2500 ಕ್ಕೂ ಹೆಚ್ಚು ಆಲೋಚನೆಗಳು ಸಲ್ಲಿಕೆಯಾಗಿದ್ದು. ಈ ಆಲೋಚನೆಗಳನ್ನು ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿನ ವಿಷಯ ಪರಿಣಿತರ ತಂಡದ ಸಮಗ್ರವಾಗಿ ಪರಿಶೀಲಿಸಿ ಮೊದಲ ಹಂತದಲ್ಲಿ 340 ತಂಡಗಳನ್ನು ಶಾರ್ಟ್ ಲಿಸ್ಟ್ ಮಾಡಲಾಯಿತು. ನಂತರ 100 ತಂಡಗಳಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಅಂತಿಮವಾಗಿ ದಿನಾಂಕ 20.09.2025 ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ 10 ತಂಡಗಳನ್ನು ಆಯ್ಕೆ ಮಾಡಲಾಗಿತ್ತು.

ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಿದ 10 ತಂಡಗಳಿಗೂ ಅಂತಿಮವಾಗಿ ತಮ್ಮ ಆಲೋಚನೆಯನ್ನು ಪ್ರಸ್ತುತಿ ಪಡಿಸಲು ಅವಕಾಶ ನೀಡಲಾಗಿತ್ತು. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ತಂತ್ರಜ್ಞಾನದೊಂದಿಗೆ ಹೆಚ್ಚು ದಕ್ಷವಾಗಿ ಹಾಗೂ ಸುಲಭವಾಗಿ ವಿತರಣೆ ಮಾಡುವ ಕುರಿತು ಪರಿಕಲ್ಪನೆಯನ್ನು ಪ್ರಸ್ತುತಿಪಡಿಸಿದ ರೇಷನ್ ಈಸ್ ತಂಡವನ್ನು ಪ್ರಥಮ ವಿಜೇತರಾಗಿ ಆಯ್ಕೆ ಮಾಡಲಾಯಿತು. ಪ್ರವಾಸೋದ್ಯಮದ ಅಭಿವೃದ್ಧಿಯ ಸರಳ ಮತ್ತು ನವೀನ ಪರಿಕಲ್ಪನೆ ಕುರಿತು ಪ್ರಸ್ತುತಿ ಪಡಿಸಿದ ಚಾಮುಂಡಿ ಕೋಡರ್ಸ್ ತಂಡವನ್ನು ಪ್ರಥಮ ರನ್ನರ್ ಅಪ್ ಆಗಿ ಆಯ್ಕೆ ಮಾಡಲಾಯಿತು. ತ್ಯಾಜ್ಯ ನಿರ್ವಹಣೆ ಕುರಿತು ತಮ್ಮ ಆಲೋಚನೆಯನ್ನು ಪ್ರಸ್ತುತಿ ಪಡಿಸಿದ ಇಕೋ ಸ್ಮಾರ್ಟ್ ಇನ್ನೋವೇಟರ್ಸ್ ಎರಡನೇ ರನ್ನರ್ಸ್ ಅಪ್ ಆಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಜೇತ ಆಲೋಚನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕುರಿತು ಸ್ಥಳಿಯ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ನಾಯಕರ ಸಹಕಾರ ಹಾಗೂ ಆಸಕ್ತಿಯ ಕುರಿತು ಗಮನ ಸೆಳೆಯಲಾಯಿತು. ವಿಜೇತರಿಗೆ ನಗದು ಹಾಗೂ ಸ್ಮರಣಿಕೆಯನ್ನು ಪ್ರಯೋಜಕರಿಂದ ವಿತರಿಸಲಾಯಿತು.
ಮಾನ್ಯ ಸಂಸದರು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಮೈಸೂರಿನ ಅಭಿವೃದ್ಧಿ ಕುರಿತು ಮೈಸೂರು ನಾಗರೀಕರ ಆಲೋಚನೆಗಳನ್ನು ಸ್ವಾಗತಿಸಿ ತಮ್ಮ ಆಲೋಚನೆಗಳನ್ನು ಪ್ರಸ್ತುತಿ ಪಡಿಸಿದ ನಾಗರಿಕರು ವಿದ್ಯಾರ್ಥಿಗಳು ಹಾಗೂ ವೃತ್ತಿಪರ ಪ್ರಯತ್ನಗಳನ್ನು ಶ್ಲಾಘಿಸಿದರು. ಪ್ರಸ್ತುತಿ ಪಡಿಸಿದ ಆಲೋಚನೆಗಳನ್ನು ಜಾರಿಗೆ ತರಬಹುದಾದಂತಹ ಕ್ರಮಗಳ ಕುರಿತು ಅಂತಿಮವಾಗಿ ಸ್ಪರ್ಧಿಗಳಿಗೆ ಮಾರ್ಗದರ್ಶವನ್ನು ನೀಡಿದರು.
ಈ ಕಾರ್ಯಕ್ರಮವನ್ನು ಒಟ್ಟುಗೂಡಿಸಿದ ಪಾಲುದಾರರಾದ ಯಂಗ್ ಇಂಡಿಯನ್ಸ್ ಮತ್ತು ಕಲಿಸು ಫೌಂಡೇಶನ್ ಗೆ ಮಾನ್ಯ ಸಂಸದರು ಧನ್ಯವಾದ ಅರ್ಪಿಸಿದರು. ಈ ಕಾರ್ಯಕ್ರಮವನ್ನು Equalize RCM, Cycle Group, RKB Buildpro, Sunpure Group, Ibis Styles and Big FM ಬೆಂಬಲಿಸಿವೆ.