ಚಾಮರಾಜನಗರ: ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಈ ಹಿಂದೆ ಚಾಮರಾಜನಗರ ನಗರಸಭಾ ಪೌರಾಯುಕ್ತರಾಗಿದ್ದವರ ಜೊತೆ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭಾ ಸದಸ್ಯರಾದ ಆರ್.ಪಿ. ನಂಜುಂಡಸ್ವಾಮಿ ಅವರಿಗೆ ಶಿಕ್ಷೆ ವಿಧಿಸಿ ಪ್ರಧಾನ ಸಿ.ಜೆ. ಮತ್ತು ಜೆ.ಎಫ್.ಸಿ ನ್ಯಾಯಾಲಯ ತೀರ್ಪು ನೀಡಿದೆ. 
೨೦೧೦ರ ನವೆಂಬರ್ ೧೦ರಂದು ಚಾಮರಾಜನಗರದ ಯಡಬೆಟ್ಟದ ಸರ್ಕಾರಿ ಜಾಗದಲ್ಲಿ ನಗರಸಭಾ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮ ನಡೆದ ವೇಳೆ ನಗರಸಭಾ ಪೌರಾಯುಕ್ತರಾಗಿದ್ದ ಎಸ್. ಪ್ರಕಾಶ್ ರವರ ಜೊತೆ ನಗರಸಭಾ ಸದಸ್ಯರಾದ ಆರೋಪಿ ರಾಮಸಮುದ್ರದ ಆರ್.ಪಿ. ನಂಜುಂಡಸ್ವಾಮಿ ಅವರು ಹಳೇ ಕಾಮಗಾರಿಗಳ ಲೆಕ್ಕ ಕೇಳುವ ನೆಪದಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿ ಪ್ರಕಾಶ್ ಅವರ ಜೊತೆ ಜಗಳ ತೆಗೆದು ಅವ್ಯಾಚ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಸಂಬಂಧ ಆರೋಪಿ ವಿರುದ್ದ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ ೩೫೩, ೫೦೪ ಮತ್ತು ೫೦೬ ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಪೂರೈಸಿ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು. 
ಪ್ರಕರಣದ ವಿಚಾರಣೆ ನಡೆದು ನಗರಸಭಾ ಸದಸ್ಯರಾದ ಆರೋಪಿ ನಂಜುಂಡಸ್ವಾಮಿ ಅವರ ಆರೋಪ ಸಾಬೀತಾಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಅವರು ಆರೋಪಿಗೆ ಐಪಿಸಿ ಕಲಂ ೩೫೩ರ ಅಡಿ ಮಾಡಿದ ಅಪರಾಧಕ್ಕೆ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ, ೩ ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಕಾರಾಗೃಹ ವಾಸ, ಐಪಿಸಿ ಕಲಂ ೫೦೪ರ ಅಡಿ ಮಾಡಿದ ಅಪರಾಧಕ್ಕೆ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ೧ ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಕಾರಾಗೃಹ ವಾಸ, ಐಪಿಸಿ ಕಲಂ ೫೦೬ರ ಅಡಿ ಮಾಡಿದ ಅಪರಾಧಕ್ಕೆ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ ೧ ಸಾವಿರ ರೂ ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಕಾರಾಗೃಹ ವಾಸ ಅನುಭವಿಸುವಂತೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. 
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಎ.ಸಿ. ಮಹೇಶ್ ವಾದ ಮಂಡಿಸಿದ್ದರು. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಬಿ.ಜಿ. ಕುಮಾರ್ ಪ್ರಕರಣದ ತನಿಖೆ ಪೂರೈಸಿ ದೋಷಾರೋಪಣ ಪತ್ರ ಸಲ್ಲಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.