- ಚಿದ್ರೂಪ ಅಂತಃಕರಣ
ಎ.ವಿ ಸ್ಮಿತ್ ಚರಿತ್ರೆಕಾರನ ಮಾತು; “ಆತ ಪರಸ್ಪರ ವಿರುದ್ಧ ಗುಣಗಳ ಆಶ್ಚರ್ಯಕರ ಸಮಾವೇಶ”. ಈ ಹೇಳಿಕೆ ಮಹಮ್ಮದ್ ಬಿನ್ ತುಘಲಕ್’ನ ವ್ಯಕ್ತಿತ್ವ ಕುರಿತದ್ದು. ಹೌದು ಆತ ಘನ ವಿದ್ವಾಂಸ, ಧಾರ್ಮಿಕ ನೀತಿಗಳ ಉದಾರಿ. ಇನ್ನೊಂದೆಡೆ ‘ಈಶ್ವರಿ ಪ್ರಸಾದ್’ ತಿಳಿಸಿದಂತೆ; “ಮಧ್ಯಯುಗದಲ್ಲಿ ಕಿರೀಟ ಧರಿಸಿದವರೆಲ್ಲಾ ಶ್ರೇಷ್ಠರು. ದೆಹಲಿ ಸಿಂಹಾಸನವೇರಿದವರಲ್ಲಿ ಮಹಮ್ಮದ್ ಅಸಾಧಾರಣ ಮೇಧಾವಿ”. ನನಗೆ ಇನ್ನೂ ಒಂದು ಹೇಳಿಕೆ ತುಂಬಾ ಹಿಡಿಸಿತು ಅದೇನೆಂದರೆ; ‘ಲೇನ್ ಪೋನ್’ ಬರೆದಂತೆ “ಆತನದು ಮುಗಿಲೆತ್ತರದ ಆಶೋತ್ತರ ಆದರೆ ನೆಲ ಕಚ್ಚಿದ ಸಾಧನೆ”.
ನಮಗೆಲ್ಲರಿಗೂ ಇತಿಹಾಸ ಅಧ್ಯಯನದಲ್ಲಿ ನಗೆ ಮತ್ತು ನೆನಪಿನಲ್ಲಿ ಉಳಿದ ಮಹಮ್ಮದ್ ಬಿನ್ ತುಘಲಕ್ ಹುಚ್ಚುದೊರೆ ಎಂದೇ ಪರಿಚಿತ. ಈತನ ಬಗ್ಗೆ ನಾನಂತೂ ಸಾಲು ಸಾಲು ಉತ್ತರ ಬರೆದು ಉತ್ತಮ ಅಂಕ ಗಳಿಸಿದ್ದೆ. ಅದಕ್ಕೇನೋ ಆತುರದ ನಿರ್ಧಾರ, ತಪ್ಪು ನಿರ್ಣಯಗಳ ಮೇಲಿನ ಭರವಸೆ, ಅಕಾಲ ಯೋಜನೆಗಳನ್ನು ವಿಜಯಗೊಳಿಸುವ ಮೊಂಡು ವಾದ ಇವೆಲ್ಲೇ ಕಂಡರೂ ತಕ್ಷಣ ಮಹಮ್ಮದ್ ನೆನಪಾಗುತ್ತಾನೆ. ಈ ರೀತಿ ಅನ್ವಯಿಕ ಅಭಿಪ್ರಾಯಗಳ ಸಾಫಲ್ಯತೆಗೋಸ್ಕರವೇ ಪಠ್ಯ ಇರುವುದು, ಹೌದಲ್ಲವೇ? ಸರಿ.
ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ ಹಸ್ತವು ಕರ್ನಾಟಕದಲ್ಲಿ ಜಯಗಳಿಸಿದ ರೀತಿ ಈಶ್ವರಿ ಪ್ರಸಾದರ “ಮಧ್ಯಯುಗದಲ್ಲಿ ಕಿರೀಟ ಧರಿಸಿದವರೆಲ್ಲಾ ಶ್ರೇಷ್ಠರು” ಎಂಬ ಮಾತಿಗೆ ಹತ್ತಿರವಿದೆ. ಸದ್ಯದ ಕರ್ನಾಟಕದ ರಾಜಕೀಯ ಸ್ಥಿತಿ ಮಧ್ಯಯುಗವೇ. ಇಲ್ಲೂ ಮಹಮ್ಮದೀಯರ ಆಳ್ವಿಕೆ ಪತಾಕೆ ಹಾರಿಸಿದೆ. ಒಳ್ಳೆಯ ಯೋಜನೆಗಳೇ ಅಂತಿವೆ ಆದರೆ ಬೆಳಗೆದ್ದರೆ ನೋಡುತ್ತಿದ್ದೀವಲ್ಲ ಸಾಮಾನ್ಯರ ಗೋಳಾಟ, ಮೆಚ್ಚಿಕೊಂಡವರೇ ಚುಚ್ಚಿ ತ್ಯುಚ್ಛವಾಗಿ ಮಾತನಾಡುತ್ತಿದ್ದಾರೆ. ಫೋಟೋ ಆದಂತಿರುವ ಫಲಾನುಭವಿಗಳಿಗೆ ಯೋಜನೆಗಳೆಲ್ಲಾ ಪಿತೃಪಕ್ಷದ ಭಕ್ಷ್ಯ ಭೋಜನಗಳಾಗಿವೆ.
ಅಷ್ಟಕ್ಕೂ ಏನಿರಬಹುದು ಈ ಹುಚ್ಚುದೊರೆಯ ಯೋಜನೆಗಳು; ಮರೆತಿರುವವರೆಲ್ಲಾ ಕಿವಿಕೊಡಿ. ಮಹಮದನು ಮಧ್ಯ ಏಷ್ಯಾದ ಇರಾಕ್ ಮತ್ತು ಖುರಸಾನ್ಗಳನ್ನು ಗೆಲ್ಲಲು ಯೋಜನೆ ಹಾಕಿದ. ಇದಕ್ಕಾಗಿ ಮುಂಗಡವಾಗಿ ಮೂರು ಲಕ್ಷದ ಎಪ್ಪತ್ತು ಸಾವಿರ ಸೈನಿಕರನ್ನು ನೇಮಿಸಿಕೊಂಡು ಅವರಿಗೆ ಒಂದು ವರ್ಷದ ವೇತನವನ್ನು ಮೊದಲೇ ಕೊಟ್ಟುಬಿಟ್ಟನು. ಇಲ್ಲಿ ಆತನ ಪ್ರಾಮಾಣಿಕತೆ ಸರಿಯೇ ಆದರೆ ಪ್ರಾಯೋಗಿಕ ಜ್ಞಾನದ ಕೊರತೆಯಲ್ಲಿ ಮುಂದುವರೆದು ಆತ ಕುದುರೆ ಮತ್ತು ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಅಪಾರ ಹಣವ್ಯಯ ಮಾಡಿದ. ಆದರೆ ಅನಂತರ ಮಧ್ಯ ಏಷ್ಯಾ ದಂಡಯಾತ್ರೆ ಕಾಲದಲ್ಲಿ ಒದಗುವ ಸಾರಿಗೆ ಸಂಪರ್ಕ ಮತ್ತು ಆಹಾರದ ಕೊರತೆ ಹಾಗೂ ರಾಜಕೀಯ ಏರಿಳಿತವನ್ನು ಯೋಚಿಸಿ ಮಧ್ಯ ಏಷ್ಯಾ ದಂಡಯಾತ್ರೆಯನ್ನು ರದ್ದುಗೊಳಿಸಿದನು.
ಭಾರತ ಮತ್ತು ಚೀನಾ ನಡುವಣದ ಕರಾಜಲ್’ನ ದಂಡಯಾತ್ರೆಗೆ ಒಂದು ಲಕ್ಷ ಸೈನಿಕರನ್ನು ಖುಸ್ರು ಮಲ್ಲಕ್ನ ನೇತ್ರತ್ವದಲ್ಲಿ ಕಳುಹಿಸಲಾಗಿ ಕರಾಜಲ್’ನ ಹಿಮಾಲಯ ಪರ್ವತಗಳ ಅತಿಯಾದ ಚಳಿ, ಸಾಂಕ್ರಾಮಿಕ ರೋಗ ಹಾಗೂ ಆಹಾರದ ಕೊರೆತೆಗೆ ಸಿಕ್ಕ ಸೈನಿಕರು ಅಪಾರ ಸಂಖ್ಯೆಯಲ್ಲಿ ಹಸುನೀಗಿದರು. ಆ ದುರಂತ ಕಥೆಯನ್ನು ಹೇಳಲು ಕೇವಲ ಹತ್ತು ಮಂದಿ ಮಾತ್ರ ಹಿಂದಿರುಗಿದರು.
1326ರಲ್ಲಿ ತೆರಿಗೆ ಸುಧಾರಣೆಗಳ ನಿಟ್ಟಿನಲ್ಲಿ ಗಂಗಾ – ಯುಮುನಾ ನದಿಗಳ ಫಲವತ್ತಾದ ಬಯಲು ಪ್ರದೇಶವಾದ ದೋ-ಅಬ್ ಪ್ರಾಂತ್ಯದಲ್ಲಿ ಸುಲ್ತಾನನು ಸುಮಾರು ಹತ್ತು ಪಟ್ಟು ತೆರಿಗೆಯನ್ನು ಹೆಚ್ಚಿಸಿದ. ಹೆಚ್ಚಳಕ್ಕೆ ಕಾರಣಗಳನ್ನು ಈ ರೀತಿಯಲ್ಲಿ ಮುಂದಿಟ್ಟನು. ದೋ-ಅಬ್ ಪ್ರಾಂತ್ಯ ಹೆಚ್ಚು ಫಲವತ್ತಾಗಿದ್ದು ಅಲ್ಲಿನ ಜನ ಅಧಿಕ ಶ್ರೀಮಂತರಾಗಿ, ಸೋಮಾರಿಗಳಾಗಿ ದಂಗೆಗಳಲ್ಲಿ ತೊಡಗಿದ್ದಾರೆ. ಹಾಗಾಗಿ ಅವರ ಸೊಕ್ಕು ಮುರಿಯುವುದಾಗಿ ತೆರಿಗೆ ಹೆಚ್ಚಳವೆಂದು ತಿಳಿಸಿದ. ಕಾರಣವೇನೋ ಸರಿ ಆದರೆ ಆ ಸಂದರ್ಭದಲ್ಲಿ ದೋ-ಅಬ್ ಪ್ರಾಂತ್ಯ ಭೀಕರ ಕ್ಷಾಮಕ್ಕೆ ತುತ್ತಾಗಿ ಬಂಜರು ಭೂಮಿ ಹೆಚ್ಚಾಗಿತ್ತು. ರೈತರು ಕಂದಾಯ ಕೊಡಲಾಗುತ್ತಿರಲಿಲ್ಲ. ಹೀಗಿದ್ದರೂ ಕಂದಾಯ ಅಧಿಕಾರಿಗಳು ಬಲತ್ಕಾರದಿಂದ ತೆರಿಗೆ ಸಂಗ್ರಹಿಸುತ್ತಿದ್ದರಿಂದ ರೈತರು ಕಾಡುಗಳಲ್ಲಿ ತಲೆ ಮರಿಸಿಕೊಂಡರು. ಅದೇ ಪ್ರಾಂತ್ಯದ ಬರಣಿ ಚರಿತ್ರೆಕಾರ “ರೈತರ ಬೆನ್ನು ಮುರಿಯಲಾಯಿತು” ಎಂದು ಬರೆದ. ‘ಲೇನ್ ಪೋಲ್’ ಬರೆದಂತೆ; “ಕಂದಾಯ ಸಂಗ್ರಹದಲ್ಲಿ ವಿಫಲತೆ ಕಂಡ ಸುಲ್ತಾನ ಕೋಪದಿಂದ ಸಾವಿರಾರು ಅಮಾಯಕ ಹಿಂದೂಗಳನ್ನು ಮೃಗಗಳಂತೆ ಅರಣ್ಯದಲ್ಲಿ ಸುತ್ತುವರಿದು ಕೊಲ್ಲಿಸಿದನು”. ಕೊನೆಗೆ ತನ್ನ ಮೂರ್ಖ ತನವು ಅರಿವಾಗಿ ಜನರ ನೆರವಿಗೆ ಮಹಮದನು ದಾವಿಸಿದನು. ಅವರಿಗೆ ಸಾಲ ಸೌಲಭ್ಯ ಕೊಟ್ಟನು. ಕೆರೆ, ಕಾಲುವೆ, ರಸ್ತೆ, ಬಾವಿಗಳನ್ನು ನಿರ್ಮಿಸಿದನು, ಗಂಜಿ ಕೇಂದ್ರಗಳನ್ನು ತೆರೆದನು. ಆದರೆ ಆ ಪರಿಹಾರಗಳು ಬಹಳ ವಿಳಂಭವಾಗಿ ಜನತೆಗೆ ಮುಟ್ಟಲೇ ಇಲ್ಲ. ಹೀಗೆ ಮಾಡದೆ ಇನ್ನು ಹಲವು ಯೋಜನೆಗಳಲ್ಲಿ ಮುಂದಾಲೋಚನೆ ಪ್ರಜ್ಞೆ ಇದ್ದು ಕೇವಲ ಅಧಿಕಾರಿಗಳನ್ನು ಮಾತ್ರ ದೆಹಲಿಯಿಂದ ದೇವಗಿರಿಗೆ ಬದಲಾದ ರಾಜಧಾನಿಗೆ ವರ್ಗಾಯಿಸಿದ್ದರೆ, ಕೇವಲ ಸರ್ಕಾರಿ ಸ್ವಾಮ್ಯದಲ್ಲಿ ಮಾತ್ರ ನಾಣ್ಯ ಟಂಕಿಸಿದ್ದರೆ ಅವು ಯಶಸ್ವಿಯಾಗುತ್ತಿದ್ದವು. ಅಧಿಕಾರ ಮತ್ತು ಸಂಪತ್ತಿದೆ ಎಂದು ಸ್ವೇಚ್ಛೆಯಾಗಿ ನಡೆದುಕೊಂಡ ಮಹಮ್ಮದ್ ತನ್ನ ದಿವಾಳಿತನದ ಆಡಳಿತದಿಂದಾಗಿ ಇತಿಹಾಸದ ಪುಟಗಳಲ್ಲಿ ಹುಚ್ಚುದೊರೆಯಾಗಿ ಹೋದ.
ಗ್ಯಾರೆಂಟಿ ಗೃಹ ಜ್ಯೋತಿ, ಗ್ಯಾರೆಂಟಿ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿಯೋಜನೆ, ಯುವನಿಧಿ ಈ ಯೋಜನೆಗಳು ಮಹಮ್ಮದ್ ಆಶೋತ್ತರದ ದಿಟ್ಟ ಯೋಜನೆಗಳೇ ಎನಿಸಿದೆ ಜನತೆಗೆ. ಜನರ ಈ ಕೆಳಗಿನ ಉತ್ತರವೇ ಈ ಹಿಂದಿನ ಮಾತಿಗೆ ಪುಷ್ಟಿ. ಯಾರಿಗಪ್ಪ ಬೇಕು ಈ ಉಚಿತ ಬಸ್ ಪ್ರಯಾಣ, ಶಿಕ್ಷಣದಲ್ಲೋ, ಆಸ್ಪತ್ರೆಯಲ್ಲೋ ಉಚಿತಗಳನ್ನು ಕೊಟ್ಟಿದ್ದರೆ ಕ್ರಾಂತಿಕಾರಿ ಬೆಳವಣಿಗೆ ಆಗ್ತಿತ್ತು. ಅದ್ಬಿಟ್ಟು ಹತ್ತು ಬಸ್ ಇದ್ದ ಜಾಗಕ್ಕೆ ಒಂದ್ ಬಸ್ ಬುಟ್ಟು ಉಚಿತ ಅನ್ಕೊಂಡು ಬಸ್ ಒಳಗೇ ನರಕ ತೋರಿಸ್ತಾವ್ರೆ ಕಣಣ್ಣ. ಇನ್ನೊಬ್ಬ ವಾಸ್ತವ ಸತ್ಯದೊಂದಿಗೆ ವ್ಯಂಗ್ಯವಾಗಿ ನಮ್ಮ ಹೆಂಗ್ಸ್ರು ಇವತ್ತೋಗಿ ನಾಳೆ ಬರ್ತೀನಿ ಅಂತ ಧರ್ಮಸ್ಥಳಕ್ಕೋಗಿ ಒಂದು ವಾರ ಆಯ್ತು ಬುದ್ದಿ, ನಮ್ಮ ಕಷ್ಟ ಯಾರಿಗೇಳಣೆ, ಯಾರ್ತಾವು ಮಲಿಕಲಣೇ ಎನ್ನುವಾಗ ವಿಧಿಯಿಲ್ಲದೆ ನಕ್ಕುಬಿಟ್ಟೆ. ಆಟೋ ಚಾಲಕರು ಮೊದಲೇ ಬೀದಿಗೆ ಬಿದ್ದವರು ನಾವು ಈ ಬಾರಿ ಬೀದಿಯಲ್ಲೇ ಸಂಸಾರವನ್ನು ಊಡಬೇಕಾಗಿದೆ. ಆನೆ ತಾನೆ ತನ್ನ ತಲೆ ಮೇಲೆ ಮಣ್ಣು ಎಳ್ಕೊಳ್ಳೋ ಹಾಗೆ ಆಯ್ತು ಸಾರ್…ನಮ್ಮ ಪರಿಸ್ಥಿತಿ.. ಈ ಚುನಾವಣೆಯಲ್ಲಿ ಅಂತ ತಲೆ ಚೆಚ್ಚಿಕೊಳ್ಳುವ ಆಟೋಚಾಲಕನ ಮಾತಿಗೆ ನನ್ನ ಕಿವಿ ಯಾಕಾದ್ರು ತೆರೆದಿತ್ತೋ ಎನಿಸಿತು.
ಇಲ್ಲೇ ಗಲ್ಲಿಲೊಬ್ಬ 200 ಯೂನಿಟ್ ಫ್ರೀ ಆದ್ಮೇಲೆ, ಆಚೆ ತಿಂಗಳಿಗಿಂತ ಈಚೆ ತಿಂಗಳಲ್ಲೇ 500ಕ್ಕೆ 1000 ರೂಪಾಯಿ ಬಿಲ್ ಬಂದದೆ ಅಂತ ಬಿಲ್ ಕಲೆಕ್ಟರ್’ನ ಕತ್ತಿನ ಪಟ್ಟಿ ಇಡ್ಕೊಂಡ್ ನಿಂತಿದ್ದ ನಾನೇ ಮಿಕ ಮಿಕನೆ ನೋಡ್ತಿದ್ದೆ. ಅಲ್ಲೊಂದು ಗುಂಪು ಇನ್ನೂ ಹೇಳಿದಷ್ಟು ಉಚಿತ ಅಕ್ಕಿ ಸರಿಯಾಗಿ ಸಿಕ್ಕೇ ಇಲ್ಲ ಆಗಲೇ ಅನ್ನಭಾಗ್ಯ ಯೋಜನೆಯ ಅಕ್ಕಿಮಾರಾಟ ಮಳಿಗೆ ತೆಗೆದು ಕುಂತವರೆ. ಈಕಡೆ ಮಳೆ ಬರದೆ ನಮ ಜೀವನ ಎಕ್ಕುಟ್ಟೋಗದೆ ಸಾ.. ಇದರ ಮಧ್ಯೆ ಎಲ್ಲಾ ಬೆಲೆ ಹೆಚ್ಚಿಸ್ತಾವ್ರಲ್ಲ ಸಾ.. ಸಾಲಸೋಲ ಹೆಂಗ್ ತೀರ್ಸದು, ಜೀವ್ನ ಹೆಂಗ್ ಮಾಡಾದು, ವಸಿ ನೀವೇ ಹೇಳಿ ಸಾ..ನಾ ಕಾಡ್ಗೋಗಂಗೆ ಆಗದೆ ಸಾ.. ಎಂದು ರೈತ ಹೇಳುವಾಗ ಮಹಮ್ಮದನ ದೋ – ಅಬ್ ಪ್ರಾಂತ್ಯದ ತೆರಿಗೆ ವಸೂಲಿ ನೆನಪಿಗೆ ಬಂತು.
ಉಚಿತಕ್ಕಿಂತ ಒಂದಷ್ಟು ಪ್ರಾಮಾಣಿಕ ಬೆಲೆ ಜನರಿಂದ ಸರ್ಕಾರದ ಬೊಕ್ಕಸಕ್ಕೆ ಹೋಗಲಿ. ಸರ್ಕಾರವು ದಕ್ಷವಾಗಿ ಆಡಳಿತ ನಡೆಸಲಿ, ರೈತರಿಗೆ ಬೆಂಬಲ ಬೆಲೆ, ಸಾಲ ಬಡ್ಡಿ ಮನ್ನ, ಸೂಕ್ತ ತೆರಿಗೆ, ಸೂಕ್ತ ವಸ್ತುಬೆಲೆ, ಉಚಿತ ಶಿಕ್ಷಣ, ಅಗತ್ಯಕಷ್ಟೇ ಆಸ್ಪತ್ರೆಯ ಅನುಕೂಲತೆಗಳು, ಅಭಿವೃದ್ಧಿ ಸಾರ್ವಜನಿಕ ಆಸ್ತಿಗಳು, ಲಂಚಗುಳಿತನದ ನಿರ್ಮೂಲನೆ, ಉದ್ಯೋಗ, ಸರ್ಕಾರಿ ಶಾಲೆಯ ಹೆಚ್ಚಳ, ಹೀಗೆ ಸರ್ಕಾರದ ಯೋಜನೆಗಳಾಗಲಿ. ನಮ್ಮಿಂದಲೂ ಶ್ರಮವಾಗಬೇಕು ದೇಶಕ್ಕೂ ಹಿತವಾಗಬೇಕು ಸರ್ಕಾರಕ್ಕೂ ಹಗುರಾಗಬೇಕು ಗಾಂಧಿ ಕನಸು ನನಸಾಗಬೇಕು. ಇದಷ್ಟೇ ಇದಷ್ಟೇ ಮಹಮ್ಮದ್ ಯೋಜನೆಗಳ ಬೆನ್ನತ್ತಿರುವವರಿಗೆ ಸಂದೇಶ.

ಚಿಮಬಿಆರ್(ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ
ಎಚ್.ಡಿ ಕೋಟೆ ಮೈಸೂರು.
ಮೊ.ಸಂಖ್ಯೆ:- 8884684726
Gmail I’d :- manjunathabr709@gmail.com