ಚಾಮರಾಜನಗರ: ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ವಾರದ ಮೊದಲದಿನವಾದ ಸೋಮವಾರ ಜನ ಅಗತ್ಯವಸ್ತುಗಳ ಖರೀದಿಗೆ ಮುಗಿಬಿದ್ದ ದೃಶ್ಯ ಜಿಲ್ಲೆಯ ನಗರಪ್ರದೇಶಗಳಲ್ಲಿ ಕಂಡು ಬಂದಿತು.
ಚಾಮರಾಜನಗರ ಟಾಸ್ಕ್ ಪೋರ್ಸ್ ಸೂಚನೆಯಂತೆ ಜಿಲ್ಲಾಡಳಿತ ವಾರದ ಕೊನೆಯ ನಾಲ್ಕು ದಿನಗಳ ಸಂಪೂರ್ಣ ಲಾಕ್ ಡೌನ್ ಹೇರಿತ್ತು. ವಾರದ ಕೊನೆಯ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಗೆ ತೆರೆ ಬೀಳುತ್ತಿದ್ದಂತೆಯೇ ವಾರದ ಮೊದಲ ದಿನವಾದ ಸೋಮವಾರ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿನ ಅಂಗಡಿ ಬೀದಿಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು.
ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಜನರು ಅಗತ್ಯ ವಸ್ತುಗಳ ಖರೀದಿಗಾಗಿ ದ್ವಿಚಕ್ರವಾಹನದಲ್ಲಿ ಪಟ್ಟಣಗಳಿಗೆ ಆಗಮಿಸಿದ್ದರು. ಅಂಗಡಿ ಬೀದಿಗಳಲ್ಲಿ ವಾಹನ ಸಂಚಾರವೂ ಅಧಿಕವಾಗಿದ್ದರಿಂದ ಟ್ರಾಫಿಕ್ ಜಾಮ್ ಏರ್ಪಟ್ಟಿತ್ತು. ಜನ ಸಾಮಾಜಿಕ ಅಂತರ ಮರೆತಿದ್ದು ಎದ್ದು ಕಾಣುತ್ತಿತ್ತು. ಬೆಳಗ್ಗೆಯಿಂದಲೇ ಸಾರ್ವಜನಿಕರು ದಿನಸಿ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ತಮಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮುಂದಾದರು. ಬೆಳಗ್ಗೆ ೮.೩೦ರಲ್ಲಿ ಮತ್ತಷ್ಟು ಸಾರ್ವಜನಿಕರು ರಸ್ತೆಗಿಳಿದ್ದರಿಂದ ಅಂಗಡಿ ಬೀದಿಗಳಲ್ಲಿ ಜನ ಜಾತ್ರೆ ಏರ್ಪಟ್ಟಿತ್ತು.
ದಿನಸಿ ಅಂಗಡಿ, ತರಕಾರಿ ಅಂಗಡಿ, ಸೊಪ್ಪು ಖರೀದಿಯಲ್ಲಿ ಸಾರ್ವಜನಿಕರು ಮುಂದಾಗಿದ್ದರು. ಸುರಕ್ಷಾ ತಂಡದವರು ಆಗಮಿಸಿ ಸಂಚಾರ ನಿಯಂತ್ರಣಕ್ಕೆ ಮುಂದಾದರೂ ಕೋರೊನಾ ಸೋಂಕಿಗೂ ಸೊಪ್ಪು ಹಾಕದೆ ಜನತೆ ನೂಕು ನುಗ್ಗಲಿನಲ್ಲೇ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಇದನ್ನು ನೋಡಿದ ಪ್ರಜ್ಞಾವಂತರು ಲಾಕ್ ಡೌನ್ ಮಾಡಿ ಪ್ರಯೋಜನ ಎಂದು ಮಾತನಾಡಿಕೊಳ್ಳುತ್ತಿದ್ದರು.

By admin